ಮಿನಿ ತಿರುಪತಿ ಕಾಲ್ತುಳಿತಕ್ಕೆ 9 ಬಲಿ

KannadaprabhaNewsNetwork |  
Published : Nov 02, 2025, 02:45 AM ISTUpdated : Nov 02, 2025, 04:34 AM IST
Mini tirupati Stampede

ಸಾರಾಂಶ

 ಬೆಂಗಳೂರು ಹಾಗೂ ಕರೂರು ಕಾಲ್ತುಳಿತ  ನೆನಪು ಮಾಸುವ ಮುನ್ನವೇ   ಮತ್ತೊಂದು ದುರಂತ ಆಂಧ್ರದಲ್ಲಿ ಸಂಭವಿಸಿದೆ. ಮಿನಿ ತಿರುಪತಿ ಎಂದೇ ಕಳೆದ ಕೆಲವು ತಿಂಗಳಲ್ಲಿ ಖ್ಯಾತಿ ಪಡೆದಿದ್ದ ಶ್ರೀಕಾಕುಳಂ  ಕಾಶಿಬುಗ್ಗದ ವೆಂಕಟೇಶ್ವರ ದೇಗುಲದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 9 ಭಕ್ತರು ಸಾವನ್ನಪ್ಪಿದ್ದಾರೆ 

ಶ್ರೀಕಾಕುಳಂ (ಆಂಧ್ರ) :  ಇತ್ತೀಚಿನ ಬೆಂಗಳೂರು ಹಾಗೂ ತಮಿಳುನಾಡಿನ ಕರೂರು ಕಾಲ್ತುಳಿತ ಘಟನೆಯ ನೆನಪು ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ದುರಂತ ಆಂಧ್ರದಲ್ಲಿ ಸಂಭವಿಸಿದೆ. ಮಿನಿ ತಿರುಪತಿ ಎಂದೇ ಕಳೆದ ಕೆಲವು ತಿಂಗಳಲ್ಲಿ ಖ್ಯಾತಿ ಪಡೆದಿದ್ದ ಹಾಗೂ ಇನ್ನೂ ಕೆಲವು ನಿರ್ಮಾಣ ಬಾಕಿ ಇದ್ದ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ನೂತನ ಕಾಶಿಬುಗ್ಗದ ವೆಂಕಟೇಶ್ವರ ದೇಗುಲದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 9 ಭಕ್ತರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೊದಲ ಮಹಡಿಯಲ್ಲಿರುವ ದೇಗುಲಕ್ಕೆ ತಲುಪಲು ಜನ ಮೆಟ್ಟಿಲಿನ ಮೇಲೆ ನಿಂತಿದ್ದಾಗ ಅದರ ರೇಲಿಂಗ್ಸ್‌ ಮುರಿದು, ಅವರೆಲ್ಲ ಕೆಳಗೆ ಬಿದ್ದ ಕಾರಣ ನೂಕುನುಗ್ಗಾಟ ಆಗಿ ಈ ದುರ್ಘಟನೆ ಸಂಭವಿಸಿದೆ. ತಿರುಪತಿಯಲ್ಲಿರುವ ದೇಗುಲವನ್ನೇ ಹೋಲುವ ಈ ದೇವಸ್ಥಾನವನ್ನು 4 ತಿಂಗಳ ಹಿಂದೆ ತೆರೆಯಲಾಗಿತ್ತು. ಇನ್ನೂ ಕೆಲವು ಭಾಗಗಳ ನಿರ್ಮಾಣ ನಡೆಯುತ್ತಿದೆ. ಇಲ್ಲಿಗೆ ಶನಿವಾರ ಸಾಮಾನ್ಯವಾಗಿ 1,500ರಿಂದ 2,000 ಭಕ್ತರು ಬರುತ್ತಾರೆ. ಆದರೆ ಈ ಬಾರಿ ಕಾರ್ತಿಕ ಮಾಸದ ಏಕಾದಶಿಯಾದ್ದರಿಂದ ಏಕಕಾಲಕ್ಕೆ 25,000ಕ್ಕೂ ಹೆಚ್ಚು ಜನ ಬಂದಿದ್ದರು. ಮಧ್ಯಾಹ್ನ 11:30ರ ಸುಮಾರಿಗೆ ದರ್ಶನಕ್ಕೆಂದು ಅವರು ಮೊದಲ ಮಹಡಿಯಲ್ಲಿರುವ ಗರ್ಭಗುಡಿಗೆ ಹೋಗುವ ಮೆಟ್ಟಿಲುಗಳ ಮೇಲೆ ನಿಂತಿದ್ದ ವೇಳೆ, ರೇಲಿಂಗ್ಸ್‌ ಮುರಿದಿದೆ. ಪರಿಣಾಮವಾಗಿ, ಅದಕ್ಕೊರಗಿ ನಿಂತಿದ್ದವರೆಲ್ಲಾ ಕೆಳಗೆ ಬಿದ್ದಿದ್ದಾರೆ. ಇದರಿಂದ ಭಾರೀ ನೂಕುನುಗ್ಗಲಾಗಿ ನೆರೆದಿದ್ದವರಿಗೆ ಗಾಬರಿಯಾಗಿದ್ದು, ಕಾಲ್ತುಳಿತ ಸಂಭವಿಸಿದೆ.

ಈ ವೇಳೆ 7 ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾಗಲೇ ಕೊನೆಯುಸಿರೆಳೆದರು. ಮೃತರಲ್ಲಿ 35-40 ವರ್ಷದ ಮಹಿಳೆಯರೇ ಹೆಚ್ಚು ಎಂದು ಶ್ರೀಕಾಕುಳಂನ ಜಿಲ್ಲಾಧಿಕಾರಿ ಸ್ವಪ್ನಿಲ್‌ ದಿನಕರ್‌ ಪುಂಡ್ಕರ್‌ ಹೇಳಿದ್ದಾರೆ. ಇತ್ತ ಕಾಶಿಬುಗ್ಗ ದೇವಾಲಯ ಖಾಸಗಿಯವರದ್ದಾಗಿದ್ದು, ಅವರು ಜನದಟ್ಟಣೆಯಾಗುವ ಸಂಭವದ ಬಗ್ಗೆ ಸರ್ಕಾರಕ್ಕೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ಆದಕಾರಣ ಜನಜಂಗುಳಿಯನ್ನು ನಿರ್ವಹಿಸಲು ಅಗತ್ಯ ವ್ಯವಸ್ಥೆಗಳು ಆಗಿರಲಿಲ್ಲ. ಜತೆಗೆ, ದೇವಸ್ಥಾನಕ್ಕೆ ಪ್ರವೇಶಿಸುವವರು ಹಾಗೂ ನಿರ್ಗಮಿಸುವವರು ಒಂದೇ ದ್ವಾರ ಬಳಸಬೇಕಿದ್ದರಿಂದ ಇಕ್ಕಟ್ಟಾಗಿತ್ತು. ಇದೂ ದಟ್ಟಣೆಗೆ ಎಡೆಮಾಡಿಕೊಟ್ಟಿತ್ತು ಎಂದು ತಿಳಿದುಬಂದಿದೆ.

 ಗಣ್ಯರ ಸಂತಾಪ:

ಕಾಶಿಬುಗ್ಗದಲ್ಲಿ ಸಂಭವಿಸಿದ ಭೀಕರ ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆಂಧ್ರ ಸಿಎಂ ರೇವಂತ್‌ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಪಿಎಂ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ 2 ಲಕ್ಷ ರು. ಪರಿಹಾರ ಹಾಗೂ ಗಾಯಾಳುಗಳಿಗೆ 50,000 ರು. ಪರಿಹಾರ ನೀಡುವುದಾಗಿ ಪ್ರಧಾನಿಗಳ ಕಚೇರಿ ತಿಳಿಸಿದೆ.

ಏನು ಕಾರಣ?

- ಆಂಧ್ರದ ಶ್ರೀಕಾಕುಳಂನಲ್ಲಿರುವ ಖಾಸಗಿ ದೇವಾಲಯವನ್ನು ಮಿನಿ ತಿರುಪತಿ ಎಂದೇ ಕರೆಯಲಾಗುತ್ತದೆ

- ಸಾಮಾನ್ಯ ಶನಿವಾರಗಳಲ್ಲಿ ಈ ದೇಗುಲಕ್ಕೆ ಸುಮಾರು 2000 ಮಂದಿ ಭಕ್ತರು ಭೇಟಿ ನೀಡುತ್ತಾರೆ

- ಮೊದಲ ಮಹಡಿಯಲ್ಲಿ ದೇಗುಲವಿದೆ. ಕಾರ್ತಿಕ ಏಕಾದಶಿ ಕಾರಣ 25000ಕ್ಕೂ ಅಧಿಕ ಮಂದಿ ಆಗಮಿಸಿದ್ದರು

- ಪ್ರವೇಶ- ನಿರ್ಗಮನಕ್ಕೆ ಒಂದೇ ದ್ವಾರವಿತ್ತು. ಮಿತಿಮೀರಿದ ಜನದಟ್ಟಣೆಯಿಂದ ನೂಕುನುಗ್ಗಲು ಉಂಟಾಯಿತು

- ಈ ವೇಳೆ ರೇಲಿಂಗ್ಸ್‌ ಮುರಿದು ಒಬ್ಬರ ಮೇಲೆ ಒಬ್ಬರು ಬಿದ್ದರು. ಈ ವೇಳೆ ಕಾಲ್ತುಳಿತವಾಗಿ 9 ಜನರು ಸಾವು

PREV
Read more Articles on

Recommended Stories

ಮೆಟ್ರೋ ಬೋಗಿ ಮೇಲೆ ರಾರಾಜಿಸಿದ ಪುನೀತ್!
ಕೇರಳ ಕಡುಬಡತನ ಮುಕ್ತ ರಾಜ್ಯ - ಇನ್ನೆಂದೂ ಕಡುಬಡತನ ಬರದಂತೆ ಮಾಡ್ತೇವೆ: ಸಿಎಂ