ಕನ್ನಡಪ್ರಭ ಸಿನಿವಾರ್ತೆ ರಾಜವರ್ಧನ್ ನಟನೆಯ ‘ಗಜರಾಮ’ ಚಿತ್ರದ ಐಟಂ ಹಾಡಿನಲ್ಲಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಚಿತ್ರೀಕರಣದ ಸೆಟ್‌ನಲ್ಲಿಯೇ ಸುದ್ದಿಗೋಷ್ಠಿ ನಡೆಯಿತು. ‘ಇದು ನಮ್ಮ ಚಿತ್ರದಲ್ಲಿ ಬರುವ ವಿಶೇಷ ಹಾಡು. ಅದ್ದೂರಿಯಾಗಿ ಬರಲಿದೆ. ನೃತ್ಯ ನಿರ್ದೇಶಕ ಧನು ಮಾಸ್ಟರ್ ಸೊಗಸಾಗಿ ಚಿತ್ರೀಕರಿಸಿದ್ದಾರೆ. ಮನೋಮೂರ್ತಿ ಸಂಗೀತ, ಚಂದ್ರಶೇಖರ್ ಛಾಯಾಗ್ರಹಣ ಹಾಡಿನ ಮೆರುಗು ಹೆಚ್ಚಿಸಿದೆ’ ಎಂದು ರಾಜವರ್ಧನ್ ಹಾಗೂ ರಾಗಿಣಿ ಹೇಳಿದರು. ನಿರ್ದೇಶಕ ಸುನಿಲ್ ಕುಮಾರ್, ‘ಈ ವಿಶೇಷ ಹಾಡಿನೊಂದಿಗೆ ಚಿತ್ರೀಕರಣ ಮುಕ್ತಾಯ ಆಗುತ್ತಿದೆ. ನಮ್ಮ ಚಿತ್ರದ ಹಾಡಿನಲ್ಲಿ ನಟಿಸಲು ಒಪ್ಪಿಕೊಂಡ ರಾಗಿಣಿ ಅವರಿಗೆ ಕೃತಜ್ಞತೆ’ ಎಂದರು. ಮನೋಮೂರ್ತಿ, ‘ಸಿನಿಮಾದಲ್ಲಿ ಒಟ್ಟು 5 ಹಾಡುಗಳಿವೆ. ಈ ಸಾಂಗ್ ಅದ್ಭುತವಾಗಿ ಮೂಡಿಬಂದಿದೆ. ಈ ಥರ ಹಾಡು ಮಾಡದೆ ಬಹಳ ವರ್ಷಗಳೇ ಆಗಿದೆ’ ಎಂದರು. ಶಿಷ್ಯ ದೀಪಕ್ ಪೊಲೀಸ್ ಪಾತ್ರದಲ್ಲಿ, ತೆಲುಗಿನ ಖ್ಯಾತ ಖಳನಟ ಕಬೀರ್ ಸಿಂಗ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ನಟಿ ತಪಸ್ವಿನಿ, ನಿರ್ಮಾಪಕ ನರಸಿಂಹಮೂರ್ತಿ, ಕೆ ಎಸ್ ಚಂದ್ರಶೇಖರ್ ಚಿತ್ರದ ಕುರಿತು ಮಾತನಾಡಿದರು.