ಕನ್ನಡಪ್ರಭ ಸಿನಿವಾರ್ತೆ
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಚಿತ್ರತಂಡ ಪ್ರಯಾಣಿಸುತ್ತಿದ್ದ ವಿಮಾನ ಹವಾಮಾನ ವೈಪರೀತ್ಯದಿಂದ ತುರ್ತು ಭೂಸ್ಪರ್ಶ ಮಾಡಿದ್ದು, ಈ ವಿಮಾನ ಅವಘಡದಲ್ಲಿ ಧ್ರುವ ಸರ್ಜಾ ಮತ್ತು ಮಾರ್ಟಿನ್ ಚಿತ್ರತಂಡ ಯಾವುದೇ ತೊಂದರೆಯಿಲ್ಲದೆ ಪಾರಾಗಿದ್ದಾರೆ.
ಈ ಕುರಿತು ವಿಡಿಯೋ ಮೂಲಕ, ‘ಕೂದಲೆಳೆಯ ಅಂತರದಿಂದ ವಿಮಾನ ಅವಘಡದಿಂದ ಪಾರಾಗಿದ್ದೇವೆ. ಇದು ಮೈನಡುಗಿಸಿದ ಅನುಭವ. ಜೀವನದಲ್ಲಿ ಇಂಥ ಭಯಾನಕ ಅನುಭವ ಆಗಿರಲಿಲ್ಲ.
ದೇವರಿಗೆ ನಾವು ಧನ್ಯವಾದ ಹೇಳಬೇಕು’ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ. ‘ಮಾರ್ಟಿನ್’ ಚಿತ್ರತಂಡ ಪ್ರಯಾಣಿಸುತ್ತಿದ್ದ ವಿಮಾನ ಶ್ರೀನಗರದಿಂದ ದೆಹಲಿಗೆ ಮರಳುತ್ತಿತ್ತು.
ದಾರಿ ಮಧ್ಯೆ ಹವಾಮಾನ ವೈಪರೀತ್ಯದಿಂದ ತುರ್ತು ಭೂಸ್ಪರ್ಶ ಮಾಡಬೇಕಾಯ್ತು. ‘ಪೈಲೆಟ್ ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲೇ ಅಪಘಾತವಾಗುವುದು ತಪ್ಪಿದೆ’ ಎಂದು ಚಿತ್ರತಂಡ ಹೇಳಿದೆ.
ಇತ್ತೀಚೆಗೆ ಮುಂಬೈಯಿಂದ ಹೈದರಾಬಾದ್‌ಗೆ ವಿಮಾನದಲ್ಲಿ ತೆರಳುವಾಗ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೂ ಇಂಥದ್ದೇ ಅನುಭವವಾಗಿತ್ತು.