ನೀಟ್‌ ಮರು ಪರೀಕ್ಷೆ: 813 ವಿದ್ಯಾರ್ಥಿಗಳು ಮಾತ್ರ ಹಾಜರ್‌

KannadaprabhaNewsNetwork |  
Published : Jun 24, 2024, 01:30 AM ISTUpdated : Jun 24, 2024, 04:18 AM IST
ನೀಟ್‌ | Kannada Prabha

ಸಾರಾಂಶ

ಈ ಹಿಂದೆ ನೀಟ್-ಯುಜಿಯಲ್ಲಿ ಗ್ರೇಸ್ ಅಂಕಗಳನ್ನು ಪಡೆದ 1,563 ಅಭ್ಯರ್ಥಿಗಳಿಗೆ ಭಾನುವಾರ ಮರುಪರೀಕ್ಷೆ ನಡೆದಿದ್ದು, ಪೈಕಿ 813 ಅಭ್ಯರ್ಥಿಗಳು (ಶೇ.52) ಮಾತ್ರ ಹಾಜರಾಗಿದ್ದಾರೆ. 750 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

 ನವದೆಹಲಿ : ಈ ಹಿಂದೆ ನೀಟ್-ಯುಜಿಯಲ್ಲಿ ಗ್ರೇಸ್ ಅಂಕಗಳನ್ನು ಪಡೆದ 1,563 ಅಭ್ಯರ್ಥಿಗಳಿಗೆ ಭಾನುವಾರ ಮರುಪರೀಕ್ಷೆ ನಡೆದಿದ್ದು, ಪೈಕಿ 813 ಅಭ್ಯರ್ಥಿಗಳು (ಶೇ.52) ಮಾತ್ರ ಹಾಜರಾಗಿದ್ದಾರೆ. 750 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಮೇ 5ರಂದು 6 ಕೇಂದ್ರಗಳಲ್ಲಿ ತಡವಾಗಿ ಪರೀಕ್ಷೆ ಆರಂಭವಾಗಿತ್ತು ಎಂಬ ಕಾರಣ ನೀಡಿ ಆ ಸಮಯ ನಷ್ಟ ಸರಿದೂಗಿಸಲು 1563 ವಿದ್ಯಾರ್ಥಿಗಳಿಗೆ ಗ್ರೇಸ್‌ ಅಂಕ ನೀಡಲಾಗಿತ್ತು. ಆದರೆ ಅದು ವಿವಾದಕ್ಕೆ ಈಡಾದ ಕಾರಣ ಈ ಅಂಕ ಪಡೆದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಈ ಪ್ರಕಾರ 7 ಕೇಂದ್ರಗಳಲ್ಲಿ ಭಾನುವಾರ ಮರುಪರೀಕ್ಷೆ ನಡೆಸಲಾಯಿತು.

ಈ ಬಗ್ಗೆ ಹೇಳಿಕೆ ನೀಡಿರುವ ಎನ್‌ಟಿಎ ‘1,563 ಅಭ್ಯರ್ಥಿಗಳಲ್ಲಿ ಶೇ.52 ವಿದ್ಯಾರ್ಥಿಗಳು (813 ಅಭ್ಯರ್ಥಿಗಳು) ಮರುಪರೀಕ್ಷೆಗೆ ಹಾಜರಾಗಿದ್ದಾರೆ’ ಎಂದು ಹೇಳಿದೆ.

1563 ವಿದ್ಯಾರ್ಥಿಗಳಿಗೂ ಪರೀಕ್ಷೆ ಕಡ್ಡಾಯ ಆಗಿರಲಿಲ್ಲ. ‘ಯಾವ ಅಭ್ಯರ್ಥಿಗಳು ಮರು ಪರೀಕ್ಷೆಯನ್ನು ಬರೆಯುತ್ತಾರೋ ಅವರಿಗೆ ಹಿಂದಿನ ಪರೀಕ್ಷೆಯ ಯಾವುದೇ ಅಂಕ ಪರಿಗಣಿಸುವುದಿಲ್ಲ. ಹಾಗೆಯೇ ಮರು ಪರೀಕ್ಷೆ ಬರೆಯಲು ಬಯಸದ ಅಭ್ಯರ್ಥಿಗಳಿಗೆ ಹಿಂದಿನ ಪರೀಕ್ಷೆಯಲ್ಲಿ ಕೃಪಾಂಕ ಹೊರತು ಪಡಿಸಿ ಬಂದ ಉಳಿದ ಅಂಕ ಮಾತ್ರ ಪರಿಗಣಿಸಲಾಗುತ್ತದೆ’ ಎಂದು ಎನ್‌ಟಿಎ ಹೇಳಿತ್ತು. ಹೀಗಾಗಿ ಈಗ 813 ಅಭ್ಯರ್ಥಿಗಳಿಗೆ ಭಾನುವಾರದ ಪರೀಕ್ಷಾ ಅಂಕ ಮಾತ್ರ ಪರಿಗಣಿಸಲಾಗುತ್ತದೆ. ಗೈರು ಹಾಜರಾದ 750 ವಿದ್ಯಾರ್ಥಿಗಳಿಗೆ ಹಿಂದಿನ ಗ್ರೇಸ್ ಅಂಕ ಹೊರತುಪಡಿಸಿ, ಅಂದು ಅವರು ಪಡೆದಿದ್ದ ಮೂಲ ಅಂಕಗಳು ಮಾತ್ರ ಪರಿಗಣನೆ ಆಗಲಿವೆ.

17 ವಿದ್ಯಾರ್ಥಿಗಳು ಡಿಬಾರ್:

ಈ ನಡುವೆ, ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮಗಳ ಎಸಗಿದ ಆರೋಪ ಹೊತ್ತಿದ್ದ 17 ಅಭ್ಯರ್ಥಿಗಳನ್ನು ಬಿಹಾರದ ಕೇಂದ್ರಗಳಿಂದ ಭಾನುವಾರ ಡಿಬಾರ್ ಮಾಡಲಾಗಿದೆ. ಈ ಹಿಂದೆಯೂ 63 ಅಭ್ಯರ್ಥಿಗಳನ್ನು ಎನ್‌ಡಿಎ ಡಿಬಾರ್ ಮಾಡಿತ್ತು. ಶನಿವಾರವೂ ಗುಜರಾತ್‌ನ ಗೋಧ್ರಾದಿಂದ 30 ಹೆಚ್ಚುವರಿ ಅಭ್ಯರ್ಥಿಗಳನ್ನು ಡಿಬಾರ್ ಮಾಡಿತ್ತು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ