- ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ----
ನಗರದ ಪಿಕೆಟಿಬಿ ಅಸ್ಪತ್ರೆ ಆವರಣದಲ್ಲಿ ಮೈಸೂರು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಫೆರಿಫೆರಲ್ ಕ್ಯಾನ್ಸರ್ ಕೇಂದ್ರ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸೇರಿದ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬೆಂಗಳೂರು ನಗರವನ್ನು ಬಿಟ್ಟರೆ ಅತಿ ಹೆಚ್ಚು ಬೆಳವಣಿಗೆ ಆಗುತ್ತಿರುವ ನಗರ ಮೈಸೂರು. ಬೆಂಗಳೂರು ಮೈಸೂರು ನಡುವೆ 140 ಕಿ.ಮೀ. ಅಂತರ ಇದೆ. ಬೆಂಗಳೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಇದೆ. ಅಲ್ಲಿ ಹೆಚ್ಚಿನ ಒತ್ತಡ ಇದೆ. ಅಲ್ಲಿನ ಒತ್ತಡ ಕಡಿಮೆ ಮಾಡಲು ಜಿಲ್ಲಾ ಕೇಂದ್ರಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭ ಮಾಡಬೇಕು. ನಾನು ಡಾಕ್ಟರ್ ಆಗಬೇಕು ಎಂದು ನಮ್ಮ ತಂದೆಯ ಆಸೆ ಇತ್ತು. ನನಗೆ ಡಾಕ್ಟರ್ ಆಗುವಷ್ಟು ಅಂಕ ಬರಲಿಲ್ಲ. ನಾನು ಡಾಕ್ಟರ್ ಆಗಿದ್ದರೆ ಇಂದು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಅವರು ಸ್ಮರಿಸಿದರು.ವೈದ್ಯ ವೃತ್ತಿಯು ಸಮಾಜ ಸೇವೆ ಮಾಡಲು ಉತ್ತಮ ವೃತ್ತಿ. ಬಡವರಿಗೆ ಉಚಿತ ಹಾಗೂ ಉತ್ತಮ ಚಿಕಿತ್ಸೆ ನೀಡಿದರೆ ಅವರು ನಿಮ್ಮನ್ನು ನೆನೆದುಕೊಳ್ಳುತ್ತಾರೆ. ಜಯದೇವ ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡುತ್ತಾರೆ ಎಂದು ಜನರೇ ಹೇಳುತ್ತಾರೆ. ಅಲ್ಲಿ ಉತ್ತಮ ಸೇವೆ ಸಿಗುವಾಗ ಬೇರೆ ಆಸ್ಪತ್ರೆಗಳಲ್ಲಿ ಕೂಡ ಉತ್ತಮ ಚಿಕಿತ್ಸೆ ದೊರೆಯಬೇಕು ಎಂದರು.
ಶ್ರೀಮಂತರಲ್ಲಿ ಹಣ ಇರುತ್ತದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಮೈಸೂರು ಜಿಲ್ಲೆಗೆ ಎಲ್ಲಾ ರೀತಿಯ ಸೌಲಭ್ಯನ್ನು ಒದಗಿಸಿ ಕೊಡಲಾಗುವುದು. ಮೈಸೂರು ಪಾರಂಪರಿಕ ನಗರವಾಗಿದೆ. ನಿವೃತ್ತಿ ಆದವರು ಹೆಚ್ಚಾಗಿ ಮೈಸೂರು ನಗರದಲ್ಲಿ ವಾಸಿಸಲು ಇಷ್ಟ ಪಡುತ್ತಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಡಿ. ರವಿಶಂಕರ್, ಅನಿಲ್ ಚಿಕ್ಕಮಾದು, ಮರಿತಿಬ್ಬೇಗೌಡ, ಸಿ.ಎನ್. ಮಂಜೇಗೌಡ, ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಡಾ. ಯತಿಂದ್ರ ಸಿದ್ದರಾಮಯ್ಯ, ಕಿದ್ವಾಯಿ ಸಂಸ್ಥೆ ನಿರ್ದೇಶಕಿ ಡಾ. ಲೋಕೇಶ್ ಮೊದಲಾದವರು ಇದ್ದರು.