ಪಟನಾ: ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಮುಸ್ಲಿಮರಿಗೆ ಪಾಲು ನೀಡುವ ವಿಚಾರ ದೇಶಾದ್ಯಂತ ಚುನಾವಣಾ ಪ್ರಚಾರದ ಸರಕಾಗಿರುವ ಸಮಯದಲ್ಲೇ ಬಿಹಾರದ ಆರ್‌ಜೆಡಿ ನಾಯಕ ಲಾಲುಪ್ರಸಾದ್ ಯಾದವ್ ‘ಮುಸ್ಲಿಮರಿಗೆ ಪೂರ್ಣ ಮೀಸಲಾತಿ ಸಿಗಬೇಕು’ ಎಂದು ಹೇಳುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಲಾಲು ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದು, ‘ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಿರುವವರು ಮುಸ್ಲಿಂ ಮೀಸಲಾತಿಯ ಪರ ಮಾತನಾಡುತ್ತಿದ್ದಾರೆ. ಇಂಡಿಯಾ ಒಕ್ಕೂಟಕ್ಕೆ ತುಷ್ಟೀಕರಣದಿಂದ ಆಚೆ ಏನೂ ಕಾಣಿಸುವುದಿಲ್ಲ. ಅವರು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲನ್ನು ಕಿತ್ತು ಮುಸ್ಲಿಮರಿಗೆ ನೀಡಲು ಬಯಸುತ್ತಿದ್ದಾರೆ. ಲಾಲು ಹೇಳಿಕೆ ಇಂಡಿಯಾ ಕೂಟದ ಬಣ್ಣವನ್ನು ಬಯಲು ಮಾಡಿದೆ’ ಎಂದು ಕಿಡಿಕಾರಿದ್ದಾರೆ.ಮಂಗಳವಾರ ಪಟನಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಲಾಲುಪ್ರಸಾದ್, ‘ಬಿಜೆಪಿಯವರು ಸಂವಿಧಾನದಲ್ಲಿ ನೀಡಿರುವ ಮೀಸಲಾತಿಗೆ ವಿರುದ್ಧವಿದ್ದಾರೆ. ಅವರು ಸಂವಿಧಾನವನ್ನು ಬದಲಿಸಿ ಮೀಸಲಾತಿ ರದ್ದುಪಡಿಸಲು ಹೊರಟಿದ್ದಾರೆ. ಆದರೆ ಮುಸ್ಲಿಮರಿಗೆ ಪೂರ್ಣ ಮೀಸಲಾತಿ ಸಿಗಬೇಕು’ ಎಂದು ಹೇಳಿದರು.
ಇದಕ್ಕೆ ಮಧ್ಯಪ್ರದೇಶದ ಧಾರ್‌ನಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣದಲ್ಲಿ ಮೋದಿ ತಿರುಗೇಟು ನೀಡಿ, ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಆರೋಗ್ಯದ ಕಾರಣ ನೀಡಿ ಜಾಮೀನು ಪಡೆದು ಇತ್ತೀಚೆಗೆ ಹೊರಬಂದ ಇಂಡಿಯಾ ಒಕ್ಕೂಟದ ದೊಡ್ಡ ನಾಯಕರೊಬ್ಬರು ಮುಸ್ಲಿಮರಿಗೆ ಪೂರ್ಣ ಮೀಸಲು ಸಿಗಬೇಕೆನ್ನುವ ಮೂಲಕ ಇಂಡಿಯಾ ಕೂಟದ ಬಣ್ಣವನ್ನು ಬಯಲು ಮಾಡಿದ್ದಾರೆ ಎಂದು ಹೇಳಿದರು.ಲಾಲು ಹೇಳಿಕೆಗೆ ಬಿಹಾರದ ಜೆಡಿಯು ಕೂಡ ವಿರೋಧ ವ್ಯಕ್ತಪಡಿಸಿದ್ದು, ‘ಅವರ ಹೇಳಿಕೆ ಸಂವಿಧಾನಕ್ಕೆ ಹಾಗೂ ಮಂಡಲ ಆಯೋಗದ ವರದಿಗೆ ವಿರುದ್ಧವಾದುದು’ ಎಂದು ಹೇಳಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರು ಲಾಲು ಹೇಳಿಕೆಗೆ ಪ್ರತಿಕ್ರಿಯಿಸಿ, ‘ಮುಸ್ಲಿಮರಿಗೆ ಪೂರ್ಣ ಮೀಸಲು ಸಿಗಬೇಕು ಎಂಬ ಹೇಳಿಕೆ ಬಹಳ ಗಂಭೀರವಾದುದು. ಇಂಡಿಯಾ ಒಕ್ಕೂಟದವರು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಯವರ ಮೀಸಲು ಕಿತ್ತು ಮುಸ್ಲಿಮರಿಗೆ ನೀಡಲು ಹೊರಟಿದ್ದಾರೆ’ ಎಂದು ಹೇಳಿದರು.ಲಾಲು ಸ್ಪಷ್ಟನೆ:
ಆದರೆ ವಿವಾದದ ಬೆನ್ನಲ್ಲೇ ಲಾಲು ಸ್ಪಷ್ಟನೆ ನೀಡಿ, ‘ಮೀಸಲು ಸಾಮಾಜಿಕ ಆಧಾರಿತವಾಗಿದೆ ಮತ್ತು ಧರ್ಮ ಆಧರಿತವಲ್ಲ. ಧರ್ಮ ಆಧರಿಸಿ ಮೀಸಲು ನೀಡಿ ಎಂದು ನಾನು ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.