;Resize=(412,232))
ನವದೆಹಲಿ: ಪರೀಕ್ಷಾ ಅಕ್ರಮ ತಡೆಗೆ ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಕಠಿಣ ಮಸೂದೆ ಮಂಡಿಸಲಿದೆ. ಈ ಮಸೂದೆ ಕಾಯ್ದೆ ಸ್ವರೂಪ ಪಡೆದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗೆ ಪ್ರತಿ ರಾಜ್ಯದಲ್ಲೂ ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆಯಾಗಲಿದೆ.
ಪ್ರಶ್ನೆಪತ್ರಿಕೆ ಸೋರಿಕೆ ತನಿಖೆಗೆ 2 ತಿಂಗಳು ಮತ್ತು ಆರೋಪಪಟ್ಟಿ ಸಲ್ಲಿಕೆ ಬಳಿಕ 3 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವುದು ಕಡ್ಡಾಯವಾಗಲಿದೆ. ಯಾವುದೇ ವ್ಯಕ್ತಿ ಸೋರಿಕೆಯಲ್ಲಿ ಭಾಗಿಯಾಗಿದ್ದರೆ ಕನಿಷ್ಠ 5 ಗರಿಷ್ಠ 10 ವರ್ಷ ಜೈಲು. ಗರಿಷ್ಠ ₹50 ಲಕ್ಷ ದಂಡ ವಿಧಿಸುವ, ಸಂಘಟಿತವಾಗಿ ಸೋರಿಕೆ ಮಾಡಿದವರಿಗೆ ಕನಿಷ್ಠ 7 ಗರಿಷ್ಠ 10 ವರ್ಷ ಜೈಲು. 10 ಕೋಟಿ ರು.ವರೆಗೆ ದಂಡ ವಿಧಿಸುವ ಅವಕಾಶ ಇರಲಿದೆ.
ಜೊತೆಗೆ ಪ್ರಶ್ನೆಪತ್ರಿಕೆ ಸೋರಿಕೆ ವಿಷಯ ಗೊತ್ತಿದ್ದೂ ಮುಚ್ಚಿಟ್ಟರೆ ಅಂಥವರಿಗೆ 1 ಕೋಟಿ ರು.ವರೆಗೆ ದಂಡದ ಅವಕಾಶವನ್ನು ಹೊಸ ಕಾಯ್ದೆ ನೀಡುತ್ತದೆ.
ಚಂಡೀಗಢ: ನೀಟ್ ಲೀಕ್ ಕಾರಣ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ರೀತಿಯಲ್ಲೇ, ಪಂಜಾಬ್‌ನಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಅಲ್ಲಿನ ಶಿಕ್ಷಣ ಸಚಿವರಾಗಿರುವ ಹರ್ಜೋತ್ ಸಿಂಗ್ ಬೈನ್ಸ್ ತಮ್ಮ ಹುದ್ದೆಯನ್ನು ತೊರೆಯಬೇಕು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಆಗ್ರಹಿಸಿವೆ.
ಆದರೆ ಅವರ ಅವಧಿಯಲ್ಲಿ ಇಂಥ ಘಟನೆಯೇ ನಡೆದಿಲ್ಲ ಎಂದು ಸಿಎಂ ಭಗವಂತ್ ಮಾನ್ ತಿರುಗೇಟು ನೀಡಿದ್ದಾರೆ.
ಪಂಜಾಬಲ್ಲಿ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ, ತಹಸಿಲ್ದಾರ್ ನೇಮಕಾತಿ ಪರೀಕ್ಷೆ ವೇಳೆ ಬ್ಲೂಟುತ್ ಬಳಕೆ, ಪಿಎಸ್‌ಟಿಇಟಿ ಪೇಪರ್ ಲೀಕ್ ಸೇರಿದಂತೆ ಹಲವು ಅಕ್ರಮಗಳನ್ನು ಪಟ್ಟಿ ಮಾಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ‘ಬೈನ್ಸ್ ರಾಜೀನಾಮೆಯನ್ನು ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಯಾವಾಗ ಕೇಳುತ್ತಾರೆ?’ ಎಂದು ಪ್ರಶ್ನಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ಕೂಡ ಇಂಥ ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಉತ್ತರಿಸಿರುವ ಸಿಎಂ ಮಾನ್, ‘ಕಳೆದ 4.5 ವರ್ಷದಲ್ಲಿ ಒಂದೂ ಪೇಪರ್ ಲೀಕ್ ಆಗಿಲ್ಲ. ಆಗುವುದೂ ಇಲ್ಲ’ ಎಂಬ ಭರವಸೆ ನೀಡಿದ್ದಾರೆ. ಜತೆಗೆ ವಂಚನೆಯ ಆರೋಪ ಕೇಳಿಬಂದಾಗ ಅದರ ವಿರುದ್ಧ ತ್ವರಿತ ಕ್ರಮ ಕೈಗೊಂಡಿದ್ದೆವು ಎಂದೂ ನೆನಪಿಸಿದ್ದಾರೆ.
ಅಮರಾವತಿ: ‘ನೀಟ್ ಪತ್ರಿಕೆ ಸೋರಿಕೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಅದೇ ರೀತಿ (ಡಿಎಸ್‌ಸಿ) ಪರೀಕ್ಷಾ ಪ್ರಕ್ರಿಯೆಯ ಸುತ್ತಲಿನ ಅಕ್ರಮಗಳ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ನಾರಾ ಲೋಕೇಶ್ ರಾಜೀನಾಮೆ ನೀಡಬೇಕು’ ಎಂದು ವೈಎಸ್ಸಾರ್ ಕಾಂಗ್ರೆಸ್ ಅಧ್ಯಕ್ಷ ಜಗನ್ಮೋಹನ ರೆಡ್ಡಿ ಆಗ್ರಹಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ‘ಎನ್‌ಡಿಎ ಸರ್ಕಾರದ ಅಡಿಯಲ್ಲಿ ರಾಜಕೀಯ ಹೊಣೆಗಾರಿಕೆಗೆ ಪ್ರಧಾನ್ ಹೊಸ ಮಾನದಂಡವನ್ನು ಸ್ಥಾಪಿಸಿದ್ದಾರೆ. ಅದೇ ರೀತಿ ಡಿಎಸ್‌ಸಿ ಪರೀಕ್ಷಾ ಪ್ರಕ್ರಿಯೆಯ ಸುತ್ತಲಿನ ಅಕ್ರಮಗಳಿಗೆ ಲೋಕೇಶ್ ನೈತಿಕ ಹೊಣೆಗಾರಿಕೆಯನ್ನು ವಹಿಸಿಕೊಂಡು ನಾರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆಯೇ ಅಥವಾ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಮ್ಮ ಮಗನನ್ನು ರಕ್ಷಿಸುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.
ಆದರೆ ರಾಜೀನಾಮೆ ನೀಡಲ್ಲ ಎಂದು ನಾರಾ ಲೋಕೇಶ್ ಸ್ಪಷ್ಟಪಡಿಸಿದ್ದಾರೆ.