ಕಾಶ್ಮೀರ ಉಗ್ರ ದಾಳಿ: ಐವರು ಸೈನಿಕರು ಬಲಿ

KannadaprabhaNewsNetwork |  
Published : Dec 22, 2023, 01:30 AM IST
ಸೇನೆಯ ವಾಹನದ ಮೇಲೆ ದಾಳಿ | Kannada Prabha

ಸಾರಾಂಶ

ಜಮ್ಮು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಗುರುವಾರ ಸೇನೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನಾ ಸ್ಥಳ ರಕ್ತಸಿಕ್ತವಾಗಿದೆ.

ಪೂಂಚ್‌/ ಜಮ್ಮು: ಭಯೋತ್ಪಾದಕರ ಶೋಧ ಕಾರ್ಯಾಚರಣೆಗೆ ತೆರಳಿದ್ದ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಐವರು ಯೋಧರು ಸಾವನ್ನಪ್ಪಿ, ಇತರೆ ಇಬ್ಬರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.ಕಡಿದಾದ ತಿರುವಿನ ಪ್ರದೇಶದಲ್ಲಿ ಯೋಧರು ಮತ್ತು ಉಗ್ರರ ನಡುವೆ ಭೀಕರ ಸೆಣಸಾಟ ನಡೆದಿದ್ದಕ್ಕೆ ಸಾಕ್ಷ್ಯವೆಂಬಂತೆ ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು, ಒಡೆದು ಹೋದ ಹೆಲ್ಮೆಟ್‌ಗಳು, ಸೇನಾ ವಾಹನದ ಗಾಜು ಒಡೆದು ಹೋಗಿರುವುದು ಕಂಡುಬಂದಿದೆ. ಜೊತೆಗೆ ಈ ದೃಶ್ಯಗಳು ಉಗ್ರರು ಮತ್ತು ಯೋಧರು ಪರಸ್ಪರ ಕೈ ಕೈ ಮಿಲಾಯಿಸಿರುವ ಸಾಧ್ಯತೆಯನ್ನೂ ಮುಂದಿಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಏನಾಯ್ತು?:ಧೇರಾ ಕಿ ಗಲಿ ಕಾಡಿನಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಸ್ಥಳಕ್ಕೆ ಧಾವಿಸಿದ್ದ ಯೋಧರು ಅಲ್ಲಿ ಶೋಧ ಕೈಗೊಂಡಿದ್ದರು. ಅದೇ ಸ್ಥಳಕ್ಕೆ ಮತ್ತಷ್ಟು ಯೋಧರನ್ನು ಕರೆಸಿಕೊಳ್ಳಲಾಗಿತ್ತು. ಹೀಗಾಗಿ ಹೆಚ್ಚುವರಿ ಯೋಧರನ್ನು ಹೊಂದಿದ್ದ ಒಂದು ಟ್ರಕ್‌ ಮತ್ತು ಜಿಪ್ಸಿ ಕಡಿದಾದ ತಿರುವಿನ ಪ್ರದೇಶದಲ್ಲಿ ಆಗಮಿಸುತ್ತಲೇ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಯೋಧರು ಕೂಡಾ ಪ್ರತಿದಾಳಿ ನಡೆಸಿದ್ದಾರೆ. ಆದರೆ ದುರದೃಷ್ಟವಶಾತ್‌ ಉಗ್ರರ ದಾಳಿಗೆ ನಾಲ್ವರು ಯೋಧರು ಬಲಿಯಾಗಿದ್ದಾರೆ.ಘಟನೆ ಬಳಿಕ ಯೋಧರಿಗೆ ಸೇರಿದ ಶಸ್ತ್ರಾಸ್ತ್ರಗಳೊಂದಿಗೆ ಉಗ್ರರು ಪರಾರಿಯಾಗಿದ್ದಾರೆ. ಉಗ್ರರ ಪತ್ತೆಗಾಗಿ ಸ್ಥಳದಲ್ಲಿ ಮತ್ತೆ ಬೃಹತ್‌ ಕಾರ್ಯಾಚರಣೆ ಆರಂಭಿಸಲಾಗಿದೆ.ಪದೇ ಪದೇ ದಾಳಿ:ನ.22ರಂದು ಉಗ್ರರು ಹಾಗೂ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಯೋಧ ಸೇರಿದಂತೆ ಐವರು ಸೈನಿಕರು ಬಲಿಯಾಗಿದ್ದರು. ಇದಕ್ಕೂ ಮೊದಲು ಸೆಪ್ಟೆಂಬರ್‌ನಲ್ಲಿ ನಡೆದ ದಾಳಿಗೆ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಈ ವರ್ಷ ರಜೌರಿ, ಪೂಂಛ್‌ ಮತ್ತು ರೆಸಾಯ್ ಜಿಲ್ಲೆಗಳಲ್ಲಿ ಯೋಧರು ಮತ್ತು ಉಗ್ರರ ನಡುವಿನ ಮುಖಾಮುಖಿ, ಉಗ್ರರ ದಾಳಿಯಲ್ಲಿ 54 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 19 ಯೋಧರು, 28 ಉಗ್ರರು ಮತ್ತು 7 ನಾಗರಿಕರು.

PREV

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ