;Resize=(412,232))
ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಗಣತಿ ಕಾರ್ಯ ಏ.1ರ ಬುಧವಾರದಿಂದ ಆರಂಭವಾಗಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಜಿಟಲ್ ವಿಧಾನದಲ್ಲಿ ಗಣತಿ ಕಾರ್ಯ ನಡೆಯುತ್ತಿದ್ದು, 15 ದಿನಗಳ ಕಾಲ ವೆಬ್‌ಸೈಟ್ ಮೂಲಕ ಸ್ವಯಂ ಗಣತಿಗೆ ಅವಕಾಶವಿರಲಿದೆ. ಏ.16ರಿಂದ ಮನೆಮನೆ ಗಣತಿ ಪ್ರಕ್ರಿಯೆ ಆರಂಭವಾಗಲಿದೆ.
ಭಾರತದ ಜನಗಣತಿ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕಾರ್ಯದಲ್ಲಿ ಭಾಗಿಯಾದರು.
ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 55,000 ಜನ ಮೊದಲ ದಿನ ಡಿಜಿಟಲ್ ಗಣತಿಯ ಸೇವೆ ಪಡೆದುಕೊಂಡಿದ್ದಾರೆ. ಕರ್ನಾಟಕದಲ್ಲಿ 12 ಸಾವಿರ ಮಂದಿ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮೊದಲ ಬಾರಿ ನಾಗರಿಕರು ಸ್ವಯಂ ಗಣತಿ ಮಾಡಿಕೊಳ್ಳಲು se.census.gov.in ಮೂಲಕ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿ ಗಣತಿ ದೇಶದ ಯಾವುದೇ ಅರ್ಹ ಪ್ರಜೆಗಳು ತಮ್ಮ ಮಾಹಿತಿಯನ್ನು ದಾಖಲಿಸಬಹುದು. ಬಳಿಕ ಗಣತಿದಾರರು ಮನೆಗೆ ಬಂದಾಗ ಈ ಕುರಿತ ಮಾಹಿತಿ ನೀಡಿದರೆ, ಅವರು ಆ ಮಾಹಿತಿಯನ್ನು ದೃಢೀಕರಿಸಿ ಅದಕ್ಕೆ ಅಂತಿಮ ಅನುಮೋದನೆ ನೀಡುತ್ತಾರೆ.
- ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆ ನಮೂದಿಸಬೇಕು. ತಕ್ಷಣವೇ ಒಟಿಪಿ ಬರಲಿದೆ
- ಅದನ್ನು ನಮೂದಿಸಿದ ಬಳಿಕ ಜಿಲ್ಲೆ, ಪಿನ್‌ಕೋಡ್, ಹಳ್ಳಿ/ನಗರ ಅಂಶಗಳನ್ನು ಒದಗಿಸಬೇಕು
- ಜಿಪಿಎಸ್ ಆಧರಿತ ಮ್ಯಾಪ್ ಬರಲಿದ್ದು, ಮನೆಯನ್ನು ನಿಖರವಾಗಿ ಪಿನ್ ಮಾಡಬೇಕು
- ನಂತರ ಕೇಳುವ ಮಾಹಿತಿಯನ್ನು ನೀಡಬೇಕು. ಯುನಿಕ್ ಐಡಿ ಸಂಖ್ಯೆ ಮೊಬೈಲ್‌ಗೆ ಬರಲಿದೆ
- ಏ.16ರಿಂದ ಮನೆಮನೆ ಗಣತಿ ಪ್ರಕ್ರಿಯೆ ಆರಂಭವಾಗಲಿದ್ದು, ಗಣತಿದಾರರಿಗೆ ಆ ಐಡಿ ಕೊಡಬೇಕು