ಜೈಪುರ: 250ಕ್ಕೂ ಹೆಚ್ಚು ಶಾಲಾ, ಕಾಲೇಜು ವಿದ್ಯಾರ್ಥಿನಿಯರನ್ನು ಬ್ಲಾಕ್‌ಮೇಲ್ ಮಾಡಿ ಅವರ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ 6 ಜನರನ್ನು ದೋಷಿಗಳು ಎಂದು ತೀರ್ಪು ನೀಡಿರುವ ಸ್ಥಳೀಯ ಪೋಸ್ಕೋ ನ್ಯಾಯಾಲಯ, ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನಫೀಸ್ ಚಿಸ್ತಿ, ನಸೀಂ, ಸಲೀಂ ಚಿಸ್ತಿ, ಇಕ್ಬಾಲ್ ಭಾಟಿ, ಸೋಹೇಲ್ ಗನಿ, ಸಯೀದ್ ಜಮೀರ್ ಹುಸ್ಸೇನ್ ಶಿಕ್ಷೆಗೊಳಗಾದವರು.
ಅಜ್ಮೇರ್‌ನ ಪ್ರಸಿದ್ಧ ದರ್ಗಾದ ಉಸ್ತುವಾರಿ ಹೊತ್ತಿರುವ ಕುಟುಂಬ ಕೆಲವರು ಸೇರಿದಂತೆ ಅಜ್ಮೇರ್‌ನ ಪ್ರಭಾವಿಗಳ ಗುಂಪೊಂದು 90ರ ದಶಕದಲ್ಲಿ ಈ ಹೀನ ಕೃತ್ಯ ಎಸಗಿತ್ತು. ಮೊದಲಿಗೆ ಈ ತಂಡದ ಸದಸ್ಯನೊಬ್ಬ, ಸ್ಥಳೀಯ ಶಾಲೆಯೊಂದರ ವಿದ್ಯಾರ್ಥಿನಿಯನ್ನ ಬಲೆಗೆ ಬೀಳಿಸಿಕೊಂಡು ಆಕೆಯ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದ. ಬಳಿಕ ಈ ಘಟನೆಯ ಚಿತ್ರ ತೆಗೆದು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದ.
ಈ ಫೋಟೋ ಬಿಡುಗಡೆ ಮಾಡಬಾರದು ಎಂದಾದಲ್ಲಿ ನಿನ್ನ ಸ್ನೇಹಿತೆಯರನ್ನೂ ಕರೆತಾ ಎಂದು ಬೆದರಿಕೆ ಹಾಕುತ್ತಿದ್ದ. ಹೀಗೆ ಒಬ್ಬೊಬ್ಬರೇ ತಮ್ಮ ಸ್ನೇಹಿತೆಯರನ್ನು ಕರೆತಂದು ಕಾಮುಕರ ಕೈಗೆ ಒಪ್ಪಿಸುತ್ತಿದ್ದರು. ಹೀಗೆ ಸರಣಿಯಾಗಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳೀಯ ಫಾರ್ಮ್‌ಹೌಸ್‌ಗೆ ಕರೆತಂದು ಗುಂಪು ಸಾಮೂಹಿಕ ಅತ್ಯಾಚಾರ ಎಸಗಿತ್ತು. ಗುಂಪು ಎಲ್ಲರನ್ನೂ ಫೋಟೋ ತೆಗೆದು ಹೆದರಿಸುತ್ತಿದ್ದ ಕಾರಣ ಯಾರೂ ಬಾಯಿ ಬಿಟ್ಟಿರಲಿಲ್ಲ.ಈ ಬಗ್ಗೆ 1992ರಲ್ಲಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದು ತನಿಖೆಗೆ ಆದೇಶಿಸಲಾಗಿತ್ತು. ಅದರಲ್ಲಿ 18 ಜನರು ಆರೋಪಿಗಳೆಂದು ಕಂಡುಬಂದಿತ್ತು.
ಆದರೆ ಆರೋಪಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಭಾವಿಗಳಾಗಿದ್ದ ಕಾರಣ 250ಕ್ಕೂ ಹೆಚ್ಚು ಸಂತ್ರಸ್ತರ ಪೈಕಿ ಯಾರೂ ದೂರು ನೀಡಲು ಮುಂದೆ ಬರಲಿಲ್ಲ. ದೂರು ನೀಡಿದ್ದ ಕೆಲವರು ಪೈಕಿ ಕೇವಲ ಇಬ್ಬರು ಮಾತ್ರ ಪ್ರಕರಣ ಮುಂದುವರೆಸಿಕೊಂಡು ಹೋಗಿದ್ದರು. ಈ ಪ್ರಕರಣ ಸಂಬಂಧ 1998ರಲ್ಲಿ ಜನರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಉಳಿದ 6 ಜನರಿಗೆ ಇದೀಗ ಜೀವಾವಧಿ ಶಿಕ್ಷೆ ಮತ್ತು ತಲಾ 5 ಲಕ್ಷ ರು. ದಂಡ ವಿಧಿಸಲಾಗಿದೆ.