ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!

KannadaprabhaNewsNetwork |  
Published : Dec 08, 2025, 01:15 AM IST
Sky

ಸಾರಾಂಶ

ವಿದ್ಯುತ್‌ ಆವಿಷ್ಕಾರದ ಮೂಲಕ ಕತ್ತಲಲ್ಲಿ ಬೆಳಕು ನೀಡುವ ದೀಪಗಳನ್ನು ಸೃಷ್ಟಿಸಿದ ವಿಜ್ಞಾನಿಗಳು, ತಂತ್ರಜ್ಞರು ಇದೀಗ ಕತ್ತಲೆಗೇ ಅಂತ್ಯ ಹಾಡುವ ಸಾಹಸವೊಂದಕ್ಕೆ ಕೈಹಾಕುತ್ತಿದ್ದಾರೆ. ಅಂತರಿಕ್ಷದಲ್ಲೇ ಪ್ರತಿಫಲಿಸುವ ಕನ್ನಡಿ ಕೂರಿಸಿ ಕತ್ತಲಲ್ಲೂ ಹಗಲು ಸೃಷ್ಟಿಸುವ ಪ್ರಯೋಗಕ್ಕೆ ಮುಂದಾಗಿದ್ದಾರೆ.

ನವದೆಹಲಿ: ವಿದ್ಯುತ್‌ ಆವಿಷ್ಕಾರದ ಮೂಲಕ ಕತ್ತಲಲ್ಲಿ ಬೆಳಕು ನೀಡುವ ದೀಪಗಳನ್ನು ಸೃಷ್ಟಿಸಿದ ವಿಜ್ಞಾನಿಗಳು, ತಂತ್ರಜ್ಞರು ಇದೀಗ ಕತ್ತಲೆಗೇ ಅಂತ್ಯ ಹಾಡುವ ಸಾಹಸವೊಂದಕ್ಕೆ ಕೈಹಾಕುತ್ತಿದ್ದಾರೆ. ಅಂತರಿಕ್ಷದಲ್ಲೇ ಪ್ರತಿಫಲಿಸುವ ಕನ್ನಡಿ ಕೂರಿಸಿ ಕತ್ತಲಲ್ಲೂ ಹಗಲು ಸೃಷ್ಟಿಸುವ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ರಿಫ್ಲೆಕ್ಟ್‌ ಆರ್ಬಿಟಲ್‌ ಹೆಸರಿನ ಸ್ಟಾರ್ಟಪ್‌ ಕಂಪನಿ, ರಾತ್ರಿಯನ್ನು ಹಗಲು ಮಾಡುವ ಸಾಹಸಕ್ಕೆ ಮುಂದಾಗಿದೆ. ಇದಕ್ಕಾಗಿ ಪ್ರತಿಫಲಿಸುವ ಕನ್ನಡಿಯನ್ನೊಳಗೊಂಡ ಸಾವಿರಾರು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಬಿಡಲು ಹೊರಟಿದೆ.

ಮುಂದಿನ ವರ್ಷದಿಂದ ಕಂಪನಿ ತನ್ನ ಕಾರ್ಯ ಆರಂಭಿಸಲು ಉದ್ದೇಶಿದ್ದು, ಇದಕ್ಕಾಗಿ ಅಮೆರಿಕದ ಫೆಡರಲ್‌ ಕಮ್ಯುನಿಕೇಷನ್ಸ್‌ ಕಮಿಷನ್‌ಗೆ ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಿದೆ.

ರಕ್ಷಣಾ ಕಾರ್ಯಾಚರಣೆ, ಮಂದ ಬೆಳಕಿನ ಋತುಮಾನದಲ್ಲಿ ಇಂಥ ಕನ್ನಡಿಗಳಿಂದ ಹೆಚ್ಚಿನ ಅನುಕೂಲ ಆಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಇದಕ್ಕೆ ಖಗೋಳಶಾಸ್ತ್ರಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ನಿಸರ್ಗಕ್ಕೆ ವಿರುದ್ಧವಾದ ಸಾಹಸ. ಸೂರ್ಯನಂಥ ಪ್ರಬಲ ಶಕ್ತಿಯನ್ನು ನಿಯಂತ್ರಿಸುವ ಕೆಲಸಕ್ಕೆ ಯಾರೂ ಕೈಹಾಕಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏನಿದು ಯೋಜನೆ?:

ಚೌಕಾಕಾರದ 33ರಿಂದ 188 ಅಡಿಗಳ ಪ್ರತಿಫಲಿಸುವ ಕನ್ನಡಿಗಳನ್ನು ಸಾವಿರಾರು ಉಪಗ್ರಹಗಳ ಮೂಲಕ ಅಂತರಿಕ್ಷದಲ್ಲಿ ಕೂರಿಸುವುದು, ಆ ಮೂಲಕ ಸೂರ್ಯನ ಬೆಳಕನ್ನು ಭೂಮಿಗೆ ಹರಿಸುವುದು ಈ ಯೋಜನೆ ಉದ್ದೇಶ. ಇದಕ್ಕಾಗಿ ಕಂಪನಿಯು 60 ಅಡಿಯ ಕನ್ನಡಿಯನ್ನೊಗೊಂಡ ಎರೆಂಡಿಲ್‌-1 ಉಪಗ್ರಹವನ್ನು ಮುಂದಿನ ವರ್ಷ ಏಪ್ರಿಲ್‌ನಲ್ಲಿ ಪರೀಕ್ಷಾರ್ಥವಾಗಿ ಕಕ್ಷೆಗೆ ಹಾರಿಬಿಡಲಿದೆ.

ಹೊಸತಲ್ಲ, ಹಳೇ ಐಡಿಯಾ:

ಹಾಗಂತ ಇದೇನು ಹೊಸ ಐಡಿಯಾವೇನೂ ಅಲ್ಲ. 1923ರಲ್ಲಿ ರಾಕೆಟ್ ವಿಜ್ಞಾನಿ ಹರ್ಮನ್‌ ಒಬರ್ಥ್‌ ಅವರು ಇಂಥದ್ದೊಂದು ಸಲಹೆ ನೀಡಿದ್ದರು. 1993ರಲ್ಲಿ ರಷ್ಯಾ ಝ್ನಾಮ್ಯಾ2 ಉಪಗ್ರಹ ಮೂಲಕ 80 ಅಡಿಯ ಕನ್ನಡಿಯನ್ನು ಆರ್ಕಟಿಕ್‌ ಸೈಬೀರಿಯಾದಲ್ಲಿ ದಿನದ ಬೆಳಕಿನ ಅವಧಿ ಹೆಚ್ಚಿಸಲು ಕಕ್ಷೆಗೆ ಕಳುಹಿಸಿತ್ತು. ಕ್ಷಣಿಕ ಯಶಸ್ಸು ಸಿಕ್ಕರೂ ನಂತರ ಉಪಗ್ರಹ ಕೈಕೊಟ್ಟಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ