ದಿಢೀರನೇ ಒಂದೇ ನಿಮಿಷದಲ್ಲಿ 8500 ಅಡಿಗಳಷ್ಟು ಕುಸಿದ ವಿಮಾನದ ನೆರವಿಗೆ ಧಾವಿಸಿದ ಭಾರತೀಯ ವಾಯುಪಡೆಯು, ಇಂಡಿಗೋ ವಿಮಾನಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ ಅದು ಸುರಕ್ಷಿತವಾಗಿ ಶ್ರೀನಗರದಲ್ಲಿ ಇಳಿಯಲು ಸಹಾಯ ಮಾಡಿತು
ನವದೆಹಲಿ : ದೆಹಲಿಯಿಂದ ಶ್ರೀನಗರಕ್ಕೆ ಹಾರುವಾಗ ಬುಧವಾರ ಹವಾಮಾನ ಪ್ರಕ್ಷುಬ್ಧತೆಗೆ ಒಳಗಾಗಿದ್ದ 220 ಜನರಿದ್ದ ಇಂಡಿಗೋ ವಿಮಾನವು, ಅದರಿಂದ ಪಾರಾಗಲು ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಕ್ಕೆ ಅನುಮತಿ ಕೋರಿತ್ತು
ಆದರೆ ಪಾಕ್‌ನ ಲಾಹೋರ್ ವಾಯು ಸಂಚಾರ ನಿಯಂತ್ರಣ ಕಚೇರಿ (ಎಟಿಸಿ)ಯು ಆ ವಿನಂತಿಯನ್ನು ತಿರಸ್ಕರಿಸಿ ಅಮಾನವೀಯತೆ ಮೆರೆಯಿತು. ಈ ವೇಳೆ ದಿಢೀರನೇ ಒಂದೇ ನಿಮಿಷದಲ್ಲಿ 8500 ಅಡಿಗಳಷ್ಟು ಕುಸಿದ ವಿಮಾನದ ನೆರವಿಗೆ ಧಾವಿಸಿದ ಭಾರತೀಯ ವಾಯುಪಡೆಯು, ಇಂಡಿಗೋ ವಿಮಾನಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ ಅದು ಸುರಕ್ಷಿತವಾಗಿ ಶ್ರೀನಗರದಲ್ಲಿ ಇಳಿಯಲು ಸಹಾಯ ಮಾಡಿತು. ತನ್ಮೂಲಕ ಅಷ್ಟೂ ಜನರ ಜೀವ ಉಳಿಸಿತು ಎಂಬ ಮೈನವಿರೇಳಿಸುವ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಶುಕ್ರವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಾಗೂ ವಾಯುಪಡೆ ಅಧಿಕೃತವಾಗಿ ಹೇಳಿಕೆ ನೀಡಿದ್ದು, ವಿಮಾನವನ್ನು ಹೇಗೆ ರಕ್ಷಿಸಲಾಯಿತು ಎಂಬ ಕ್ಷಣಕ್ಷಣದ ಮಾಹಿತಿ ನೀಡಿವೆ.
ಏನಿದು ಘಟನೆ?: 6ಇ 2142 ಸಂಖ್ಯೆಯ ವಿಮಾನವು ಬುಧವಾರ ರಾತ್ರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 5 ಸಂಸದರು ಸೇರಿ 220 ಜನರನ್ನು ಶ್ರೀನಗರಕ್ಕೆ ಹೊತ್ತೊಯ್ಯುತ್ತಿತ್ತು. ಆದರೆ ಮಾರ್ಗಮಧ್ಯೆ ಹಠಾತ್ ಮತ್ತು ತೀವ್ರವಾದ ಪ್ರಕ್ಷುಬ್ಧತೆಯನ್ನು ಎದುರಿಸಿತ್ತು. ಪ್ರಕ್ಷುಬ್ಧತೆ ಕಾರಣ ವಿಮಾನದ ಮೂತಿ ಜಖಂಗೊಂಡಿತು. ವಿಮಾನ ಹೊಯ್ದಾಟದಿಂದ ಪ್ರಯಾಣಿಕರೂ ಆತಂಕಿತರಾಗಿದ್ದರು. ಈ ವೇಳೆ ಪಾಕಿಸ್ತಾನ ವಾಯುಸೀಮೆ ಬಳಸಲು ಅನುಮತಿ ಕೇಳಲಾಗಿತ್ತು. ಒಪ್ಪಿಗೆ ಸಿಗಲಿಲ್ಲ. ಆದರೂ ವಿಮಾನವನ್ನು ಶ್ರೀನಗರದಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಪೈಲಟ್‌ಗಳು ಯಶಸ್ವಿಯಾಗಿದ್ದರು.
‘ಆಪರೇಷನ್ ಸಿಂದೂರ’ದ ಕಾರಣ ಪಾಕ್ ಈಗಾಗಲೇ ಭಾರತಕ್ಕೆ ತನ್ನ ವಾಯುವಲಯ ನಿರ್ಬಂಧಿಸಿದೆ. ಆದರೂ ಮಾನವೀಯ ದೃಷ್ಟಿಯಿಂದ ವಿಮಾನಕ್ಕೆ ತನ್ನ ವಾಯುವಲಯಕ್ಕೆ ಕೆಲ ಅವಧಿಗಾದರೂ ಪ್ರವೇಶಕ್ಕೆ ಅನುಮತಿ ನೀಡಬೇಕಿತ್ತು ಎಂದು ಭಾರತದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಜಿಸಿಎ, ವಾಯುಪಡೆ ಹೇಳಿದ್ದೇನು?:
ಈ ಘಟನೆ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶಾನಲಯ ಹಾಗೂ ವಾಯುಪಡೆ ಅಧಿಕೃತವಾಗಿ ವಿಸ್ತೃತ ಮಾಹಿತಿ ನೀಡಿವೆ. ‘ಶ್ರೀನಗರಕ್ಕೆ ಸಾಗುವ ಮಾರ್ಗದಲ್ಲಿ ಪಠಾಣ್‌ಕೋಟ್ ಬಳಿ ಹವಾಮಾನದ ಪ್ರಕ್ಷುಬ್ಧತೆ ಉಂಟಾಯಿತು. ಕೂಡಲೇ ಅಂತಾರಾಷ್ಟ್ರೀಯ ಗಡಿ ಕಡೆಗೆ ಸಾಗಲು ಭಾರತದ ಉತ್ತರ ನಿಯಂತ್ರಣ (ಐಎಎಫ್) ಕೇಂದ್ರಕ್ಕೆ ಇಂಡಿಗೋ ಸಿಬ್ಬಂದಿ ವಿನಂತಿಸಿದರು. ಆದರೆ ಅದು ಅನುಮೋದಿಸದಿದ್ದರೂ ಸಹಾಯ ಮಾಡಲು ನಿರ್ಧರಿಸಿ, ಪಾಕ್ ವಾಯುವಲಯ ಪ್ರವೇಶಕ್ಕೆ ಅನುಮತಿ ಕೋರಿ ಎಂದು ಸೂಚಿಸಿತು. ಆ ಬಳಿಕ ಹವಾಮಾನ ವೈಪರೀತ್ಯದಿಂದ ಪಾರಾಗಲು ಪಾಕ್ ವಾಯುವಲಯ ಪ್ರವೇಶಿಸಲು ಲಾಹೋರ್‌ನ ವಾಯು ಸಂಚಾರ ನಿಯಂತ್ರಣ ಕಚೇರಿಯ (ಎಟಿಸಿ) ಅನುಮತಿ ಕೋರಲಾಯಿತು. ಆದರೆ ಲಾಹೋರ್ ಎಟಿಸಿ, ‘ಭಾರತದ ವಿಮಾನಗಳಿಗೆ ನಮ್ಮ ವಾಯುವಲಯದಲ್ಲಿ ನಿರ್ಬಂಧವಿದೆ’ ಎಂದು ಹೇಳಿ ಅನುಮತಿ ನಿರಾಕರಿಸಿತು’ ಎಂದು ವಿವರಿಸಿವೆ.
‘ಪಾಕ್ ಅನುಮತಿ ನಿರಾಕರಿಸಿದ ಕೂಡಲೇ ಒಂದೇ ನಿಮಿಷದಲ್ಲಿ ವಿಮಾನ ಆಗಸದಲ್ಲೇ 8500 ಅಡಿಗಳಷ್ಟು ಕೆಳಗೆ ಕುಸಿಯಿತು. ಆಗ ದಿಲ್ಲಿಗೇ ವಾಪಸು ಬರಬೇಕು ಎಂದು ಯೋಚಿಸಲಾಯಿತು. ಆದರೆ ಅಲ್ಲಿ ಭಾರಿ ಗುಡುಗು-ಸಿಡಿಲಿನ ವಾತಾವರಣವಿತ್ತು. ಈ ಹಂತದಲ್ಲಿ ವಾಯುಪಡೆಯು ವಿಮಾನಕ್ಕೆ ಪರ್ಯಾಯ ಮಾರ್ಗದ ಮಾರ್ಗದರ್ಶನ ನೀಡಲು ಆರಂಭಿಸಿತು. ಧೈರ್ಯ ಮಾಡಿ ಪ್ರಕ್ಷುಬ್ಧ ವಾತಾವರಣದಲ್ಲಿ ಆಲಿಕಲ್ಲುಗಳು ಬೀಳುತ್ತಿದ್ದರೂ ಶ್ರೀನಗರದ ಕಡೆ ಸಾಗಲು ನಿರ್ಧರಿಸಲಾಯಿತು. ವಿಮಾನವನ್ನು ಮ್ಯಾನುವಲ್ ಮೋಡ್‌ನಲ್ಲಿ ಚಲಾಯಿಸಿ ಶ್ರೀನಗರಕ್ಕೆ ತಲುಪಿಸಲಾಯಿತು. ವಿಮಾನವು ಹೇಗೆ ಸಾಗಬೇಕು? ಪ್ರಕ್ಷುಬ್ಧತೆಯಲ್ಲೂ ಯಾವ ಮಾರ್ಗ ಇದ್ದುದರಲ್ಲೇ ಸುರಕ್ಷಿತ ಎಂಬುದನ್ನು ವಾಯುಪಡೆ ಪ್ರತಿ ಹಂತದಲ್ಲೂ ಸೂಚಿಸುತ್ತಿತ್ತು’ ಎಂದು ಅವು ಹೇಳಿವೆ.
ಶ್ರೀನಗರದಲ್ಲೇ ವಿಮಾನ ಬಾಕಿ: ಮೂತಿ ಜಖಂಗೊಂಡ ವಿಮಾನ ಇನ್ನೂ ಶ್ರೀನಗರದಲ್ಲೇ ಇದೆ. ರಿಪೇರಿ ಮಾಡಲಾಗಿದೆ. ಸುರಕ್ಷತಾ ಅಧಿಕಾರಿಗಳು ಗ್ರೀನ್ ಸಿಗ್ನಲ್ ತೋರಿಸಿದ ಬಳಿಕ ಸಂಚಾರ ಆರಂಭಿಸಲಿದೆ ಎಂದು ಇಂಡಿಗೋ ಹೇಳಿದೆ.
ಆಗಿದ್ದೇನು?
- ಬುಧವಾರ ರಾತ್ರಿ 5 ಸಂಸದರು ಸೇರಿ 220 ಮಂದಿ ಹೊತ್ತು ದಿಲ್ಲಿಯಿಂದ ಶ್ರೀನಗರದತ್ತ ಹಾರಿದ ಇಂಡಿಗೋ ವಿಮಾನ - ಪಠಾಣ್‌ಕೋಟ್ ಮೇಲೆ ಸಾಗುವಾಗ ಹದಗೆಟ್ಟ ಹವಾಮಾನ, ಪ್ರಕ್ಷುಬ್ಧತೆ. ಪಾಕ್ ವಾಯುಸೀಮೆ ಸುರಕ್ಷಿತ ಎಂಬುದು ಪತ್ತೆ
- ವಾಯುಪಡೆ ಸಲಹೆ ಮೇರೆಗೆ ಪಾಕ್ ವಾಯುಸೀಮೆ ಪ್ರವೇಶಕ್ಕೆ ಅನುಮತಿ ಯಾಚನೆ. ಲಾಹೋರ್ ಎಟಿಸಿಯಿಂದ ನಕಾರ - ದಿಢೀರನೆ 8500 ಅಡಿಯಷ್ಟು ಕುಸಿದ ವಿಮಾನ. ವಾಯುಪಡೆಯಿಂದ ನೆರವಿನ ಹಸ್ತ. ಪ್ರಕ್ಷುಬ್ಧತೆಯಲ್ಲೂ ಶ್ರೀನಗರದತ್ತ ಯಾನ
- ವಿಮಾನದಲ್ಲಿ ಭಾರಿ ಹೊಯ್ದಾಟ. ಪ್ರಯಾಣಿಕರು ಆತಂಕಗೊಂಡು ಚೀರಾಟ. ಪ್ರತಿಕೂಲತೆಯಿಂದ ವಿಮಾನ ಮೂತಿಗೆ ಹಾನಿ - ಪ್ರತಿ ಹಂತದಲ್ಲೂ ಸುರಕ್ಷಿತ ಮಾರ್ಗದ ಬಗ್ಗೆ ವಾಯುಪಡೆ ನಿರ್ದೇಶನ. ಮ್ಯಾನುವಲ್ ಮೋಡ್‌ನಲ್ಲಿ ಶ್ರೀನಗರದಲ್ಲಿ ಲ್ಯಾಂಡ್