ಈ ಸಲ ಪಕ್ಕಾ ಕಪ್‌ ನಮ್ದೇ : ಆರ್‌ಸಿಬಿ 18 ವರ್ಷಗಳ ಕನಸು ಈ ಬಾರಿ ನನಸು ಮಾಡಲೆಂದು ಹಾರೈಕೆ

Published : Jun 03, 2025, 12:15 PM IST
PBKS captain Shreyas Iyer (L) and RCB skipper Rajat Patidar (Photo: X/@IPL)

ಸಾರಾಂಶ

ಈ ಸಲ ಕಪ್‌ ನಮ್ದೇ... ಕಳೆದ ಹದಿನೆಂಟು ವರ್ಷಗಳಿಂದ ಕೇಳಿ ಬರುತ್ತಿರುವ ಆರ್‌ಸಿಬಿ ಅಭಿಮಾನಿಗಳು ಬಹು ದೊಡ್ಡ ಕೂಗು ಇದು.

 ಸಿನಿವಾರ್ತೆ

ಈ ಸಲ ಕಪ್‌ ನಮ್ದೇ... ಕಳೆದ ಹದಿನೆಂಟು ವರ್ಷಗಳಿಂದ ಕೇಳಿ ಬರುತ್ತಿರುವ ಆರ್‌ಸಿಬಿ ಅಭಿಮಾನಿಗಳು ಬಹು ದೊಡ್ಡ ಕೂಗು ಇದು. ಐಪಿಎಲ್‌ ಅಖಾಡದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ಅದರಲ್ಲೂ ಕನ್ನಡಿಗರ ಮನಸ್ಸು ಗೆದ್ದಿರುವ ಆರ್‌ಸಿಬಿ ತಂಡ ಗೆದ್ದೇ ಗೆಲ್ಲುತ್ತದೆ ಎನ್ನುತ್ತಿದ್ದಾರೆ ಸಿನಿಮಾ ಸೆಲೆಬ್ರಿಟಿಗಳು. ಇಂದು (ಜೂ.3) ಐಪಿಎಲ್‌ನ 18ನೇ ಆವೃತ್ತಿಯ ಫೈನಲ್‌ನಲ್ಲಿ ಆರ್‌ಸಿಬಿ ಹಾಗೂ ಪಂಜಾಬ್‌ ತಂಡಗಳು ಮುಖಾಮುಖಿ ಆಗುತ್ತಿರುವ ಹಿನ್ನೆಲೆಯಲ್ಲಿ ತಾರೆಗಳು ಹೇಳಿದ ಮಾತುಗಳು ಇಲ್ಲಿವೆ.

ಗೆಲುವು ನಮ್ಮದೇ

ಕಳೆದ ನಾಲ್ಕು ವರ್ಷಗಳಿಂದ ಐಪಿಎಲ್‌ ನೋಡಲು ಸ್ಟೇಡಿಯಂಗೆ ಹೋಗುತ್ತಿದ್ದೇನೆ. ಈ ಬಾರಿಯೂ ಫೈನಲ್‌ ಮ್ಯಾಚ್‌ ನೋಡಕ್ಕೆ ಹೋಗುತ್ತಿದ್ದೇನೆ. ಆದರೆ, ನಮ್ಮ ಆರ್‌ಸಿಬಿ ತಂಡ ಗೆದ್ದೇ ಗೆಲ್ಲತ್ತದೆಂಬ ನಂಬಿಕೆಯಲ್ಲಿ ಈ ಬಾರಿ ಸ್ಟೇಡಿಯಂಗೆ ಹೋಗುತ್ತಿದ್ದೇನೆ. ಹಿಂದೆ ಆಡಿದ ತಂಡಗಳಲ್ಲಿ ಒಬ್ಬಿಬ್ಬರು ಯಾವುದೇ ಒಂದು ವಿಭಾಗದಲ್ಲಿ ಪ್ರಭಲ ಆಟಗಾರರು ಇರುತ್ತಿದ್ದರು. ಆದರೆ, ಈ ಬಾರಿ ಇಡೀ ತಂಡ ಬ್ಯಾಲೆನ್ಸಿಂಗ್‌ ಆಗಿದೆ. ವಿರಾಟ್‌ ಕೊಹ್ಲಿ ಜೆರ್ಸಿ ನಂ.18, ಇದು 18ನೇ ಆವೃತ್ತಿ, ಫೈನಲ್‌ ಮ್ಯಾಚ್‌ ನಡೆಯುವ ದಿನಾಂಕ, ತಿಂಗಳು, ವರ್ಷ ಕೂಡಿದರೆ 18... ಹೀಗೆ ನ್ಯೂಮರಾಲಜಿಯೂ ತಂಡಕ್ಕೆ ಕೂಡಿ ಬಂದಿದೆ. ಅಲ್ಲದೆ ಈಗಾಗಲೇ ಪಂಜಾಬ್‌ ಮೇಲೆ ಎರಡೂ ಬಾರಿ ಗೆದ್ದಿದ್ದಾರೆ. ಹೀಗಾಗಿ ಈ ಸಲ ಆರ್‌ಸಿಬಿನೇ ಗೆಲ್ಲೋದು ನಾವೇ ಎನ್ನುವ ನಂಬಿಕೆ ಮತ್ತು ವಿಶ್ವಾಸ ಇದೆ. ನನ್ನ ಮೆಚ್ಚಿನ ಆಟಗಾರ ವಿರಾಟ್‌ ಕೊಹ್ಲಿ.

- ಸಿಂಪಲ್ ಸುನಿ, ನಿರ್ದೇಶಕ

18 ವರ್ಷಗಳ ಕನಸು ಈಗ ನನಸಾಗಲಿದೆ

ಇದುವರೆಗೂ ಕಪ್‌ ತಮ್ಮದಾಗಿಸಿಕೊಳ್ಳದ ಎರಡು ತಂಡಗಳು ಅಂತಿಮ ಯುದ್ಧಕ್ಕೆ ಸಜ್ಜಾಗಿವೆ. ನಾನೊಬ್ಬ ಕನ್ನಡಿಗನಾಗಿ ಹೇಳುವುದಾದರೆ ಆರ್‌ಸಿಬಿ ಗೆಲ್ಲಬೇಕು. ಮತ್ತು ಗೆಲ್ಲೋದು ಪಕ್ಕಾ. ಕಳೆದ 18 ವರ್ಷಗಳಿಂದ ಆರ್‌ಸಿಬಿ ಅಭಿಮಾನಿಗಳದ್ದು ಒಂದೇ ಕೂಗು. ಅದು ‘ಈ ಸಲ ಕಪ್‌ ನಮ್ದೇ’ ಎಂಬುದು. ಹೀಗಾಗಿ 18 ವರ್ಷಗಳ ಕನಸು ಈ ಬಾರಿ ನನಸು ಮಾಡುತ್ತಾರೆಂಬ ನಂಬಿಕೆ ಇದೆ. ಅದಕ್ಕೆ ಕಾರಣ ಎಲ್ಲಾ ರೀತಿಯ ಪ್ರಭಲ ಆಟಗಾರರು ತಂಡದಲ್ಲಿದ್ದಾರೆ. ನನ್ನ ನೆಚ್ಚಿನ ಆಟಗಾರ ವಿರಾಟ್‌ ಕೊಹ್ಲಿ. ಯಾಕೆಂದರೆ ಆರ್‌ಸಿಬಿ ಜತೆಗೆ ಮೊದಲಿನಿಂದ ಇರುವ ಪ್ಲೇಯರ್‌ ಅವರು. ಅವರ ಮೇಲೆ ನಮಗೆ ತುಂಬಾ ಅಭಿಮಾನ ಇರುತ್ತದೆ.

- ದುನಿಯಾ ವಿಜಯ್‌, ನಟ-ನಿರ್ದೇಶಕ

ಈ ಬಾರಿ ತಂಡದಲ್ಲಿ ಯಾವ ಕೊರತೆಗಳೂ ಇಲ್ಲ

‘ಈ ಸಲ ಕಪ್‌ ನಮ್ದೇ’ ಎನ್ನುತ್ತಿದ್ದವರು ‘ಕೊನೆಗೂ ಕಪ್‌ ನಮ್ದೇ ಆಯಿತು ನೋಡಿ’ ಎನ್ನುತ್ತೇವೆ. ಅಷ್ಟರ ಮಟ್ಟಿಗೆ ಈ ಬಾರಿ ನನಗೆ ಆರ್‌ಸಿಬಿ ಗೆಲ್ಲುತ್ತದೆಂಬ ವಿಶ್ವಾಸ ಇದೆ. ಯಾಕೆಂದರೆ ಈ ಹಿಂದೆ ಇದ್ದ ತಂಡಗಳ ಆಟಗಾರರು ಒಬ್ಬರು ಬ್ಯಾಟಿಂಗ್‌ನಲ್ಲಿ ಹಿಡಿತ ಇದ್ದರೆ, ಮತ್ತೊಬ್ಬರು ಬೌಲಿಂಗ್‌, ಫೀಲ್ಡಿಂಗ್‌ನಲ್ಲಿ ಮಾತ್ರ ಹಿಡಿತ ಇದ್ದವರೇ ಇದ್ದರು. ಏನೋ ಮಿಸ್‌ ಆಗುತ್ತಿದೆ ಅನಿಸಿತ್ತು. ಆದರೆ, ಈ ಬಾರಿ ಆ ಕೊರತೆ ಇಲ್ಲ. ಅಲ್ಲದೆ ತಂಡದ ಉತ್ಸಾಹ, ಜೋಶ್‌ ಸಖತ್‌ ಪಾಸಿಟೀವ್‌ ಆಗಿದೆ. ಪಂಜಾಬ್‌ ತಂಡವನ್ನು ಈಗಾಗಲೇ ಸೋಲಿಸಿದ್ದಾರೆ. ಫೈನಲ್‌ ಪಂದ್ಯದಲ್ಲೂ ಸೋಲಿಸೋದು ಪಕ್ಕಾ. ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ಜೋಶ್‌ ಹೇಜಲ್‌ವುಡ್‌, ಭುವನೇಶ್ವರ್‌ ಕುಮಾರ್‌ ಅವರು ನನ್ನ ಇಷ್ಟದ ಆಟಗಾರರು.

- ದಿಗಂತ್, ನಟ

ದೇವ್ರೆ ಈ ಸಲ ಆರ್‌ಸಿಬಿ ಗೆಲ್ಲಲಿ

ನಾನು ಪ್ರಾರ್ಥಿಸುವುದು ಒಂದೇ ‘ಈ ಬಾರಿ ಕಪ್ ನಮ್‌ ಆರ್‌ಸಿಬಿಗೆ ಕೊಟ್ಟು ಬಿಡಪ್ಪ ದೇವರೇ’ ಅಂತ. ಖಂಡಿತ ಆರ್‌ಸಿಬಿ ಅಭಿಮಾನಿಗಳ ಈ ಪ್ರಾರ್ಥನೆ ಈಡೇರುತ್ತದೆ. ಯಾಕೆಂದರೆ ಈಗ ಗೆಲ್ಲಕ್ಕೆ ಸರಿಯಾದ ಸಮಯ. ಕಳೆದ 17 ಆವೃತ್ತಿಗಳಿಗಿಂತ ಈ ಬಾರಿಯ ಆವೃತ್ತಿಯಲ್ಲಿ ಆರ್‌ಸಿಬಿ ತುಂಬಾ ಪರಿಣಾಮಕಾರಿಯಾಗಿ ತಮ್ಮ ಆಟವನ್ನು ಪ್ರದರ್ಶಿಸುತ್ತಾ ಬಂದಿದೆ. ಖಂಡಿತ, ನಾವು ಗೆಲ್ತುತ್ತೇವೆ. ವಿರಾಟ್‌ ಕೊಹ್ಲಿ ನನ್ನ ಅಚ್ಚುಮೆಚ್ಚಿನ ಆಟಗಾರ ಎಂಬುದರಲ್ಲಿ ಅನುಮಾನ ಇಲ್ಲ,

- ಶಾನ್ವಿ ಶ್ರೀವಾಸ್ತವ, ನಟಿ

ನನ್ನ ನೆಚ್ಚಿನ ಆಟಗಾರ ರಜತ್ ಪಾಟಿದಾರ್. 

ಇವರು ನನಗೆ ತುಂಬಾ ಇಷ್ಟ. ರಜತ್‌ ಬಂದ ಮೇಲೆ ಇಡೀ ತಂಡದಲ್ಲಿ ಒಂದು ಪಾಸಿಟೀವ್‌ ವಾತಾವರಣ ಇದೆ. ಅವರ ಮೇಲೆ ನನಗೆ ಹೆಚ್ಚಿನ ನಂಬಿಕೆ ಇದೆ. ಇನ್ನೂ ವಿರಾಟ್‌ ಕೊಹ್ಲಿ ಆಲ್‌ ಟೈಮ್‌ ಫೇವರೇಟ್‌. ‘ಪ್ಲೇ ಆಫ್‌ ಗೆ ಹೋಗಕ್ಕೆ ನಿಮಗೆ ಒಂದು ಪರ್ಸೆಂಟ್‌ ಮಾತ್ರ ಅವಕಾಶ ಇದೆ’ ಎಂದು ಸಂದರ್ಶನದಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ‘ಆ ಒಂದು ಪರ್ಸೆಂಟ್‌ ಸಾಕಲ್ಲವಾ’ ಎಂದು ತುಂಬಾ ವಿಶ್ವಾಸದಿಂದ ವಿರಾಟ್‌ ಕೊಹ್ಲಿ ಉತ್ತರಿಸಿದರು. ಅವರು ಹೇಳಿದಂತೆ ಒಂದು ಪರ್ಸೆಂಟ್‌ ಅವಕಾಶ ಬಳಸಿಕೊಂಡು ಪ್ಲೇ ಆಫ್‌ಗೆ ತಂಡ ಹೋಗಿತ್ತು. ಈ ಬಾರಿ ಒಂದಲ್ಲಾ, ನೂರು ಪರ್ಸೆಂಟ್‌ ಆರ್‌ಸಿಬಿ ಪರವಾಗಿದೆ. ಹೀಗಾಗಿ ಫೈಲನ್‌ಲ್ಲಿ ಆರ್‌ಸಿಬಿ ಕಪ್‌ ಎತ್ತೋದು ಪಕ್ಕಾ. ಜೋಶ್‌ ಹೇಜಲ್‌ವುಡ್‌ ವಾಪಸ್ಸು ತಂಡಕ್ಕೆ ಬಂದಿರುವುದು ತಂಡಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ನರಕರಾತ್ಮಕ ವಾತಾವರಣವನ್ನು ಸಕರಾತ್ಮಕನಾಗಿ ತೆಗೆದುಕೊಂಡು ಹೋಗುವ ಕೊಹ್ಲಿ ಇದ್ದಾಗ, ಈ ಬಾರಿ ಕಪ್‌ ನಮ್ದೇ ಆಗಲಿದೆ.

- ಪ್ರಮೋದ್, ನಟ

ತಂಡದ ಸಂಯೋಜನೆ ಸೂಪರ್‌

ಈ ಬಾರಿ ಗೆಲ್ಲುವಂತಹ ಸಾಧ್ಯತೆಗಳು ತುಂಬಾ ಇವೆ. ಯಾಕೆಂದರೆ ಟೀಮ್‌ ಸಂಯೋಜನೆ ಆ ರೀತಿ ಇದೆ. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಬ್ಯಾಕಪ್‌ ಟೀಮ್‌ ಎಲ್ಲವೂ ಸಖತ್‌. ಈಗಾಗಲೇ ಬೇರೆ ಸಂದರ್ಭಗಳಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಎನಿಸಿಕೊಂಡ ಆಟಗಾರರೇ ತಂಡದಲ್ಲಿದ್ದಾರೆ. ಯಾರೂ ಕಳಪೆ ಪ್ಲೇಯರ್ಸ್‌ಗಳಿಲ್ಲ. ಒಬ್ಬರ ಮೇಲೆ ಡಿಪೆಂಡ್‌ ಆಗಿಲ್ಲ. ಇಂಥ ಸಂಯೋಜನೆ ಬೇರೆ ಯಾವುದೇ ತಂಡದಲ್ಲಿ ಇಲ್ಲ. ಸಚಿನ್‌ ತೆಂಡೂಲ್ಕರ್‌ ನಂತರ ನನಗೆ ಅತಿ ಹೆಚ್ಚು ಇಷ್ಟವಾಗಿದ್ದು ವಿರಾಟ್‌ ಕೊಹ್ಲಿ. ಈಗ ಆರ್‌ಸಿಬಿಯಲ್ಲೂ ಅವರೇ ಇದ್ದಾರೆ ಅಂತ ಮೇಲೆ ಅಭಿಮಾನಿ ಮತ್ತಷ್ಟು ಹೆಚ್ಚು. ವಿರಾಟ್‌, ಕ್ರಿಕೆಟ್‌ನ ಗ್ಲೋಬಲ್‌ ಬ್ರಾಂಡ್ ಅನ್ನಬಹುದು.

- ವಸಿಷ್ಠ ಸಿಂಹ, ನಟ

ಇಬ್ಬರಿಗೂ ಇದು ಯುದ್ಧಂತೆ

ಇಲ್ಲಿವರೆಗೂ ‘ಚೆನ್ನಾಗಿ ಆಡಿದರೆ ಸಾಕಪ್ಪ’ ಅಂತಿದ್ವಿ. ಈಗ ಚೆನ್ನಾಗಿ ಆಡಿಕೊಂಡು ಫೈನಲ್‌ಗೆ ಬಂದಿದ್ದಾರೆ. ಅಲ್ಲಿಗೆ ಆರ್‌ಸಿಬಿ ಮುಡಿಗೆ ಐಪಿಎಲ್‌ ಕಂಪ್‌ ದಕ್ಕಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ವಿಶೇಷ ಎಂದರೆ ಪಂಜಾಬ್‌ ಕೂಡ ಇದವರೆಗೂ ಗೆದ್ದಿಲ್ಲ. ಆರ್‌ಸಿಬಿನೂ ಗೆದಿಲ್ಲ. ಇಬ್ಬರಿಗೂ ಗೆಲುವು ಅಗತ್ಯ ಇದೆ. ಇದು ಒಂದು ರೀತಿಯಲ್ಲಿ ಇಬ್ಬರಿಗೂ ಅಂತಿಮ ಯುದ್ಧ. ಆದರೆ, ಈ ಯುದ್ಧದಲ್ಲಿ ಗೆಲ್ಲೋದು ಮಾತ್ರ ಆರ್‌ಸಿಬಿನೇ. ನನ್ನ ನೆಚ್ಚಿನ ಆಟಗಾರರು ವಿರಾಟ್‌ ಕೊಹ್ಲಿ ಹಾಗೂ ಫಿಲ್‌ ಸಾಲ್ಟ್‌ ಅವರು.

-ಶ್ರೇಯಸ್, ನಟ

 ಫೈನಲ್‌ನಲ್ಲಿ ಆರ್‌ಸಿಬಿ ಗೆಲುವು ಖಚಿತ

ನಾನು ವಿರಾಟ್‌ ಕೊಹ್ಲಿಗಾಗಿ ಐಪಿಎಲ್‌ ನೋಡುತ್ತಿದ್ದೇನೆ. ಹೀಗಾಗಿ ನನ್ನ ಫೇವರೇಟ್‌ ಆಟಗಾರ ಎಂದರೆ ಅದು ಕೊಹ್ಲಿ. ಕೇವಲ ಕ್ರಿಕೆಟರ್‌ ಆಗಿ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ಜಂಟಲ್‌ಮನ್‌. ಆರ್‌ಸಿಬಿ ಬಗ್ಗೆ ಹೇಳಬೇಕು ಅಂದರೆ ಖಂಡಿತ ಈ ಐಪಿಎಲ್‌ ಕಪ್‌ ನಮ್ಮದೇ ಆಗೋದರಲ್ಲಿ ಎರಡು ಮಾತಿಲ್ಲ. ಮತ್ತೊಂದು ನಂಬಿಕೆ ಅಂದರೆ ಈಗಾಗಲೇ ಪಂಜಾಬ್ ಜತೆಗೆ ಆರ್‌ಸಿಬಿ ಆಡಿ ಗೆದ್ದಿರುವುದರಿಂದ ಫೈನಲ್‌ನಲ್ಲೂ ಅದೇ ಜೋಶ್‌ ಇರುತ್ತದೆ.

- ಅನಿತಾ ಭಟ್, ನಟಿ

ಕೊಹ್ಲಿಗಾಗಿ ಆರ್‌ಸಿಬಿ ಗೆಲ್ಲಬೇಕು

ಈ ಬಾರಿ ಕಪ್‌ ನಮ್ಮದೇ ಆಗುತ್ತದೆ ಅಂತ ನಾನು ಆ್ಯಕ್ಷನ್‌ ಟೇಬಲ್‌ನಲ್ಲೇ ನಿರ್ಧರಿಸಿದ್ದೆ. ಯಾಕೆಂದರೆ ಆಟಗಾರರ ಆಯ್ಕೆಯಲ್ಲೇ ಅರ್ಧ ಗೆದ್ದಿದ್ದೇವೆ. ಅಂದರೆ ಒಂದು ಚಿತ್ರಕ್ಕೆ ಸ್ಕ್ರಿಫ್ಟ್‌ ಚೆನ್ನಾಗಿದ್ದಾಗ ಸಿನಿಮಾ ಗೆಲ್ಲತ್ತದಲ್ಲ, ಹಾಗೆ ಆ್ಯಕ್ಷನ್‌ ಟೇಬಲ್‌ ಆರ್‌ಸಿಬಿ ಗೆಲುವಿನ ಸ್ಕ್ರಿಫ್ಟ್‌. ಈ ಬಾರಿ ಎಲ್ಲೂ ಕೂಡ ಹಾಗೆ ಸುಮ್ಮನೆ ಗೆದ್ದು ಬಂದಿಲ್ಲ. ಪ್ರಭಲ ಸ್ಪರ್ಧೆ ನೀಡಿಯೇ ಗೆದ್ದು ಬಂದಿದೆ. ಮೊದಲ ಮ್ಯಾಚ್‌ನಿಂದಲೇ ತಮ್ಮ ಆಟತೋರಿಸಿಕೊಂಡು ಬಂದಿರುವ ಆರ್‌ಸಿಬಿ ಈ ಬಾರಿ ಗೆಲ್ಲಕ್ಕೆ ಎಲ್ಲಾ ಅರ್ಹತೆಯೂ ಇದೆ.

ಎಲ್ಲಕ್ಕಿಂತ ಮುಖ್ಯವಾದಿ ಹಿಂದಿನ ಎಲ್ಲಾ ಕೊರೆತೆಗಳನ್ನು ನಿಗೀಸಿಕೊಂಡು ಬಂದು ಒಂದು ತಂಡವಾಗಿ ನಿಂತಿದೆ. ಮತ್ತೊಂದು ಕಾರಣಕ್ಕೆ ಆರ್‌ಸಿಬಿ ಈ ಬಾರಿ ಗೆಲ್ಲಲೇಬೇಕಿದೆ. ಕಳೆದ 18 ವರ್ಷಗಳಿಂದ ಎಲ್ಲೂ ಹೋಗದೆ ಒಂದೇ ತಂಡದ ಜತೆಗೆ ಆಡುತ್ತಿರುವ ವಿರಾಟ್‌ ಕೊಹ್ಲಿಗಾಗಿ ಈ ಬಾರಿ ಕಪ್‌ ನಮ್ಮದೇ ಆಗಬೇಕಿದೆ. ಅವರಿಗೆ ಇದು ಟ್ರಿಬ್ಯೂಟ್‌ ಕೊಟ್ಟಂತೆ. ಬೌಲಿಂಗ್‌ನಲ್ಲಿ ಜೋಶ್‌ ಹೇಜಲ್‌ವುಡ್‌ ಹಾಗೂ ಮಧ್ಯಮ ಆಟಗಾರನಾಗಿ ಕೃನಾಲ್ ಪಾಂಡ್ಯ ನನಗೆ ಇಷ್ಟವಾದ ಆಟಗಾರರು.

- ತರುಣ್ ಸುಧೀರ್, ನಿರ್ದೇಶಕ

ಈ ವರ್ಷವೂ ಕಪ್‌ಗಾಗಿ ಕಾಯುತ್ತಿದ್ದೇವೆ

ಪ್ರತಿ ವರ್ಷದಂತೆ ಈ ವರ್ಷವೂ ಕನಸು ಇದೆ. ಆರ್‌ಸಿಬಿ ಗೆದ್ದರೆ ತುಂಬಾ ಖುಷಿಪಡುತ್ತೇನೆ. ಯಾಕೆ ಈ ಬಾರಿ ಗೆಲುವಿನ ವಿಶ್ವಾಸ ಜಾಸ್ತಿ ಇದೆ ಅಂದರೆ ಟೀಮ್‌ ಆ ರೀತಿ ಇದೆ. ಹಿಂದಿನ ಯಾವ ಆವೃತ್ತಿಗಳಲ್ಲೂ ನೋಡದ ಆಟಗಾರರನ್ನು ಈ ಬಾರಿ ತಂಡಕ್ಕೆ ಸೇರಿಸಿಕೊಂಡಿರುವುದು ನೋಡಿದಾಗ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಹಿಂದಿಗಿಂತ ಈಗ ಜಾಸ್ತಿ ಇದೆ. ನನ್ನ ನೆಚ್ಚಿನ ಆಟಗಾರ ವಿರಾಟ್‌ ಕೊಹ್ಲಿ. ಆರ್‌ಸಿಬಿ ಆರಂಭವಾದಾಗಿನಿಂದಲೂ ಆರ್‌ಸಿಬಿ ಜತೆಗೆ ರಾಯಲ್‌ ಆಗಿರುವ ಆಟಗಾರ ಅವರು. ಪಾಸಿಟೀವ್‌ ವೈಬ್ರೇಷನ್‌ ಇದೆ.

- ಶ್ರೀಮುರಳಿ, ನಟ

ಆರ್‌ಸಿಬಿ ಕನ್ನಡಿಗರ ಎಮೋಷನ್‌

ಆರ್‌ಸಿಬಿ ಎಂದರೆ ಬರೀ ಕ್ರಿಕೆಟ್‌ ಅಲ್ಲ. ಕನ್ನಡಿಗರಿಗೆ ಎಮೋಷನ್‌ ಆಗಿ ಕನೆಕ್ಟ್‌ ಆಗಿರುವ ಒಂದು ಹೆಸರು. ಇದು ಕನ್ನಡಿಗರ ನಂಬಿಕೆಯ ಬ್ರಾಂಡ್‌. ಇಷ್ಟು ವರ್ಷ ಟ್ರೋಪಿ ಗೆದ್ರೋ ಬಿಟ್ರೋ ಆದರೆ ನಂಬಿಕಸ್ಥ ಪ್ರೇಕ್ಷಕರನ್ನು ಹಾಗೂ ಅಭಿಮಾನಿಗಳನ್ನು ಒಳಗೊಂಡ ನಿಜವಾದ ರಾಯಲ್‌, ಲಾಯಲ್‌ ಟೀಮ್‌ ಅಂದರೆ ಆರ್‌ಸಿಬಿ. ವಿಶ್ವ ಕಪ್‌ಗೆ ಕಾಯುವಂತೆ ನಾವು ಐಪಿಎಲ್‌ ಕಪ್‌ಗಾಗಿ ಕಾಯುತ್ತಿದ್ದೇವೆ ಎಂದರೆ ಅದು ಆರ್‌ಸಿಬಿಗಾಗಿ. ನನಗೆ ವಿರಾಟ್‌ ಕೊಹ್ಲಿ ಅಂದರೆ ಇಷ್ಟ. ಯಾಕೆಂದರೆ ಲಾಯಲ್ಟಿ ಶುರುವಾಗಿದ್ದೇ ವಿರಾಟ್‌ ಅವರಿಂದ. ಬೇರೆ ಎಲ್ಲರು ಬೇರೆ ಬೇರೆ ತಂಡಗಳಿಗೆ ಮಾರಾಟ ಆಗುತ್ತಿದ್ದಾಗ ಕಳೆದ 18 ವರ್ಷಗಳಿಂದ ಆರ್‌ಸಿಬಿ ಜತೆಗೇ ಇರುವ ವಿರಾಟ್‌, ಕರ್ನಾಟಕದ ಹೆಮ್ಮೆಯ ಮಗ.

-ಮಾಸ್ತಿ, ಬರಹಗಾರ

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ದಿ ಡೆವಿಲ್‌ ಕಾಸ್ಟ್ಯೂಮ್‌ನಲ್ಲಿ ದರ್ಶನ್‌ ಪುತ್ರ ವಿನೀಶ್‌
ಪಾಕಿಸ್ತಾನದಲ್ಲಿ ನಿಷೇಧವಿದ್ದರೂ ಧುರಂಧರ್‌ ಸೂಪರ್‌ಹಿಟ್‌