ಸಿನಿವಾರ್ತೆ : ನವರಾತ್ರಿಯ ಮೊದಲ ದಿನವಾದ ಇಂದು (ಸೆ.22) ರಿಷಬ್ ಶೆಟ್ಟಿ ನಟನೆ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾದ ವಿವಿಧ ಭಾಷೆಗಳ ಟ್ರೇಲರ್ ಹೊಂಬಾಳೆ ಫಿಲಂಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ಇಂದು ಮಧ್ಯಾಹ್ನ 12.45ಕ್ಕೆ ವಿವಿಧ ಭಾಷೆಗಳ ಸೂಪರ್‌ಸ್ಟಾರ್‌ಗಳು ಈ ಟ್ರೇಲರ್ ಅನಾವರಣ ಮಾಡಲಿದ್ದಾರೆ.
ಹಿಂದಿ ಟ್ರೇಲರ್ ಅನ್ನು ಹೃತಿಕ್ ರೋಷನ್, ತೆಲುಗು ಟ್ರೇಲರ್ ಪ್ರಭಾಸ್, ತಮಿಳು ಟ್ರೇಲರ್‌ಗೆ ಶಿವ ಕಾರ್ತಿಕೇಯನ್ ಚಾಲನೆ ನೀಡಿದರೆ ಮಲಯಾಳಂ ಟ್ರೇಲರ್ ಅನ್ನು ಅಲ್ಲಿ ಸಿನಿಮಾ ವಿತರಣೆಯ ಹಕ್ಕು ಪಡೆದಿರುವ ಪೃಥ್ವಿರಾಜ್ ಸುಕುಮಾರನ್ ಅವರೇ ಬಿಡುಗಡೆಗೊಳಿಸಲಿದ್ದಾರೆ.
ಮೂಲ ಕನ್ನಡ ಟ್ರೇಲರ್ ಅನ್ನು ಯಾರು ಬಿಡುಗಡೆ ಮಾಡುತ್ತಾರೆ ಎಂಬ ಪ್ರಶ್ನೆಗೂ ಹೊಂಬಾಳೆ ಫಿಲಂಸ್ ಉತ್ತರ ನೀಡಿದೆ. ‘ಕಾಂತಾರ ಸಿನಿಮಾವನ್ನು ಮೆಚ್ಚಿ ಬೆಳೆಸಿದ ಕನ್ನಡ ಜನತೆಯಿಂದ, ಕಾಂತಾರ ಚಾಪ್ಟರ್ 1 ಟ್ರೇಲರ್ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೀತಿಯೇ ನಮಗೆ ದೊಡ್ಡ ಶಕ್ತಿ. ಕಾಂತಾರ ಚಾಪ್ಟರ್ 1 ಕಿಚ್ಚು ಮತ್ತು ನೆಚ್ಚುಗಳ ಮಹಾಕಾವ್ಯ’ ಎಂಬ ಸಂದೇಶ ನೀಡಿದೆ.
ಈ ಸಿನಿಮಾದ ಮೊದಲ ಸುದ್ದಿಗೋಷ್ಠಿ ಇಂದು ಸಂಜೆ ನಡೆಯಲಿದ್ದು, ಚಿತ್ರತಂಡದ ಮುಂದಿನ ನಡೆಯ ಕುರಿತಾದ ಸ್ಪಷ್ಟ ಚಿತ್ರಣ ಸಿಗಲಿದೆ.
ಇನ್ನೊಂದು ವಿಶೇಷ ಅಂದರೆ ‘ದಿ ಲಯನ್ ಕಿಂಗ್’, ‘ಮಿಷನ್ ಇಂಪಾಸಿಬಲ್’ನಂಥಾ ಸಿನಿಮಾಗಳಿಗೆ ವಿಎಫ್‌ಎಕ್ಸ್ ಮಾಡಿದ ಎಂಪಿಸಿ ಈ ಸಿನಿಮಾಕ್ಕೆ ವಿಎಫ್‌ಎಕ್ಸ್ ಹಾಗೂ ಸಿಜಿಐ ಮಾಡಿದೆ.
ಅಕ್ಟೋಬರ್ 2ರಂದು ‘ಕಾಂತಾರ ಚಾಪ್ಟರ್ 1’ ವಿಶ್ವಾದ್ಯಂತ ರಿಲೀಸ್ ಆಗಲಿದ್ದು, ಅ.1ರಂದು ಪ್ರೀಮಿಯರ್ ಶೋಗಳು ನಡೆಯಲಿವೆ.