ಇ.ಡಿ. ಮೇಲೆಯೇ ದಾಳಿ ಬಳಿಕ ಪಶ್ಚಿಮ ಬಂಗಾಳದಲ್ಲಿ ಈಗ ನ್ಯಾಯಾಂಗ ಅಧಿಕಾರಿಗಳಿಗೇ ದಿಗ್ಬಂಧನ!

Published : Apr 03, 2026, 03:56 AM IST
 ED

ಸಾರಾಂಶ

ತನಿಖೆಗೆ ಬಂದ ಇ.ಡಿ. ಅಧಿಕಾರಿಗಳ ಮೇಲೆಯೇ ದಾಳಿ, ಇ.ಡಿ. ದಾಳಿ ನಡೆಯುತ್ತಿದ್ದ ಕಟ್ಟಡಕ್ಕೆ ಸ್ವತಃ ಮುಖ್ಯಮಂತ್ರಿಯೇ ನುಗ್ಗಿ ದಾಖಲೆ ಕೊಂಡೊಯ್ದ ಘಟನೆಗಳಿಗೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಇದೀಗ ಮತ್ತೊಂದು ಹೈಡ್ರಾಮಾ ನಡೆದಿದೆ.

ಕೋಲ್ಕತಾ: ತನಿಖೆಗೆ ಬಂದ ಇ.ಡಿ. ಅಧಿಕಾರಿಗಳ ಮೇಲೆಯೇ ದಾಳಿ, ಇ.ಡಿ. ದಾಳಿ ನಡೆಯುತ್ತಿದ್ದ ಕಟ್ಟಡಕ್ಕೆ ಸ್ವತಃ ಮುಖ್ಯಮಂತ್ರಿಯೇ ನುಗ್ಗಿ ದಾಖಲೆ ಕೊಂಡೊಯ್ದ ಘಟನೆಗಳಿಗೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಇದೀಗ ಮತ್ತೊಂದು ಹೈಡ್ರಾಮಾ ನಡೆದಿದೆ.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದ್ದ 7 ನ್ಯಾಯಾಂಗ ಅಧಿಕಾರಿಗಳಿಗೆ ಸಾವಿರಾರು ಜನರ ಗುಂಪೊಂದು 9 ಗಂಟೆ ಕಾಲ ದಿಗ್ಬಂಧನ ಹಾಕಿದ ಆಘಾತಕಾರಿ ಘಟನೆ ನಡೆದಿದೆ. ಹಿರಿಯ ಅಧಿಕಾರಿಗಳ ಮಧ್ಯಪ್ರವೇಶದಿಂದಲೂ ಇತ್ಯರ್ಥವಾಗಿರದಿದ್ದ ಪ್ರಕರಣದಲ್ಲಿ ಕೊನೆಗೆ ಕೋಲ್ಕತಾ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರೇ ಮಧ್ಯಪ್ರವೇಶ ಮಾಡಿದ್ದಾರೆ. ಅವರ ತಾಕೀತಿನ ಬಳಿಕ 7 ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಆದರೆ ಇದರ ಬಳಿಕವೂ ಸಿಬ್ಬಂದಿ ಪ್ರಯಾಣಿಸಿದ ವಾಹನಗಳ ಮೇಲೆ ಕಲ್ಲು, ಬಡಿಗೆಯಿಂದ ಹಲ್ಲೆ ನಡೆಸಲಾಗಿದೆ!

ಮಾಲ್ಡಾ ಜಿಲ್ಲೆಯಲ್ಲಿ ಬುಧವಾರ ನಡೆದ ಈ ಘಟನೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮತ್ತೆ ಅನುಮಾನಗಳನ್ನು ಹುಟ್ಟುಹಾಕಿದೆ. ಅದರ ಬೆನ್ನಲ್ಲೇ ಘಟನೆಯ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯದ ಆಡಳಿತ ವ್ಯವಸ್ಥೆ ಬಗ್ಗೆ ಕಿಡಿಕಾರಿದೆ. ಅಲ್ಲದೆ ಇಡೀ ಪ್ರಕರಣದ ಕುರಿತು ಸಿಬಿಐ ಅಥವಾ ಎನ್‌ಐಎ ತನಿಖೆಗೆ ಆದೇಶಿಸಿದೆ.

ಈ ನಡುವೆ ಘಟನೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಇದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರೂಪಿಸಿದ ಸಂಚು ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಏನಾಯ್ತು?:

ಮಾಲ್ಡಾ ಜಿಲ್ಲೆಯ ಕಾಲಿಚಕ್‌-2 ಬ್ಲಾಕ್‌ ಡೆವಲಪ್‌ಮೆಂಟ್‌ ಕಚೇರಿಯಲ್ಲಿ 3 ಮಹಿಳೆಯರು ಸೇರಿ ಏಳು ಮಂದಿ ನ್ಯಾಯಾಂಗ ಅಧಿಕಾರಿಗಳು ಮತಪಟ್ಟಿ ಪರಿಷ್ಕರಣೆ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ತಮ್ಮ ಹೆಸರುಗಳನ್ನು ಅಕ್ರಮವಾಗಿ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿ ಸಾವಿರಾರು ಜನರು ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಬಳಿಕ ಅವರನ್ನು 9 ಗಂಟೆಗಳ ಅಲ್ಲೇ ಕೂಡಿ ಹಾಕಿ ಅನ್ನ, ನೀರು ನೀಡದೆ ಬೆದರಿಕೆ ಹಾಕಿದ್ದಾರೆ.

ಮಧ್ಯಾಹ್ನ 3.30ಕ್ಕೆ ಈ ಘಟನೆ ನಡೆದಿದ್ದರೂ ಕೋಲ್ಕತಾ ಕೋರ್ಟ್ ರಿಜಿಸ್ಟ್ರಾರ್‌ ಸೂಚನೆ ಹೊರತಾಗಿಯೂ ಸಂಬಂಧಿಸಿದ ಅಧಿಕಾರಿಗಳು ನ್ಯಾಯಾಂಗ ಅಧಿಕಾರಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆತರದ ಹಿನ್ನೆಲೆಯಲ್ಲಿ ಕೊನೆಗೆ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆ ಬಳಿಕ ತಡರಾತ್ರಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳನ್ನು ಕಳುಹಿಸಿ ಅಧಿಕಾರಿಗಳನ್ನು ಘೇರಾವ್‌ನಿಂದ ರಕ್ಷಿಸಿ ಮನೆಗೆ ಕಳುಹಿಸಿಕೊಡಲಾಗಿದೆ.

ಸುಪ್ರೀಂ ಆಕ್ರೋಶ:

ಘಟನೆಯ ಕುರಿತು ಪಶ್ಚಿಮ ಬಂಗಾಳವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್‌, ಈ ಬಗ್ಗೆ ಸಿಬಿಐ ಅಥವಾ ಎನ್‌ಐಎ ಮೂಲಕ ಸ್ವತಂತ್ರ ತನಿಖೆಗೆ ಆದೇಶಿಸಿ, ನ್ಯಾಯಾಂಗ ಅಧಿಕಾರಿಗಳು ವಿರೋಧ ಎದುರಿಸುತ್ತಿರುವ ಸ್ಥಳಗಳಲ್ಲಿ ಅಗತ್ಯವಿರುವಷ್ಟು ಕೇಂದ್ರೀಯ ಪಡೆ ನಿಯೋಜನೆಗೆ ಸೂಚಿಸಿದೆ.

ಇದೇ ವೇಳೆ, ಇಡೀ ಪ್ರಕರಣ, ರಾಜ್ಯಾಡಳಿತ ಸಂಪೂರ್ಣ ವೈಫಲ್ಯವಾಗಿದೆ ಎಂಬುದನ್ನು ಎತ್ತಿತೋರಿಸುತ್ತದೆ. ನ್ಯಾಯಾಂಗ ಅಧಿಕಾರಿಗಳ ರಕ್ಷಣೆ ವಿಚಾರದಲ್ಲಿ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಡಿಜಿಪಿ ಮತ್ತು ಎಸ್ಪಿ ನಡೆ ಅತ್ಯಂತ ಖಂಡನೀಯ. ಈ ಕುರಿತು ಮಾಹಿತಿ ನೀಡಿದ್ದರೂ ಯಾಕೆ ಸಕಾಲದಲ್ಲಿ ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಅವರು ವಿವರಣೆ ನೀಡಬೇಕು. ಮುಂದಿನ ವಿಚಾರಣೆಗೆ ಮೇಲ್ಕಂಡ ಎಲ್ಲಾ ಅಧಿಕಾರಿಗಳು ಆನ್‌ಲೈನ್‌ ಮೂಲಕ ಹಾಜರಾಗಬೇಕು ಎಂದು ಸೂಚಿಸಿತು. ಜೊತೆಗೆ ಇಂಥ ಘಟನೆ ನ್ಯಾಯಾಂಗದ ಅಧಿಕಾರಿಗಳನ್ನು ಬೆದರಿಸುವ ಮತ್ತು ಸುಪ್ರೀಂಕೋರ್ಟ್‌ನ ಅಧಿಕಾರವನ್ನೇ ಪ್ರಶ್ನಿಸುವಂಥ ಬೆಳವಣಿಗೆ ಎಂದು ಕಿಡಿಕಾರಿದ ನ್ಯಾಯಪೀಠ, ಪಶ್ಚಿಮ ಬಂಗಾಳವು ತೀವ್ರ ಧ್ರುವೀಕರಣಗೊಂಡ ರಾಜ್ಯ ಎಂದು ಕಳವಳ ವ್ಯಕ್ತಪಡಿಸಿತು.

ಈ ನಡುವೆ ಘಟನೆ ಕುರಿತು ಸಬೂಬು ನೀಡಲು ಮುಂದಾದ ಬಂಗಾಳ ಸರ್ಕಾರದ ಪರ ವಕೀಲರನ್ನೂ ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ‘ಇಡೀ ಘಟನೆ ನಮ್ಮ ಗಮನದಲ್ಲಿದೆ. ರಾತ್ರಿ 2 ಗಂಟೆಯವರೆಗೂ ನಾವು ಇಡೀ ಬೆಳವಣಿಗೆ ಮೇಲೆ ನಿಗಾ ಇಟ್ಟಿದ್ದೆವು’ ಎಂದರು.

ಮಮತಾ ಆರೋಪ:

ಈ ನಡುವೆ ಮತದಾರರ ವಿಶೇಷ ಪರಿಷ್ಕರಣೆಯಲ್ಲಿ ಪಾಲ್ಗೊಂಡಿದ್ದ ಏಳು ನ್ಯಾಯಾಂಗ ಅಧಿಕಾರಿಗಳ ಮೇಲಿನ ಘೇರಾವ್‌ ಕುರಿತು ನನಗೆ ಯಾರೂ ಮಾಹಿತಿ ನೀಡಿರಲಿಲ್ಲ. ಚುನಾವಣಾ ಆಯೋಗವು ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಇಂಥ ಪ್ರಕರಣ ಮುಂದಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಷಡ್ಯಂತ್ರ ರೂಪಿಸುವ ಮೂಲಕ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಯಾರ ಮೇಲೆ ದಾಳಿ?:

ಎಸ್‌ಐಆರ್‌ ಕುರಿತು ವ್ಯಕ್ತವಾಗಿರುವ 60 ಲಕ್ಷ ಆಕ್ಷೇಪಣೆಗಳನ್ನು ಪರಿಶೀಲಿಸಲು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನ ಸುಮಾರು 700 ನ್ಯಾಯಾಂಗ ಅಧಿಕಾರಿಗಳನ್ನು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿದೆ. ಅವರ ಮೇಲೆ ಇದೀಗ ದಾಳಿ ನಡೆಸಲಾಗಿದೆ.

ಏಕೆ ಹೈಡ್ರಾಮಾ?

- ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್‌)ಗೆ ತೀವ್ರ ಆಕ್ಷೇಪ ಹಿನ್ನೆಲೆ

- 60 ಲಕ್ಷ ಆಕ್ಷೇಪಗಳ ಪರಿಶೀಲಿಸಲು ಬಂಗಾಳ, ನೆರೆರಾಜ್ಯಗಳ 700 ಅಧಿಕಾರಿಗಳ ನಿಯೋಜಿಸಿರುವ ಸುಪ್ರೀಂ

- ಬಂಗಾಳದ ಮಾಲ್ಡಾ ಜಿಲ್ಲೆಯ ಕಚೇರಿಯಲ್ಲಿ 3 ಮಹಿಳೆಯರು ಸೇರಿ 7 ಮಂದಿಯಿಂದ ಆಕ್ಷೇಪ ಪರಿಶೀಲನೆ

- ಮತಪಟ್ಟಿಯಲ್ಲಿ ಹೆಸರು ತೆಗೆದು ಹಾಕಲಾಗುತ್ತಿದೆ ಎಂದು ಸಹಸ್ರಾರು ಜನರ ಮುತ್ತಿಗೆ. ಕಚೇರಿಯಲ್ಲಿ ದಿಗ್ಬಂಧನ

- 9 ಗಂಟೆ ಕೂಡಿ ಹಾಕಿ ಅನ್ನ, ನೀರು ನೀಡದೆ ಬೆದರಿಕೆ. ಹೈಕೋರ್ಟ್‌ ಸಿಜೆ ಪ್ರವೇಶ ಬಳಿಕ ಅಧಿಕಾರಿಗಳ ರಕ್ಷಣೆ

ತನಿಖೆ ಮಾಡಿ

ಪಶ್ಚಿಮ ಬಂಗಾಳ ರಾಜ್ಯಾಡಳಿತ ಸಂಪೂರ್ಣ ವಿಫಲವಾಗಿದೆ. ಇದು ಸುಪ್ರೀಂಕೋರ್ಟ್‌ನ ಅಧಿಕಾರವನ್ನೇ ಪ್ರಶ್ನಿಸುವಂತಿದೆ. ಘಟನೆಯ ಬಗ್ಗೆ ಸಿಬಿಐ ಅಥವಾ ಎನ್‌ಐಎ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು.

- ಸುಪ್ರೀಂಕೋರ್ಟ್‌

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಾಂಗ್ರೆಸ್‌ನಿಂದ ಕೇರಳದಲ್ಲೂ ಗ್ಯಾರಂಟಿ - ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭರವಸೆ
ಎಐ ಎಫೆಕ್ಟ್‌ : ಒಂದೇ ಇ ಮೇಲ್‌ನಲ್ಲಿ 30000 ಸಿಬ್ಬಂದಿ ಕೈಬಿಟ್ಟ ಒರಾಕಲ್‌