ಕನ್ನಡಪ್ರಭ ಸಿನಿವಾರ್ತೆ ಸಾಹಿತಿ, ಹೋರಾಟಗಾರ್ತಿ ಬಿ ಟಿ ಲಲಿತ ನಾಯಕ್ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಮಮತ ರಾಹುತ್ ನಾಯಕಿಯಾಗಿ ನಟಿಸಿರುವ, ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ತಾರಿಣಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಯಿತು. ಗರ್ಭಿಣಿಯ ಕುರಿತಾದ ಕತೆ ಈ ಚಿತ್ರದ್ದು. ಈ ವೇಳೆ ಮಾತನಾಡಿದ ಸಿದ್ದು ಪೂರ್ಣಚಂದ್ರ, ‘ನಟಿ ಮಮತ ರಾಹುತ್ ಅವರು ಗರ್ಭಿಣಿ ಇರುವಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಗರ್ಭಿಣಿ ಕುರಿತಾದ ಚಿತ್ರದಲ್ಲಿ ನಿಜವಾದ ಗರ್ಭಿಣಿಯೇ ನಟಿಸಿರುವುದು ವಿಶೇಷ. ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಸಂದೇಶ ಚಿತ್ರದ್ದು’ ಎಂದು ಹೇಳಿದರು. ‘ನಾನು ಏಳು ತಿಂಗಳ ಗರ್ಭಿಣಿ ಇದ್ದಾಗ ಈ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಬಳಿಕ ನನಗೆ ಅವಧಿಗೂ ಮುನ್ನವೇ ಹೆರಿಗೆ ಆಯಿತು. ಆನಂತರ ಕೂಡ ನಾನು ಚಿತ್ರೀಕರಣದಲ್ಲಿ ಭಾಗಿಯಾದೆ. ನನ್ನ ಮಗು ಕೂಡ ಈ ಚಿತ್ರದಲ್ಲಿ ಅಭಿನಯಿಸಿದೆ. ಚಿತ್ರ ಚೆನ್ನಾಗಿ ಬಂದಿದೆ’ ಎಂದರು ಮಮತ ರಾಹುತ್. ಚಿತ್ರದ ನಾಯಕ ರೋಹಿತ್. ಸುರೇಶ್ ಕೊಟ್ಯಾನ್ ಚಿತ್ರಾಪು ನಿರ್ಮಾಪಕರು.