ಪ್ರಿಯಾ ಕೆರ್ವಾಶೆ
- ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ, ಅದು ನಿಮಗೆ ಹೇಗೆ ಕನೆಕ್ಟ್ ಆಗಿದೆ?
ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ನನ್ನದು ಸಹನಾ ಅನ್ನೋ ಪಾತ್ರ. ಆಕೆ ಕೆರಿಯರ್‌ನ ವಿಚಾರದಲ್ಲಿ ಏನೇ ಸಮಸ್ಯೆ ಎದುರಾದರೂ ತಾಳ್ಮೆಯಿಂದ ನಿಭಾಯಿಸುತ್ತಾಳೆ. ಆದರೆ ಫ್ಯಾಮಿಲಿ ವಿಷಯದಲ್ಲಿ ಅಸಹನೆಯ ಮೂಟೆ. ಸಣ್ಣಪುಟ್ಟದಕ್ಕೂ ರೇಗುತ್ತಾಳೆ. ಇದು ನನ್ನ ಸ್ವಭಾವಕ್ಕೆ ತದ್ವಿರುದ್ಧ. ನನಗೆ ಕೆರಿಯರ್ ಮಹತ್ವದ್ದೇ, ಆದರೆ ಮನೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ಆದರೆ ಸಹನಾ ಪ್ರೀತಿ, ಸಂಬಂಧಕ್ಕೆ ಕರಗ್ತಾಳೆ. ಈ ಗುಣ ಆ ಪಾತ್ರದಲ್ಲಿ ಕನೆಕ್ಟ್ ಆಗಲು ಸಹಾಯ ಮಾಡಿತು.
ಹೆಣ್ಣು ಅಂದರೆ ಸಹನೆ, ಕ್ಷಮೆ ಅಂತೆಲ್ಲ ಕೆಲವು ಗುಣಗಳನ್ನು ಹೆಣ್ಣಿನ ಮೇಲೆ ಹೇರಿ ವೈಭವೀಕರಿಸುತ್ತಿದ್ದಾರಾ?
ಈ ಬಗ್ಗೆ ಯೋಚಿಸಿರಲಿಲ್ಲ. ಆದರೆ ಭೂಮಿಯನ್ನು ಹೆಣ್ಣಿಗೆ ಹೋಲಿಸುವುದಕ್ಕೂ ಕಾರಣ ಇದೆ. ಭೂಮಿಗೆ ಏನೇ ಅನ್ಯಾಯ ಮಾಡಿದರೂ ಸಹಿಸುತ್ತಾಳಂತೆ, ಆದರೆ ಹರಿನಾಮ ಮರೆತರೆ ಅವಳಿಗೆ ಕೋಪ ಬರುತ್ತಂತೆ. ಗಂಡ, ಹೆಂಡತಿ ಸಂಬಂಧದಲ್ಲೂ, ಹೆಂಡತಿ ತನಗೆ ಏನಂದರೂ ಸಹಿಸ್ತಾಳೆ, ಗಂಡನಿಗೆ ಬೈದರೆ ಕಿಡಿಕಿಡಿಯಾಗ್ತಾಳೆ. ನನ್ನ ವಿಚಾರದಲ್ಲಿ ಹೇಳೋದಾದರೆ, ನಾನು ನನಗೆ ಏನಂದರೂ ಸಹಿಸಿಕೊಳ್ತೀನಿ, ಆದರೆ ನನ್ನ ತಂಗಿ, ಅಪ್ಪ, ಅಮ್ಮನ ಬಗ್ಗೆ ತಪ್ಪಾಗಿ ಮಾತನಾಡಿದರೆ ಸುಮ್ಮನಿರೋದಿಲ್ಲ.
ಅಂಕಿತಾ ಎಂಥಾ ಪ್ರತಿಭಾವಂತೆ ಅನ್ನೋದನ್ನು ತೋರಿಸಿದ ಸಿನಿಮಾ ಇಬ್ಬನಿ ತಬ್ಬಿದ ಇಳೆಯಲಿ. ಆಮೇಲೆ ನಿಮಗೆ ಅಂಥಾ ಇಂಟೆನ್ಸ್ ಪಾತ್ರ ಸಿಕ್ಕಿದಂತಿಲ್ಲ..
ಹೌದು. ಅನಾಹಿತ ಒನ್ಸ್ ಇನ್ ಲೈಫ್‌ಟೈಮ್ ಪಾತ್ರ. ನನ್ನ ಮನಸ್ಸಿನ ಭಾಗದಂತಿದ್ದ ಪಾತ್ರವದು. ಹಾಗೆಂದು ಅಂಥಾ ಪಾತ್ರವನ್ನೇ ಬಯಸೋದೂ ತಪ್ಪಾಗುತ್ತೆ. ನಾನು ಇವತ್ತಿಗೂ ದೇವರ ಮುಂದೆ ನಿಂತು ಬೇಡಿಕೊಳ್ಳುವುದು, ನನಗೆ ಆ್ಯಕ್ಟಿಂಗ್ ಮಾಡೋದಕ್ಕೊಂದು ಚಾನ್ಸ್ ಕೊಡು ಅಂತ. ದೊಡ್ಡ ಸಿನಿಮಾವೋ, ಸಣ್ಣದೋ ಕೇಳಲ್ಲ. ಆದರೂ ಕೆಲವೊಮ್ಮೆ ಪಾತ್ರಕ್ಕೆ ಮಹತ್ವ ಸಿಗದಾಗ ಕಸಿವಿಸಿ ಆಗುತ್ತೆ. ಮುಂದೆ ಅನಾಹಿತ ಥರದ್ದೇ ಪಾತ್ರ ಸಿಗುವ ಭರವಸೆಯಲ್ಲಿ ಮುಂದುವರಿಯುತ್ತೇನೆ.
ಸೆಲೆಬ್ರಿಟಿತನ ಬಿಟ್ಟು ಸರಳತೆ ಅಪ್ಪಿಕೊಂಡಿದ್ದು ಹೇಗೆ ಮತ್ತು ಯಾಕೆ?
ನನಗೆ ಗೊತ್ತಿರೋದು ಅದೊಂದೇ. ಈಗಲೂ ಅಮ್ಮ ಕೊತ್ತಂಬರಿ ಸೊಪ್ಪು ತಗೊಂಡು ಬಾ ಅಂದರೆ ತಗೊಂಡು ಬರಲೇ ಬೇಕು. ನಮ್ಮನೆಯ ರೂಲ್ ಅದು. ಅದಕ್ಕೂ ಗಾಡಿಲೇ ಹೋಗಬೇಕಾ ಅಂತ ಅಮ್ಮ ಕೇಳಿದರೆ, ನಡೆದುಕೊಂಡೇ ಹೋಗ್ತೀನಿ. ಇವತ್ತಿಗೂ ನನಗೂ ನನ್ನ ತಂಗಿಗೂ ಲಕ್ಸುರಿ ಅಂದರೆ ಕಾಫಿ ಡೇಗೆ ಹೋಗಿ ಕೋಲ್ಡ್ ಕಾಫಿ ಕುಡಿಯೋದು.
ಸಿನಿಮಾದಲ್ಲಿ ನಿಮ್ಮ ಗುರಿ ಏನು? ಯಶ್ ಹೇಳ್ತಾರಲ್ಲ ಗುರಿ ಇಟ್ಟು ಆ ಲೆವಲ್ ರೀಚ್ ಆಗ್ತೀನಿ ಅಂತ..
ಒಳ್ಳೊಳ್ಳೆ ಸಿನಿಮಾ ಮಾಡಬೇಕು ಅನ್ನೋದೇ ಗುರಿ. ಈ ಲೆವೆಲ್‌ಗೆ ರೀಚ್ ಆಗ್ಬೇಕು ಅನ್ನೋದಿಲ್ಲ. ಇನ್ನೊಂದು ಇಪ್ಪತ್ತು, ಮೂವತ್ತು ವರ್ಷಗಳಾದ ನಂತರ ನಾನು ಹೇಗಿದ್ದೆ ಅಂತ ನನ್ನನ್ನೇ ನಾನು ನೋಡಿಕೊಂಡಾಗ ನಾನು ಮಾಡಿದ ಪಾತ್ರದ ಬಗ್ಗೆ ತೃಪ್ತಿ ಇರಬೇಕು, ಯಾವ ವಿಷಾದವೂ ಇಲ್ಲದೇ ಖುಷಿ ಪಡಬೇಕು. ನಾನು ಫೇಮಸ್ ಆಗಿಲ್ಲ ಅನ್ನೋದು ನೋವು ಕೊಡಲ್ಲ, ಆ ಆಫರ್ ಬಂದಿತ್ತು, ನಾನು ತಿರಸ್ಕರಿಸಿಬಿಟ್ಟೆ, ನಾನಾಗಿದ್ದರೆ ಆ ಪಾತ್ರ ಇನ್ನೂ ಚೆನ್ನಾಗಿ ಮಾಡಿರ್ತಿದ್ದೆ ಅನ್ನೋದು ಬೇಜಾರು ತರಿಸುತ್ತೆ.
ಜಸ್ಟ್ ಮ್ಯಾರೀಡ್ ಹೈಲೈಟ್ಸ್ ಬಗ್ಗೆ?
ಮ್ಯೂಸಿಕ್. ಅಜನೀಶ್ ಲೋಕನಾಥ್ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ಕೊಟ್ಟವರು. ಸಿನಿಮಾದ ಒಂದೊಂದು ಹಾಡೂ ಒಂದೊಂದು ಶೈಲಿಯಲ್ಲಿದೆ. ಶೈನ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕನಾಗಿರುವ ಮೊದಲ ಸಿನಿಮಾ ಇದು. ದೇವರಾಜ್, ಶ್ರುತಿ, ಮಾಳವಿಕಾ, ಅಚ್ಯುತ್ ಕುಮಾರ್ ಇದ್ದಾರೆ. ಈಗಿನ ಕಾಲದ ಜೆನ್ ಜೀ ಕಿಡ್ಸ್‌ಗಳ ಮದುವೆಯ ಬಗೆಗಿನ ಅಭಿಪ್ರಾಯವನ್ನು ತೋರಿಸಿದ್ದೀವಿ.
ಸಿನಿಮಾ ಜೊತೆಗಿನ ಮೆಮೊರಿ?
ಶೈನ್ ಶೆಟ್ಟಿ ನಮ್ಮ ಸೆಟ್‌ನಲ್ಲಿ ಸ್ಟ್ರೆಸ್ ಬಸ್ಟರ್ ಆಗಿದ್ದರು. ಸಣ್ಣ ರೇಗುವಿಕೆಯೂ ಇಲ್ಲದ ನಿರ್ದೇಶಕರಿಂದ ಬಹಳ ಕಲಿತಿದ್ದೇನೆ. ಲೈಫಲ್ಲೇ ಮರೆಯಲಾಗದ್ದು ಅಂದರೆ, ನಾನು ಪಾತ್ರವಾಗಿ ಮದುವೆ ಮಂಟಪದಲ್ಲಿ ರೆಡಿ ಆಗಿ ಕೂತಿದ್ದಾಗ ಶೂಟಿಂಗ್ ಅಂತ ಗೊತ್ತಿದ್ದರೂ ನನ್ನ ಅಮ್ಮ ನನ್ನನ್ನು ನೋಡುತ್ತಿದ್ದ ರೀತಿ.. ಅಮ್ಮನ ಕಣ್ಣಲ್ಲಿದ್ದ ಖುಷಿ, ಎಗ್ಸೈಟ್‌ಮೆಂಟ್. ಅಮ್ಮನ ಆ ಲುಕ್ ಯಾವತ್ತೂ ಮರೆಯಲ್ಲ.