15ರಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ

KannadaprabhaNewsNetwork |  
Published : Apr 11, 2026, 01:45 AM IST
10ಕೆಎಂಎನ್ ಡಿ23 | Kannada Prabha

ಸಾರಾಂಶ

ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಏ.15 ರಂದು ಭೇಟಿ ಕೊಟ್ಟು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಾಲಗಂಗಾಧರನಾಥಶ್ರೀಗಳ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಏ.15 ರಂದು ಭೇಟಿ ಕೊಟ್ಟು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಾಲಗಂಗಾಧರನಾಥಶ್ರೀಗಳ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡಲಿದ್ದಾರೆ.ಶ್ರೀ ಗುರು ಭೈರವೈಕ್ಯ ಮಂದಿರದ ಕುಂಭಾಭಿಷೇಕ ಮಹೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಜರುಗುವ ಧಾರ್ಮಿಕ ಪೂಜಾ ಕೈಂಕರ್ಯಕ್ಕೆ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಶುಕ್ರವಾರ ಬೆಳಗ್ಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.ಶ್ರೀಕ್ಷೇತ್ರದಲ್ಲಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ ಮಂದಿರದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಮೂಲ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀಗಳ ಸಾನಿಧ್ಯದಲ್ಲಿ ಶುಕ್ರವಾರ ಬೆಳಗ್ಗೆ ಹೋಮ ಹವನಾದಿ ವಿವಿಧ ಬಗೆಯ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು. ಸಂಜೆ ವಾಸ್ತುಹೋಮ, ಅಂಕುರಾರ್ಪಣೆ, ರಕ್ಷಾಬಂಧನ ಹಾಗೂ ಕಳಸ ಸ್ಥಾಪನೆ ಮಾಡಲಾಯಿತು.ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಹಾಗೂ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಶನಿವಾರ ಬೆಳಗ್ಗೆ 10 ಗಂಟೆಗೆ ಪೂರ್ಣಾಹುತಿ, ಆಧಿವಾಸಗಳು, ಕಳಸ ಪೂಜಾ ಹೋಮ ಸೇರಿದಂತೆ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ಜರುಗಲಿವೆ. ಏ.12 ರಂದು ಕುಂಭಾಭಿಷೇಕ ನೆರವೇರಲಿದೆ. ಏ.13 ಮತ್ತು 14 ರಂದು ವಿವಿಧ ಬಗೆಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಮೋದಿ ಭೇಟಿ ಖಚಿತ :

ಶ್ರೀಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆಯ "ಶ್ರೀಗುರು ಭೈರವೈಕ್ಯ ಮಂದಿರ "ವನ್ನು ಉದ್ಘಾಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆದಿಚುಂಚನಗಿರಿ ಕ್ಷೇತ್ರಕ್ಕೆ ಏ.15ರಂದು ಭೇಟಿ ನೀಡುವುದು ಖಚಿತವಾಗಿದೆ.ಐಜಿಪಿ, ಡೀಸಿ, ಎಸ್ಪಿಯಿಂದ ಸ್ಥಳ ಪರಿಶೀಲನೆ: ಶ್ರೀಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ಹಿನ್ನಲೆಯಲ್ಲಿ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಎಸ್ಪಿ ಡಾ.ವಿ.ಜೆ. ಶೋಭಾರಾಣಿ, ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ಹೇಮಂತ್‌ಕುಮಾರ್, ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್‌ಐ ವೈ.ಎನ್.ರವಿಕುಮಾರ್ ಅವರು ಗುರುವಾರ ಶ್ರೀಮಠಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದರು. ಎಸ್‌ಪಿಜಿ ತಂಡ ಭೇಟಿ:

ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನಲೆಯಲ್ಲಿ ಕಳೆದ 15 ದಿನಗಳ ಹಿಂದೆಯೇ ವಿಶೇಷ ರಕ್ಷಣಾ ತಂಡದ ಅಧಿಕಾರಿಗಳು (ಎಸ್‌ಪಿಜಿ) ಶ್ರೀಮಠಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಹಿನ್ನಲೆಯಲ್ಲಿ ಅಂದು ದೇವಾಲಯ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧವಿರುತ್ತದೆ ಎಂದು ಹೇಳಲಾಗುತ್ತಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಸೀರಿಯಲ್ ಕಷ್ಟ, ಧಾರಾವಾಹಿ ನಷ್ಟ
ಚೆಂಡೆಯ ರೂಪಕದಲ್ಲಿ ಪೀಟರ್‌ ಲೈಫ್‌ಸ್ಟೋರಿ : ರಾಜೇಶ್‌ ಧ್ರುವ