ಅನೀಶ್ ತೇಜೇಶ್ವರ್, ಶ್ರಾವ್ಯ ರಾವ್ ನಟನೆಯ ಮಾಯಾನಗರಿ ಸಿನಿಮಾ ವಿಮರ್ಶೆ.
ಮಾಯಾನಗರಿ
ನಿರ್ದೇಶನ: ಶಂಕರ್ ಆರಾಧ್ಯತಾರಾಗಣ: ಅನೀಶ್ ತೇಜೇಶ್ವರ್, ಶ್ರಾವ್ಯ ರಾವ್, ತೇಜು, ಶಂಕರ್ ಆರಾಧ್ಯ, ಚಿಕ್ಕಣ್ಣ, ದ್ವಾರಕೀಶ್, ಶರತ್ ಲೋಹಿತಾಶ್ವರೇಟಿಂಗ್: 3ಆರ್.ಎಸ್.ಏನೋ ಒಂದು ಹುಡುಕುತ್ತಾ ಹೊರಟಾಗ ಮತ್ತಿನ್ನೇನೋ ಆಗುತ್ತದೆ. ಆಗ ಕತೆ ಶುರುವಾಗುತ್ತದೆ. ಈ ಸಿನಿಮಾದಲ್ಲೊಬ್ಬ ಸಿನಿಮಾ ಹಂಬಲದ ತರುಣ. ಅವನಿಗೊಂದು ಸಿನಿಮಾ ಮಾಡಬೇಕು ಎಂಬಾಸೆ. ಕನಸು ಮುರಿದಾಗ, ಪ್ರೇಮ ಮುನಿದಾಗ, ನಿರಾಸೆ ಆವರಿಸಿದಾಗ ಅವನು ಕತೆ ಹುಡುಕಿಕೊಂಡು ಹೋಗುವಲ್ಲಿಗೆ ಈ ಸಿನಿಮಾದ ಕತೆ ಶುರುವಾಗುತ್ತದೆ. ಅಲ್ಲಿಗೆ ಈ ಕತೆಗೆ ವೇಗ ಸಿಗುತ್ತದೆ.ಈ ಹುಡುಕಾಟದಲ್ಲಿ ಅಚ್ಚರಿ, ಆತಂಕ, ನೋವು, ದುರಾಸೆ, ಅತಿಮಾನುಷತೆ ಎಲ್ಲವೂ ಸಿಗುತ್ತದೆ. ಅವೆಲ್ಲವನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವುದು ನಿರ್ದೇಶಕರ ಸಿನಿಮಾ ಶ್ರದ್ಧೆಗೆ ಸಾಕ್ಷಿ. ಮೇಲ್ನೋಟಕ್ಕೆ ಸಾಮಾನ್ಯ ಕತೆ ಅನ್ನಿಸಿದರೂ ಇದೊಂದು ಆಸೆ ಮತ್ತು ದುರಾಸೆಯ ಕತೆ. ಆಸೆಯಿಂದ ಹೋಗುವ ನಾಯಕನಿಗೆ ದುರಾಸೆಯ ಜನರು ಸಿಕ್ಕಿ ಆ ತಿರುವು ಮುರುವುಗಳಲ್ಲಿ ದಡ ಸೇರುವ ಈ ಕಥೆ ಕುತೂಹಲಕರವಾಗಿ ಸಾಗುತ್ತದೆ. ಅಲ್ಲಲ್ಲಿ ಎದುರಾಗುವ ಟ್ವಿಸ್ಟುಗಳು ವೇಗಕ್ಕೆ ಜೊತೆಯಾಗಿವೆ. ಮಧ್ಯದಾರಿಯಲ್ಲಿ ಸಿಗುವ ಚಿಕ್ಕಣ್ಣ, ಅವರ ಟೈಮಿಂಗ್‌ನಿಂದ ನಗಿಸುತ್ತಾರೆ. ಕಲಾವಿದರು ಅವರವರ ಪಾತ್ರವೇ ಆಗಿ ನೋಡುಗನನ್ನು ಹಗುರಾಗಿಸುತ್ತಾರೆ.
ನಿರ್ದೇಶಕರಿಗೆ ತಾನು ಏನು ಹೇಳಬೇಕು ಎಂಬುದರ ಸ್ಪಷ್ಟತೆ ಇದೆ. ಅದಕ್ಕೆ ತಕ್ಕಂತೆ ಚಿತ್ರಣವಿದೆ. ಬರವಣಿಗೆಯಲ್ಲಿ ಏರು ತಗ್ಗುಗಳಿವೆ. ಕುತೂಹಲ ಉಳಿಸುವ ಗುಣವಿದೆ. ಅದಕ್ಕೆ ಜೊತೆಯಾಗುವಂತೆ ಅನೀಶ್ ಹಲವು ನಟನಾ ವೈವಿಧ್ಯಗಳೊಂದಿಗೆ ಮಿಂಚಿದ್ದಾರೆ. ಪಾತ್ರವರ್ಗ, ತಾಂತ್ರಿಕ ವರ್ಗ ಪೂರಕವಾಗಿ ಕೆಲಸ ಮಾಡಿವೆ.ಇದೊಂದು ಹಾರರ್ ಛಾಯೆಯಲ್ಲಿ ಮೂಡಿಬಂದಿರುವ ಹುಡುಕಾಟದ ಕತೆ. ಆಸೆ- ದುರಾಸೆಯ ಹೋರಾಟದ ಕತೆ. ಸಾಮಾನ್ಯವಾಗಿ ಕಾಣಿಸುತ್ತಾ ಅಸಾಮಾನ್ಯವಾಗಿ ಬೆಳೆದಂತೆ ಕಾಣುವ ಕತೆ.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.