ನವದೆಹಲಿ: ದೇಶದಲ್ಲಿ ಭಾರೀ ಕೋಲಾಹಲವೆಬ್ಬಿಸಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೊಂದಿಗೆ ಶಾಂತವಾಗುತ್ತಿದ್ದಂತೆ, ಇ-20 ಪೆಟ್ರೋಲ್ ವಿರುದ್ಧ ಚಳವಳಿ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ರಾಜಕೀಯ ವಿಶ್ಲೇಷಕ ತೆಹ್ಸೀನ್ ಪೂನಾವಾಲಾ ಮತ್ತು ದೆಹಲಿ ಸಾರಿಗೆದಾರರ ಸಂಘದವರು ಪೆಟ್ರೋಲ್‌ಗೆ ಎಥನಾಲ್ ಮಿಶ್ರಣ ವಿರೋಧಿಸಿ 2 ಪ್ರತ್ಯೇಕ ದಿನ ಸಂಸತ್‌ವರೆಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದಾರೆ.
ಜು.31 ಹಾಗೂ ಆ.4ರಂದು ಈ ಪ್ರತ್ಯೇಕ ಪ್ರತಿಭಟನೆಗಳು ನಡೆಯಲಿವೆ.
ಏಪ್ರಿಲ್‌ನಿಂದ ಸರ್ಕಾರ ಕಡ್ಡಾಯಗೊಳಿಸಿರುವ ಇ-20ರಿಂದಾಗಿ ವಾಹನಗಳ ಮೈಲೇಜ್ ಕುಸಿಯುತ್ತಿದೆ ಹಾಗೂ ಕೆಲ ಭಾಗಗಳು ಹಾಳಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ, ಇ-10 ಇಂಧನದ ಆಯ್ಕೆಯನ್ನೂ ಕೊಡುವುದು, ಪೆಟ್ರೋಲ್ ಬೆಲೆಯನ್ನು ಶೇ.20ರಷ್ಟು ಇಳಿಸುವುದು, ಇದಕ್ಕೆ ಸಂಬಂಧಿಸಿದ ನೀತಿಯನ್ನು ಪಾರದರ್ಶಕವಾಗಿರಿಸುವುದು, 2023ಕ್ಕಿಂತ ಹಳೆಯ(ಇ-20 ಬೆಂಬಲಿಸದ) ಗಾಡಿಗಳಿಗಾಗಿರುವ ಹಾನಿಗೆ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪೂನಾವಾಲಾ ಮತ್ತು ಟೀಂ ಭಾರತ್, ಜು.31ರಂದು ‘ಗಾಡಿ ಮಾರ್ಚ್’ಗೆ ಕರೆ ನೀಡಿದ್ದಾರೆ.
ಇಂಡಿಯಾ ಗೇಟ್‌ನಿಂದ ಶುರುವಾಗುವ ಈ ಮೆರವಣಿಗೆ, ಸಾರಿಗೆ ಸಚಿವ ನತಿನ್ ಗಡ್ಕರಿ ಮತ್ತು ಇಂಧನ ಸಚಿವ ಹರ್ದೀಪ್ ಪುರಿ ಅವರ ನಿವಾಸದೆದುರು ಸಾಗಿ ಪಾರ್ಲಿಮೆಂಟ್ ಸ್ಟ್ರೀಟ್ ತಲುಪಲಿದೆ.
ಅತ್ತ ದೆಹಲಿ ಸಾರಿಗೆದಾರರ ಸಂಘ ಆ.4ರಂದು ಸಂಸತ್ ವರೆಗೆ ಮೆರವಣಿಗೆಗೆ ಕರೆ ನೀಡಿದೆ. ವಾಹನ ತಯಾರಕರು, ಮಾಲೀಕರು, ಗ್ರಾಹಕರು, ಸಾರಿಗೆ ನಿರ್ವಾಹಕರು ಮತ್ತು ತಾಂತ್ರಿಕ ತಜ್ಞರನ್ನು ಒಳಗೊಂಡಂತೆ, ಎಥನಾಲ್ ಮಿಶ್ರಣ ನೀತಿಯ ಕುರಿತು ಸ್ವತಂತ್ರ ವೈಜ್ಞಾನಿಕ ಪರಿಶೀಲನೆಗೆ ಅದು ಆಗ್ರಹಿಸಿದೆ.