ಸಿನಿವಾರ್ತೆ
ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನದ ಹಿನ್ನೆಲೆಯಲ್ಲಿ ‘ಅಪ್ಪು’ ಸಿನಿಮಾ ಮರುಬಿಡುಗಡೆಯಾಗಿದೆ. ಅಭಿಮಾನಿಗಳು ಭರ್ಜರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನ ಕೆಲವೆಡೆ ಬೆಳಗಿನ ಜಾವ ಶೋ ಆಯೋಜಿಸಲಾಗಿತ್ತು. ಇವುಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡವು. ಸಾವಿರಾರು ಅಪ್ಪು ಅಭಿಮಾನಿಗಳು ಮುಂಜಾನೆಯೇ ಥೇಟರ್ ಮುಂದೆ ನೆರೆದು ಪುನೀತ್‌ಗೆ ಜೈ ಕಾರ ಕೂಗಿದರು. ಹಲವೆಡೆ ಪುನೀತ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿದರು. ಸಿನಿಮಾ ಪ್ರದರ್ಶನದ ಆರಂಭದಲ್ಲಿ ಪುನೀತ್ ಅವರ ಹೆಸರು ಪರದೆ ಮೇಲೆ ಬರುವಾಗ ಜನ ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ದು ಅಪ್ಪು ಮೇಲಿನ ಅವರ ಅಭಿಮಾನಕ್ಕೆ ಸಾಕ್ಷಿಯಂತಿತ್ತು.
ಬೆಂಗಳೂರಿನ ಮೆಜೆಸ್ಟಿಕ್ ಭಾಗದ ಹೆಚ್ಚಿನೆಲ್ಲ ಥೇಟರ್‌ಗಳ ಮುಂಭಾಗ ಅಭಿಮಾನಿಗಳ ಜಾತ್ರೆಯೇ ನೆರೆದಿತ್ತು. ಹಲವು ಟಿವಿ, ಸಿನಿಮಾ ಸೆಲೆಬ್ರಿಟಿಗಳೂ ಅಭಿಮಾನಿಗಳ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಸಿನಿಮಾದ ನಾಯಕಿ ರಕ್ಷಿತಾ ಪ್ರೇಮ್ ಥೇಟರ್‌ನಲ್ಲಿ ಅಭಿಮಾನಿಗಳ ನಡುವೆ ಚಿತ್ರ ವೀಕ್ಷಿಸಿ ಕಣ್ಣೀರಾದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಅಪ್ಪು ಸಿನಿಮಾ ಈಗಲೂ ಫ್ರೆಶ್ ಎನಿಸುತ್ತದೆ. ಇದು ಎವರ್ ಗ್ರೀನ್ ಸ್ಟೋರಿ. ಅಪ್ಪು ಮತ್ತು ಸುಚಿ ನಡುವಿನ ಲವ್ ಸ್ಟೋರಿ ಅದ್ಭುತವಾದದ್ದು. ಸಖತ್ ಹಾರ್ಟ್ ಟಚಿಂಗ್ ಅನಿಸುತ್ತದೆ. ಸಿನಿಮಾ ನೋಡುತ್ತಾ ನೋಡುತ್ತಾ, ಅಪ್ಪು ನೆನಪು ತೀವ್ರವಾಗಿ ಕಾಡಿತು. ಅವರು ಇವತ್ತು ನಮ್ಮೊಂದಿಗೆ ಇರಬೇಕಿತ್ತು’ ಎಂದು ಭಾವುಕ ನುಡಿಗಳನ್ನಾಡಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್, ‘ಅಪ್ಪು ಸಿನಿಮಾವನ್ನು 23 ವರ್ಷಗಳ ಹಿಂದೆ ಅಪ್ಪ, ಅಮ್ಮ ಹಾಗೂ ಅಪ್ಪು ಜೊತೆ ನೋಡಿದ್ದೆ. ಅದನ್ನು ನೆನೆಸಿಕೊಂಡರೆ ಮತ್ತೆ ಮನಸ್ಸಿಗೆ ಕಷ್ಟವಾಗುತ್ತದೆ. ಆದರೆ ಇವತ್ತು ಈ ಸಿನಿಮಾ ಪ್ರದರ್ಶನದ ವೇಳೆ ಅಭಿಮಾನಿಗಳು ಡೈಲಾಗ್ ಹೇಳುತ್ತಿದ್ದದ್ದು, ಹಾಡಿನ ಪ್ರತೀ ಸಾಲನ್ನೂ ಹಾಡುತ್ತಿದ್ದದ್ದು ಕಂಡು ಬಹಳ ಖುಷಿ ಆಯಿತು’ ಎಂದು ಹೇಳಿದ್ದಾರೆ.