ಚಂಡೀಗಢ: ಲೋಕಸಭಾ ಚುನಾವಣೆಯ ನಡುವೆ ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದ್ದು, ರಾಜ್ಯದಲ್ಲಿ ನಯಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು 3 ಪಕ್ಷೇತರರು ಹಿಂಪಡೆದಿದ್ದಾರೆ. ಇದರಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಪತನ ಭೀತಿ ಎದುರಿಸುತ್ತಿದೆ.
ರೈತರಿಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಆದರೆ ವಾಸ್ತವವಾಗಿ ಈ ಮೂವರಿಗೂ ನಯಬ್ ಸೈನಿ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿತ್ತು. ಹೀಗಾಗಿ ಇವರು ಬಿಜೆಪಿಗೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಕಾಂಗ್ರೆಸ್ ಒತ್ತಾಯಿಸಿದೆ.ಇತ್ತೀಚೆಗಷ್ಟೇ ಜೆಜೆಪಿ-ಬಿಜೆಪಿ ಮೈತ್ರಿ ಕುಸಿದುಬಿದ್ದಿತ್ತು. ಆಗ ಸಿಎಂ ಮನೋಹರಲಾಲ್ ಖಟ್ಟರ್ ರಾಜೀನಾಮೆ ನೀಡಿದ ಕಾರಣ ಸೈನಿ ಸಿಎಂ ಆಗಿದ್ದರು. ಆಗ 3 ಪಕ್ಷೇತರರು ಹಾಗೂ ಹರ್ಯಾಣ ಲೋಕಹಿತ ಪಾರ್ಟಿಯ ಒಬ್ಬ ಶಾಸಕನ ಬೆಂಬಲದ ಆಧಾರದಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿದಿತ್ತು.
--ಹರ್ಯಾಣ ಬಲಾಬಲ90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಪ್ರಸ್ತುತ 2 ಸ್ಥಾನ ಖಾಲಿ ಇದ್ದು, 88 ಶಾಸಕರಿದ್ದಾರೆ. ಇನ್ನು 2 ಕ್ಷೇತ್ರಕ್ಕೆ ಉಪಚುನಾವಣೆಗಳು ನಡೆಯುತ್ತಿವೆ. 88ರಲ್ಲಿ ಈವರೆಗೆ ಬಿಜೆಪಿ ಮೈತ್ರಿಕೂಟ 44 ಸ್ಥಾನ ಹೊಂದಿತ್ತು (ಬಿಜೆಪಿ 40, ಪಕ್ಷೇತರರು 3, ಹರ್ಯಾಣ ಲೋಕಹಿತ ಪಾರ್ಟಿ 1). ಇನ್ನು ವಿಪಕ್ಷಗಳಲ್ಲಿ ಕಾಂಗ್ರೆಸ್ 30, ಜೆಜೆಪಿ 10, 3 ಪಕ್ಷೇತರರು ಹಾಗೂ ಐಎನ್‌ಎಲ್‌ಡಿಯ ಒಬ್ಬರಿದ್ದರು. ಆದರೆ ಈಗ 3 ಪಕ್ಷೇತರರು ಬೆಂಬಲ ಹಿಂಪಡೆದಿರುವ ಕಾರಣ ಬಿಜೆಪಿ ಮೈತ್ರಿಕೂಟದ ಬಲ 41ಕ್ಕೆ ಇಳಿದಿದೆ. ಹೀಗಾಗಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ.