ಅನಾರೋಗ್ಯ ವದಂತಿ ನಡುವೆ ನಿತೀಶ್‌ ವಿಡಿಯೋ : ಲಾಲುಗೆ ಚಾಟಿ

KannadaprabhaNewsNetwork |  
Published : Nov 02, 2025, 02:45 AM IST
CM Nitish Kumar

ಸಾರಾಂಶ

 ನಿತೀಶ್‌ ಕುಮಾರ್‌ ಆರೋಗ್ಯದ ಬಗ್ಗೆ ವದಂತಿಗಳಿವೆ ಹಾಗೂ ಅವರು ಪುನಃ ಸಿಎಂ ಆಗುತ್ತಾರಯೇ ಇಲ್ಲವೇ ಎಂಬ ಊಹಾಪೋಹಗಳಿವೆ. ಇದರ ನಡುವೆ  ಅನಿರೀಕ್ಷಿತವಾಗಿ 4 ನಿಮಿಷಗಳ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ ಹಾಗೂ ಆರ್‌ಜೆಡಿ ನೇತಾರ ಲಾಲು ಯಾದವ್‌ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಟನಾ: ಬಿಹಾರ ಚುನಾವಣೆ ವೇಳೆ ಸಿಎಂ ನಿತೀಶ್‌ ಕುಮಾರ್‌ ಆರೋಗ್ಯದ ಬಗ್ಗೆ ವದಂತಿಗಳಿವೆ ಹಾಗೂ ಅವರು ಪುನಃ ಸಿಎಂ ಆಗುತ್ತಾರಯೇ ಇಲ್ಲವೇ ಎಂಬ ಬಗ್ಗೆ ನಾನಾ ಊಹಾಪೋಹಗಳಿವೆ. ಇದರ ನಡುವೆ ಅವರು ಅನಿರೀಕ್ಷಿತವಾಗಿ 4 ನಿಮಿಷಗಳ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ ಹಾಗೂ ಆರ್‌ಜೆಡಿ ನೇತಾರ ಲಾಲು ಯಾದವ್‌ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯದಲ್ಲಿ ಮತ್ತೊಮ್ಮೆ ಎನ್‌ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ನಾನು ನನ್ನ ಕುಟುಂಬಕ್ಕಾಗಿ ಏನೂ ಮಾಡಿಲ್ಲ, ರಾಜ್ಯದ ಏಳಿಗೆ ಯಾವತ್ತಿಗೂ ನನ್ನ ಆದ್ಯತೆಯಾಗಿತ್ತು. ಬಿಹಾರಿ ಎಂದರೆ ಮೂಗುಮುರಿಯುವ, ಅವಹೇಳನ ಮಾಡುವಂಥ ಹೊತ್ತಿನಲ್ಲಿ ನಾನು ರಾಜ್ಯದ ಚುಕ್ಕಾಣಿ ಹಿಡಿದೆ. ಆ ನಂತರ ನಾವು ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡಿದೆವು. ಇದೀಗ ಬಿಹಾರಿ ಎಂದು ಹೇಳಿಕೊಳ್ಳಲು ಜನರಿಗೆ ಹೆಮ್ಮೆಯಾಗುತ್ತಿದೆ’ ಎಂದು ತಿಳಿಸಿದ್ದಾರೆ.

ನಿಮಗೆ ಅಭಿವೃದ್ಧಿ ಬೇಕೋ? ಜಂಗಲ್‌ ರಾಜ್ಯವೋ?: ಶಾ

ಪಟನಾ: ‘ಬಿಹಾರದ ಚುನಾವಣೆಯಲ್ಲಿ ನಿಮಗೆ ಮೋದಿ-ನಿತೀಶ್‌ ಕುಮಾರ್‌ ಅವರ ಅಭಿವೃದ್ಧಿ ರಾಜ್ಯ ಬೇಕೋ ಅಥವಾ ಆರ್‌ಜೆಡಿ ನೇತೃತ್ವದ ಮೈತ್ರಿಕೂಟದ ಜಂಗಲ್‌ ರಾಜ್ಯ ಬೇಕೋ?’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜನರನ್ನು ಪ್ರಶ್ನಿಸಿದ್ದಾರೆ.ಬಿಹಾರದ ವಿವಿಧ ಕಡೆಗಳಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಈ ಚುನಾವಣೆಯು ಬಿಹಾರದ ಭವಿಷ್ಯವನ್ನು ಯಾರಿಗೆ ವಹಿಸಬೇಕೆಂದು ನಿರ್ಧರಿಸಲು ಒಂದು ಅವಕಾಶವಾಗಿದೆ. ಒಂದು ಕಡೆ ಜಂಗಲ್‌ ರಾಜ್ಯ ಆರಂಭಿಸಿದವರು. ಮತ್ತೊಂದು ಕಡೆ ಅಭಿವೃದ್ಧಿಯನ್ನು ತಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜೋಡಿಯಿದೆ’ ಎಂದರು.ಬಿಹಾರದಲ್ಲಿ ರಾಹುಲ್‌ ಗಾಂಧಿ ನಡೆಸಿದ ವೋಟ್‌ ಅಧಿಕಾರ ಯಾತ್ರೆ ಬಗ್ಗೆ ಮಾತನಾಡಿದ ಅವರು ‘ರಾಹುಲ್‌ ಗಾಂಧಿ ಎಷ್ಟು ಬೇಕಾದರೂ ಯಾತ್ರೆ ಕೈಗೊಳ್ಳಲಿ. ಪ್ರತಿ ನುಸುಳುಕೋರರನ್ನು ದೇಶದಿಂದ ಓಡಿಸಲಾಗುವುದು. ಮತಪಟ್ಟಿ ಪರಿಷ್ಕರಣೆಯ ಉದ್ದೇಶವೂ ಆದೇ ಆಗಿತ್ತು’ ಎಂದು ಹೇಳಿದರು.

ಆರ್‌ಜೆಡಿ ಗೆದ್ದರೆ ಬಿಹಾರ ಜಂಗಲ್‌ ರಾಜ್ಯ: ನಡ್ಡಾ

ಪಟನಾ/ ಸಿವಾನ್‌: ‘ಬಿಹಾರದಲ್ಲಿ ಆರ್‌ಜೆಡಿ ಅಧಿಕಾರಕ್ಕೆ ಬಂದರೆ ಜಂಗಲ್‌ ರಾಜ್ಯ ಮರಳುತ್ತದೆ ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಗ್ಯಾಂಗಸ್ಟರ್‌ ಶಹಾಬುದ್ದೀನ್‌ ಪುತ್ರನಿಗೆ ಟಿಕೆಟ್‌ ನೀಡಿರುವುದನ್ನು ಉಲ್ಲೇಖಿಸಿ ಆರ್‌ಜೆಡಿ ವಿರುದ್ಧ ಕಿಡಿಕಾರಿದರು.ಸಿವಾನ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಜಂಗಲ್‌ ರಾಜ್ಯದ ಸಮಯದಲ್ಲಿ ಅಪಹರಣ ಒಂದು ಉದ್ಯಮವಾಗಿ ಮಾರ್ಪಟ್ಟಿತ್ತು. ಅಂದಿನ ಮುಖ್ಯಮಂತ್ರಿಯವರ ಮನೆಯಲ್ಲಿ ಸುಲಿಗೆ ಇತ್ಯರ್ಥ ನಡೆಯುತ್ತಿತ್ತು. ಆರ್‌ಜೆಡಿ ಅಧಿಕಾರದಲ್ಲಿದ್ದಾಗ ಬಿಹಾರ ಜಂಗಲ್‌ ರಾಜ್ಯಕ್ಕೆ ಸಾಕ್ಷಿಯಾಗಿತ್ತು. ರಾಜ್ಯದಲ್ಲಿ ಸಂಪೂರ್ಣ ಅರಾಜಕತೆಯಿತ್ತು. ಕಾನೂನು ಸುವ್ಯವಸ್ಥೆ ಕುಸಿದಿತ್ತು. ಸಿವಾನ್‌ ಶಹಾಬುದ್ದೀನ್‌ ಉಗ್ರತ್ವವನ್ನು ಕಣ್ಣಾರೆ ಕಂಡಿತ್ತು. ಆದರೆ ಆರ್‌ಜೆಡಿ ಆ ಗ್ಯಾಂಗ್‌ಸ್ಟರ್‌ ಪುತ್ರನಿಗೆ ಟಿಕೆಟ್‌ ನೀಡಿದೆ. ಲಾಲು ಪ್ರಸಾದ್ ಅವರ ಪಕ್ಷಕ್ಕೆ ಬಿಹಾರದಲ್ಲಿ ಜಂಗಲ್‌ ರಾಜ್ಯ ಮರಳಿ ತರಬೇಕು ಎನ್ನುವುದು ಆಸೆ’ ಎಂದು ವಾಗ್ದಾಳಿ ನಡೆಸಿದರು.

‘ಆರ್‌ಜೆಡಿ ಸುಲಿಗೆ, ಅರಾಜಕತೆ, ದಾದಾಗಿರಿ ಪರ ನಿಂತಿದೆ. ಅವರ ಪಕ್ಷದ ಲಾಲು, ರಾಬ್ಡಿ, ತೇಜಸ್ವಿ, ಮಿಸಾಭಾರತಿ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಹಾಗಾಗಿ ಅವರಿಗೆ ಮತ ನೀಡಬೇಡಿ. ಬಿಹಾರ ನಿರಂತರವಾಗಿ ಅಭಿವೃದ್ಧಿ ಹೊಂದಬೇಕು ಎಂದಾದರೆ ಎನ್‌ಡಿಎಗೆ ಮತನೀಡಿ’ ಎಂದು ಜನರಲ್ಲಿ ಆಗ್ರಹಿಸಿದರು.

ಡಬಲ್‌ ಎಂಜಿನ್‌ ಅಲ್ಲ, ರಿಮೋಟ್‌ ಕಂಟ್ರೋಲ್‌ ಸರ್ಕಾರ: ಪ್ರಿಯಾಂಕಾ

ಬೇಗುಸರೈ : ‘ಬಿಹಾರದಲ್ಲಿ ಯಾವುದೇ ಡಬಲ್‌ ಎಂಜಿನ್‌ ಸರ್ಕಾರವಿಲ್ಲ. ಎಲ್ಲವನ್ನೂ ದಿಲ್ಲಿಯಿಂದ ರಿಮೋಟ್‌ ಕಂಟ್ರೋಲ್‌ ರೀತಿ ನಿರ್ವಹಿಸಲಾಗುತ್ತಿದೆ. ಅಲ್ಲದೇ ಯಾರೂ ಕೂಡ ಸಿಎಂ ನಿತೀಶ್‌ಗೆ ಗೌರವ ನೀಡುತ್ತಿಲ್ಲ’ ಎಂದು ವಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಬಿಹಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಎನ್‌ಡಿಎ ವಿಭಜನೆ ರಾಜಕೀಯದಲ್ಲಿ ತೊಡಗಿಕೊಂಡಿದೆ. ಜನರ ಗಮನ ಬೇರೆಡೆ ಸೆಳೆಯಲು ನಕಲಿ ರಾಷ್ಟ್ರೀಯತೆ ಅಸ್ತ್ರ ಬಳಸುತ್ತಿದೆ. ಬಿಹಾರದಲ್ಲಿ ಡಬಲ್‌ ಎಂಜಿನ್‌ ಸರ್ಕಾರವಿಲ್ಲ. ಒಂದೇ ಎಂಜಿನ್‌ ಸರ್ಕಾರ ಎಲ್ಲವನ್ನೂ ದೆಹಲಿಯಿಂದಲೇ ನಿಯಂತ್ರಿಸುತ್ತಿದೆ. ಅಲ್ಲದೇ ಮುಖ್ಯಮಂತ್ರಿ ಅವರ ಮಾತನ್ನು ಯಾರು ಕೇಳುತ್ತಿಲ್ಲ. ಅವರಿಗೆ ಗೌರವವೂ ಕೊಡುತ್ತಿಲ್ಲ’ಎಂದರು.

ಇದೇ ವೇಳೆ ಬಿಹಾರದಲ್ಲಿ ನಡೆದ ಮತಪಟ್ಟಿ ಪರಿಷ್ಕರಣೆ ವಿಚಾರವಾಗಿ ವಾಗ್ದಾಳಿ ನಡೆಸಿದ ಅವರು, ‘ ಅವರು ಮೊದಲು ಜನರನ್ನು ವಿಭಜಿಸಿದರು. ಯುದ್ಧಕ್ಕೆ ಹೋದರು ಆದರೆ ಅದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಈಗ ಅವರು ಜನರ ಮತಗಳನ್ನು ಕಸಿಯುತ್ತಿದ್ದಾರೆ’ ಎಂದು ಹರಿಹಾಯ್ದರು.ಅಲ್ಲದೇ ‘ಎನ್‌ಡಿಎ ಹೈಕಮಾಂಡ್‌ ನಾಯಕರು ಬಂದಾಗ ಮುಂದಿನ 20 ವರ್ಷಗಳ ಬಗ್ಗೆ, ಹಿಂದಿನ ಬಗ್ಗೆ ಮಾತನಾಡುತ್ತಾರೆ. ನೆಹರು, ಇಂದಿರಾ ಅವರನ್ನು ಟೀಕಿಸುತ್ತಾರೆ. ಆದರೆ ಬಿಹಾರದಲ್ಲಿ ಸದ್ಯ ಇರುವ ವಲಸೆ, ಉದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ’ ಎಂದು ಚಾಟಿ ಬೀಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!