‘ಕಮಲ್ ಶ್ರೀದೇವಿ’ ಚಲನಚಿತ್ರದ ಯಶಸ್ಸು: ಅಭಿಮಾನಿಗಳಿಂದ ಬೈಕ್ ರ್‍ಯಾಲಿ

KannadaprabhaNewsNetwork |  
Published : Sep 21, 2025, 02:00 AM IST
20ಕೆಎಂಎನ್ ಡಿ20  | Kannada Prabha

ಸಾರಾಂಶ

ಸಿನಿಮಾಕ್ಕೆ ಒಳ್ಳೆಯ ಅರ್ಥಕೊಟ್ಟಿರುವುದರಿಂದ ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರೂ ನೋಡುವಂತಹ ಸಿನಿಮಾ ಎಂದು ಸಿನಿ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಬರುವ ಕೆಲ ಅಂಶಗಳನ್ನು ಹಲವು ಹೆಣ್ಣುಮಕ್ಕಳು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತಿರುವ ಬಗ್ಗೆಯೂ ತಿಳಿದುಬಂದಿದೆ. ಇದನ್ನೆಲ್ಲಾ ಕೇಳುತ್ತಿದ್ದರೆ ಬಹಳ ಖುಷಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯದ 150 ಚಿತ್ರ ಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪುತ್ರ ಸಚ್ಚಿನ್ ಅಭಿನಯಿಸಿರುವ ಕಮಲ್ ಶ್ರೀದೇವಿ ಚಿತ್ರವು ಅಭೂತಪೂರ್ವ ಯಶಸ್ಸು ಕಾಣಲೆಂದು ಸಚ್ಚಿನ್ ಅಭಿಮಾನಿಗಳು ಪಟ್ಟಣದಲ್ಲಿ ಶನಿವಾರ ಬೃಹತ್ ಆಟೋ ಮತ್ತು ಬೈಕ್ ರ್‍ಯಾಲಿ ನಡೆಸಿ ಶುಭಹಾರೈಸಿದರು.

ಪಟ್ಟಣದ ಟಿ.ಬಿ.ಬಡಾವಣೆಯ ಉಪ್ಪಾರಹಳ್ಳಿ ಗೇಟ್‌ನಲ್ಲಿ ಸೇರಿದ ನೂರಾರು ಅಭಿಮಾನಿಗಳು ತಮ್ಮ ಬೈಕ್, ಆಟೋರಿಕ್ಷಾ ಮತ್ತು ಕಾರುಗಳಿಗೆ ಕಮಲ್ ಶ್ರೀದೇವಿ ಚಿತ್ರದ ಪೋಸ್ಟರ್ ಕಟ್ಟಿಕೊಂಡು ನಾಯಕನಟ ಸಚ್ಚಿನ್ ಚಲುವರಾಯಸ್ವಾಮಿ ಅವರನ್ನು ತೆರೆದ ವಾಹನದ ಮೂಲಕ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ಪಟ್ಟಣದ ಮಂಡ್ಯ ವೃತ್ತಕ್ಕೆ ಕರೆತಂದರು.

ಮಂಡ್ಯ ವೃತ್ತದಲ್ಲಿ ಜೆಸಿಬಿ ಯಂತ್ರದ ಮೂಲಕ ಸಚ್ಚಿನ್ ಚಲುವರಾಯಸ್ವಾಮಿಗೆ ಹೂಮಳೆ ಸುರಿಸಿದ ಅಭಿಮಾನಿಗಳು ಕ್ರೇನ್ ಯಂತ್ರದಿಂದ ಬೃಹತ್ ಸೇಬಿನ ಹಾರ ಹಾಕಿ, ಬಣ್ಣಬಣ್ಣದ ಪೇಪರ್ ಬ್ಲಾಸ್ಟ್ ಮಾಡುವ ಮೂಲಕ ಅದ್ದೂರಿ ಸ್ವಾಗತಕೋರಿದ ನಂತರ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಶ್ರೀ ವೆಂಕಟೇಶ್ವರ ಚಿತ್ರಮಂದಿರಕ್ಕೆ ಕರೆದೊಯ್ದರು.

ಸಿನಿ ಪ್ರೇಕ್ಷಕರೊಂದಿಗೆ ಕೆಲ ಹೊತ್ತು ಚಿತ್ರ ವೀಕ್ಷಣೆ ಮಾಡಿದ ಸಚ್ಚಿನ್ ಮಾತನಾಡಿ, ಬೆಂಗಳೂರು ಸೇರಿದಂತೆ ರಾಜ್ಯದ 150 ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಕಮಲ್‌ ಶ್ರೀದೇವಿ ಚಿತ್ರಕ್ಕೆ ಪ್ರೇಕ್ಷರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಖುಷಿ ತಂದಿದೆ. ಮನರಂಜನೆಗಾಗಿ ಮಾಡಿರುವ ಈ ಚಿತ್ರದಲ್ಲಿ ವಿಶೇಷವಾಗಿ ಯುವಸಮುದಾಯಕ್ಕೆ ಒಳ್ಳೆಯ ಸಂದೇಶವಿದೆ. ಮಕ್ಕಳು ಸೇರಿದಂತೆ ಕುಟುಂಬ ಸಮೇತ ನೋಡಬಹುದಾದ ಸದಭಿರುಚಿಯ ಚಿತ್ರ ಇದಾಗಿದೆ ಎಂದರು.

ಸಿನಿಮಾಕ್ಕೆ ಒಳ್ಳೆಯ ಅರ್ಥಕೊಟ್ಟಿರುವುದರಿಂದ ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರೂ ನೋಡುವಂತಹ ಸಿನಿಮಾ ಎಂದು ಸಿನಿ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಬರುವ ಕೆಲ ಅಂಶಗಳನ್ನು ಹಲವು ಹೆಣ್ಣುಮಕ್ಕಳು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತಿರುವ ಬಗ್ಗೆಯೂ ತಿಳಿದುಬಂದಿದೆ. ಇದನ್ನೆಲ್ಲಾ ಕೇಳುತ್ತಿದ್ದರೆ ಬಹಳ ಖುಷಿಯಾಗುತ್ತದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಮಾತನಾಡಿ, ಮಧ್ಯಮ ವರ್ಗದ ಜನರು ಯಾವ ರೀತಿ ಕಷ್ಟ ಅನುಭವಿಸುತ್ತಾಕೆ ಎಂಬುದನ್ನು ಕಮಲ್‌ಶ್ರೀದೇವಿ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಸಿನಿಮಾ ಈಗಿನ ಯುವ ಸಮುದಾಯಕ್ಕೆ ಅತ್ಯವಶ್ಯಕವಾಗಿದೆ ಎಂದರು.

ಈ ವೇಳೆ ಸಮಾಜ ಸೇವಕ ಹಾಗೂ ನಿರ್ಮಾಪಕ ಮಾವಿನಕೆರೆ ಸುರೇಶ್, ಬಿಂಡಿಗನವಿಲೆ ಪಿಎಸಿಎಸ್ ಅಧ್ಯಕ್ಷ ನೂತನ್‌ಗೌಡ, ಮುಖಂಡರಾದ ಸುನಿಲ್‌ಲಕ್ಷ್ಮೀಕಾಂತ್, ಹರೀಶ್‌ಶೆಟ್ಟಿ, ಸಂಪತ್‌ಕುಮಾರ್, ಸುನಿಲ್, ವಿಜಯಕುಮಾರ್, ತ್ಯಾಪೇನಹಳ್ಳಿ ಶ್ರೀನಿವಾಸ್, ಶಶಿಕುಮಾರ್, ಕುಶಾಲ್‌ಗೌಡ, ಕುಮಾರ್, ದೇವರಾಜು ಸೇರಿದಂತೆ ನೂರಾರು ಮಂದಿ ಇದ್ದರು.

PREV

Recommended Stories

ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಶ್ರುತಿ ಹ್ಯಾಪಿ ಬರ್ತ್‌ಡೇ
ಓಂಪ್ರಕಾಶ್‌ ರಾವ್‌ ಪುತ್ರನ ಮೊದಲ ಚಿತ್ರ ಎನ್‌ಹೆಚ್‌ 41