ಸುದೀಪ್‌ ಮಗಳು ಅನ್ನೋದಕ್ಕಿಂತ ಸಾನ್ವಿ ಅಂತ ಕರೆಸಿಕೊಳ್ಳೋದು ನನಗಿಷ್ಟ - ಸೂಪರ್‌ಸ್ಟಾರ್ ಮಗಳ ಕಷ್ಟಸುಖ

Published : Sep 05, 2025, 12:32 PM IST
Sanvi

ಸಾರಾಂಶ

ಜಗತ್ತಿಗೆ ಸೂಪರ್‌ಸ್ಟಾರ್‌ ಆದರೂ ನನಗವರು ಅಪ್ಪನೇ. ಅಪ್ಪನ ಸಾಧನೆ ಬಗ್ಗೆ ಹೆಮ್ಮೆ ಇದೆ. ಆದರೆ ನನ್ನನ್ನು ಅವರ ಮೂಲಕ ಗುರುತಿಸೋದು ಇಷ್ಟ ಆಗಲ್ಲ ಅನ್ನುತ್ತಾರೆ ಸಾನ್ವಿ ಸುದೀಪ್‌. ಅವರ ಮಾತುಗಳು..

ಜಗತ್ತಿಗೆ ಸೂಪರ್‌ಸ್ಟಾರ್‌ ಆದರೂ ನನಗವರು ಅಪ್ಪನೇ. ಅಪ್ಪನ ಸಾಧನೆ ಬಗ್ಗೆ ಹೆಮ್ಮೆ ಇದೆ. ಆದರೆ ನನ್ನನ್ನು ಅವರ ಮೂಲಕ ಗುರುತಿಸೋದು ಇಷ್ಟ ಆಗಲ್ಲ ಅನ್ನುತ್ತಾರೆ ಸಾನ್ವಿ ಸುದೀಪ್‌. ಅವರ ಮಾತುಗಳು..

- ಆಗ ನಾನು ಬಹಳ ಚಿಕ್ಕವಳು. ಅಪ್ಪನ ತೊಡೆ ಮೇಲೆ ಕೂತು ಟಿವಿ ನೋಡುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಟಿವಿಯಲ್ಲಿ ಅಪ್ಪ ಕಂಡುಬಿಡೋದ! ನನಗೆ ಗಾಬರಿ. ನನ್ನನ್ನು ತೊಡೆ ಮೇಲೆ ಕೂರಿಸಿರುವ ಅಪ್ಪ, ಟಿವಿಯೊಳಗೆ ಹೇಗೆ ಇರೋದಕ್ಕೆ ಸಾಧ್ಯ. ‘ಅಪ್ಪ, ನಿಂಗೆ ಟ್ವಿನ್‌ ಇದ್ದಾರ’ ಅಂತ ಕೇಳಿದ್ದೆ. ಆ ದಿನ ಅಪ್ಪ ನನಗೆ ಶೂಟಿಂಗ್‌ ಬಗ್ಗೆ, ರೆಕಾರ್ಡಿಂಗ್ ಬಗ್ಗೆ ಎಲ್ಲ ಹೇಳಿದ್ದರು. ಆಗ ಏನೂ ಅರ್ಥ ಆಗಿರಲಿಲ್ಲ.

- ನನ್ನಪ್ಪ ಒಬ್ಬ ಸ್ಟಾರ್‌ ಅಂತ ಗೊತ್ತಾದದ್ದು ನಾನು ಮೊದಲ ಸಲ ಶೂಟಿಂಗ್‌ಗೆ ಹೋಗಿದ್ದಾಗ. ‘ಸರ್‌ ಕಾಫಿ ತರಲಾ’, ‘ಏನ್‌ ಕೊಡಲಿ’ ಅಂತ ವಿಚಾರಿಸುತ್ತಿದ್ದ ಜನ, ಸಿಕ್ಕಾಪಟ್ಟೆ ಗೌರವ ಇದೆಲ್ಲ ನೋಡಿ ಹೌಹಾರಿದ್ದೆ. ಮೊದಲ ಸಲ ಅಪ್ಪನ ಸಿನಿಮಾ ನೋಡಲು ಥೇಟರಿಗೆ ಹೋಗಿದ್ದಾಗಲಂತೂ ಜನರ ಕರತಾಡನ, ಖುಷಿ ಎಲ್ಲ ಕಂಡು ಇದು ಅಪ್ಪನ ಇನ್ನೊಂದು ಮುಖ ಅನ್ನೋದು ಗೊತ್ತಾಗ್ತಾ ಹೋಯಿತು.

- ಅದೊಂದು ಸಲ ಅಪ್ಪ ಮಾಲ್‌ಗೆ ಕರ್ಕೊಂಡು ಹೋಗಿದ್ದರು. ನನ್ನ ಕೈ ಹಿಡಿದು ಅಪ್ಪ ನಡೆಯುತ್ತಿದ್ದಾಗ, ಸಡನ್ನಾಗಿ ಜನರ ದೊಡ್ಡ ಹಿಂಡು ಅಪ್ಪನನ್ನು ಮುತ್ತಿಕೊಂಡಿತು. ನಾನು ಗಾಬರಿಯಲ್ಲಿ ನೋಡುತ್ತಿದ್ದಾಗ ಅಪ್ಪನ ಕೈ ತಪ್ಪಿತು. ಜನ ಅಪ್ಪನನ್ನು ತಳ್ಳಾಡುತ್ತಿದ್ದರು. ಸೆಕ್ಯುರಿಟಿಗಳು ಜನರನ್ನು ಸರಿಸಿ ಅಪ್ಪನಿಗೆ ದಾರಿ ಮಾಡಿಕೊಡುತ್ತಿದ್ದರು. ನಾನು ಒಬ್ಬಳೇ ದಿಗ್ಭ್ರಾಂತಿಯಲ್ಲಿ ನಿಂತಿದ್ದೆ. ಅಂದು ಆವರಿಸಿದ ಆ ಭಯ ಇಂದಿಗೂ ನನ್ನೊಳಗಿದೆ.

- ಸೂಪರ್‌ಸ್ಟಾರ್‌ ಮಗಳಾಗಿ ನನ್ನ ಸ್ಕೂಲ್‌ ಲೈಫ್‌ ಕಷ್ಟಕರವಾಗಿತ್ತು. ದೊಡ್ಡ ಕಾರಲ್ಲಿ ಬರುತ್ತಿದ್ದ ನನ್ನನ್ನು ಯಾರೂ ಹತ್ತಿರ ಸೇರಿಸುತ್ತಿರಲಿಲ್ಲ. ಮಕ್ಕಳಿಗೆಲ್ಲ ಅವರ ಮನೆಯವರು ನನ್ನ ಬಗ್ಗೆ ಹೇಳಿದ್ದರು ಅನಿಸುತ್ತೆ, ಅವಳು ಸ್ಟಾರ್ ಮಗಳು, ಅಹಂಕಾರಿ ಆಗಿರ್ತಾಳೆ, ಅವಳ ಜೊತೆ ಸೇರಬೇಡ ಅಂತೆಲ್ಲ..

- ಮಕ್ಕಳೆಲ್ಲ ನನ್ನನ್ನು ದೂರವೇ ಇಡುತ್ತಿದ್ದರು. ಮನಸ್ಸಿಗೆ ನೋವಾಗುವಂತೆ ಮಾತಾಡುತ್ತಿದ್ದರು. ಕ್ರಮೇಣ ಇದಕ್ಕೆಲ್ಲ ಹೊಂದಿಕೊಳ್ಳುತ್ತ ನನ್ನ ಸಂತೋಷವನ್ನು ಇನ್ನೊಬ್ಬರಿಂದ ನಿರೀಕ್ಷಿಸುವ ಬದಲು ನಾನೇ ಕಂಡುಕೊಳ್ಳತೊಡಗಿದೆ.

- ನಾನು ನನಗೆ ಏನು ಕಂಫರ್ಟ್‌ ಇದೆಯೋ ಹಾಗಿರುತ್ತೇನೆ. ಒಮ್ಮೆ ಹಳೆ ಸಾದಾ ಸೀದ ಉಡುಗೆಯಲ್ಲಿ ಸ್ನಾನವೂ ಮಾಡದೇ ಮುಖದ ತುಂಬ ಪಿಂಪಲ್ಸ್‌ ಇಟ್ಟುಕೊಂಡು ಅಪ್ಪನ ಜೊತೆ ಹೊರಬಂದಿದ್ದೆ. ಅಷ್ಟೊತ್ತಿಗೆ ಅಲ್ಲಿದ್ದ ಜನರೆಲ್ಲ ನನ್ನನ್ನು ಒಂಥರಾ ನೋಡಿದರು. ನನ್ನ ಬಗ್ಗೆ ಕಾಮೆಂಟ್‌ ಮಾಡಿದರು. ನನ್ನ ದೇಹದ ಬಗ್ಗೆ, ನನ್ನ ಬಟ್ಟೆ ಬಗ್ಗೆ ಅವಹೇಳನ ಮಾಡಲಾರಂಭಿಸಿದರು. ಇದು ಆಮೇಲೂ ಮುಂದುವರಿಯಿತು. ಜನ ನನಗೆ ಹೇಗೆ ತೂಕ ಇಳಿಸಬೇಕು ಅಂತ ಸಲಹೆ ನೀಡಲಾರಂಭಿಸಿದರು. ಇವೆಲ್ಲ ಬಹಳ ನೋವು ತರಿಸುತ್ತಿದ್ದವು. ನಿಮಗೆ ನಾನು ಇಷ್ಟವಾಗಿಲ್ಲ ಅಂದರೆ ಬಿಟ್ಟುಬಿಡಿ, ಯಾಕೆ ಕಾಮೆಂಟ್‌ ಮಾಡುತ್ತೀರಿ.. ಆದರೂ ನಾನು ಇದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಕ್ರಮೇಣ ಜನರ ಹಾವಳಿ ಕಡಿಮೆ ಆಯ್ತು.

- ನನ್ನನ್ನು ಬಹಳ ಮಂದಿ ಸುದೀಪ್‌ ಮಗಳು ಅಂತ ಗುರುತಿಸುತ್ತಾರೆ. ನಾನವರಿಗೆ ಹೇಳೋದು ನನಗೆ ಒಂದು ಹೆಸರಿಟ್ಟಿದ್ದಾರೆ, ಸಾನ್ವಿ ಅಂತ. ಅದರಿಂದಲೇ ಕರೆಯಬಹುದಲ್ವಾ, ಹಾಗೆಂದು ನನ್ನ ಸರ್‌ನೇಮ್‌ ಬಗ್ಗೆ, ಅಪ್ಪನ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಅಪ್ಪನ ಮೂಲಕ ಗುರುತಿಸಿಕೊಳ್ಳೋದಕ್ಕಿಂತ ನನ್ನನ್ನು ನಾನಾಗಿ ಗುರುತಿಸುವುದು ಇಷ್ಟ.

- ಅಪ್ಪನ ಸಹಾಯವಿಲ್ಲದೇ, ಅವರ ಯಾವುದೇ ಇನ್‌ಫ್ಲುಯೆನ್ಸ್‌ ಇಲ್ಲದೇ ಸ್ವತಂತ್ರವಾಗಿ ನನ್ನ ಕೆರಿಯರ್‌ ನಾನೇ ಬೆಳೆಸುವಂತಾದ ದಿನ ನನ್ನನ್ನು ನಾನು ‘ಯಶಸ್ವಿ’ ಅಂತ ಕರೆಯುತ್ತೇನೆ.

PREV
Read more Articles on

Recommended Stories

ಕೃತಕವಾಗಿ ಗರ್ಭ ಧರಿಸಿದ್ದ ನಟಿ ಭಾವನಾಗೆ ಹೆಣ್ಣು ಮಗು ಜನನ
ಗುಟ್ಟಾಗಿ ನಟಿ ರಶ್ಮಿಕಾ, ವಿಜಯ್‌ ನಿಶ್ಚಿತಾರ್ಥ?