ಸದನದಲ್ಲಿ ಶಾ ಒತ್ತಡದಲ್ಲಿದ್ರು, ಕೈ ಕಂಪಿಸುತ್ತಿತ್ತು: ರಾಹುಲ್‌

KannadaprabhaNewsNetwork |  
Published : Dec 12, 2025, 01:45 AM IST
ರಾಹುಲ್ | Kannada Prabha

ಸಾರಾಂಶ

ಬುಧವಾರ ಲೋಕಸಭೆಯಲ್ಲಿ ಮತಗಳವು ಬಗೆಗಿನ ಚರ್ಚೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ನಡುವೆ ತೀವ್ರ ಜಟಾಪಟಿ ನಡೆದಿತ್ತು. ಆ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌, ನಿನ್ನೆ ಮಾತನಾಡುವಾಗ ಶಾ ಅವರು ಒತ್ತಡದಲ್ಲಿದ್ದರು. ಅವರ ಕೈಗಳು ಕಂಪಿಸುತ್ತಿದ್ದವು ಎಂದು ಹೇಳಿದ್ದಾರೆ.

ತೊದಲು ಮಾತು, ನಡುಗುವ ಕೈಯ್ಯನ್ನು ದೇಶ ನೋಡಿದೆ

ನಾನು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಲಿಲ್ಲ: ಆರೋಪ

ನವದೆಹಲಿ: ಬುಧವಾರ ಲೋಕಸಭೆಯಲ್ಲಿ ಮತಗಳವು ಬಗೆಗಿನ ಚರ್ಚೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ನಡುವೆ ತೀವ್ರ ಜಟಾಪಟಿ ನಡೆದಿತ್ತು. ಆ ಬಗ್ಗೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌, ನಿನ್ನೆ ಮಾತನಾಡುವಾಗ ಶಾ ಅವರು ಒತ್ತಡದಲ್ಲಿದ್ದರು. ಅವರ ಕೈಗಳು ಕಂಪಿಸುತ್ತಿದ್ದವು ಎಂದು ಹೇಳಿದ್ದಾರೆ.

‘ಅಮಿತ್‌ ಶಾ ಅವರು ಆಗಾಗ ತಪ್ಪು ಶಬ್ದಗಳನ್ನು ಬಳಸುತ್ತಿದ್ದರು. ಅವರ ಕೈಗಳು ನಡುಗುತ್ತಿದ್ದವು. ಇದು, ಅವರು ಒತ್ತಡದಲ್ಲಿದ್ದರು ಎಂಬುದನ್ನು ತೋರಿಸುತ್ತದೆ, ಇದನ್ನು ಇಡೀ ದೇಶವೇ ನೋಡಿದೆ. ಜತೆಗೆ ಅವರು ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ. (ಮತಗಳವಿನ ಬಗ್ಗೆ) ನಾನು ಮಾಡಿದ್ದ ಪತ್ರಿಕಾಗೋಷ್ಠಿ ಬಗ್ಗೆ ಮಾತನಾಡುವಂತೆ ಕೇಳಿದ್ದೆ. ಅವರು ಅದನ್ನೂ ಮಾಡಲಿಲ್ಲ’ ಎಂದು ರಾಹುಲ್‌ ಹೇಳಿದ್ದಾರೆ.

ಅಧಿವೇಶನದಲ್ಲಿ ಚುನಾವಣಾ ಸುಧಾರಣೆಗಳ ಚರ್ಚೆ ವೇಳೆ ಮಾತನಾಡಿದ್ದ ಶಾ, ‘ನೆಹರು, ಇಂದಿರಾ, ಸೋನಿಯಾರ ಅವಧಿಯಲ್ಲೂ ಮತಚೋರಿ ಆಗಿತ್ತು’ ಎಂದು ಆರೋಪಿಸಿದ್ದರು. ಅವರ ಮಾತಿಗೆ ಅಡ್ಡಿಪಡಿಸಿದ ರಾಹುಲ್‌ರಿಗೆ, ‘ನಿಮ್ಮ ಬೇಡಿಕೆಗೆ ತಕ್ಕಹಾಗೆ ನಾನು ಉತ್ತರಿಸಬೇಕೆಂದಿಲ್ಲ’ ಎಂದು ಖಾರವಾಗಿ ಹೇಳಿ ಸುಮ್ಮನಾಗಿಸಿದ್ದರು.

==

6 ರಾಜ್ಯಗಳಲ್ಲಿ ಮತ್ತೆ ಎಸ್‌ಐಆರ್‌ ವಿಸ್ತರಣೆ: ಬಂಗಾಳದಲ್ಲಿ ಬದಲಿಲ್ಲ

ನವದೆಹಲಿ: 12 ರಾಜ್ಯಗಳಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತಪಟ್ಟಿ ಪರಿಷ್ಕರಣೆ ಪೈಕಿ 5 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಗುರುವಾರಕ್ಕೆ ಮುಕ್ತಾಯವಾಗಿದ್ದ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸಿದೆ. ಆದರೆ ಭಾರೀ ವಿವಾದ ಸೃಷ್ಟಿಸಿರುವ ಪಶ್ಚಿಮ ಬಂಗಾಳದಲ್ಲಿ ಯಾವುದೇ ಬದಲಾವಣೆಯಿಲ್ಲ.ಕಳೆದ ವಾರವಷ್ಟೇ ಚುನಾವಣಾ ಆಯೋಗ 12 ರಾಜ್ಯಗಳ ಮುಕ್ತಾಯದ ಅವಧಿಯನ್ನು ಡಿ.11ರ ತನಕ ಗಡುವು ವಿಸ್ತರಿಸಿತ್ತು. ಆದರೆ ಇದೀಗ ಮತ್ತೆ ತಮಿಳುನಾಡು (ಡಿ.14), ಗುಜರಾತ್‌ (ಡಿ.14), ಮಧ್ಯಪ್ರದೇಶ (ಡಿ.18), ಛತ್ತೀಸ್‌ಗಢ (ಡಿ.18), ಉತ್ತರ ಪ್ರದೇಶ (ಡಿ.26) ಮತ್ತು ಅಂಡಮಾನ್ ನಿಕೋಬಾರ್‌ ದ್ವೀಪ (ಡಿ.18)ದಲ್ಲಿ ವಿಸ್ತರಿಸಿದೆ. ಉಳಿದಂತೆ ಗುರುವಾರಕ್ಕೆ ಮತಪಟ್ಟಿ ಪರಿಷ್ಕರಣೆ ಮುಕ್ತಾಯವಾಗಿರುವ ಗೋವಾ, ಗುಜರಾತ್‌, ಲಕ್ಷದ್ವೀಪ, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಡಿ.16ಕ್ಕೆ ಕರಡು ಮತಪಟ್ಟಿ ಪ್ರಕಟವಾಗಲಿದೆ.

==

ಮತಪಟ್ಟೀಲಿ ಹೆಸರು ಬಿಟ್ಟರೆ ಅಡುಗೆ ಮನೆ ಆಯುಧ ಬಳಸಿ: ದೀದಿ

ಕೋಲ್ಕತಾ: ‘ನಿಮ್ಮ ಹೆಸರು ಮತಪಟ್ಟಿಯಿಂದ ತೆಗೆಯಲ್ಪಟ್ಟರೆ, ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳನ್ನೇ ಆಯುಧವಾಗಿ ಹಿಡಿದು ಹೋರಾಡಿ’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರಾಜ್ಯದ ಮಹಿಳೆಯರಿಗೆ ಕರೆ ನೀಡಿದ್ದಾರೆ.ಮೊದಲಿಂದಲೂ ಮತಪಟ್ಟಿ ಪರಿಷ್ಕರಣೆ ವಿರೋಧಿಯಾಗಿರುವ ಮಮತಾ, ‘ಎಸ್‌ಐಆರ್‌ ಅಡಿಯಲ್ಲಿ ತಾಯಂದಿರು ಮತ್ತು ಸಹೋದರಿಯರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಚುನಾವಣೆ ವೇಳೆ ಮಹಿಳೆಯರನ್ನು ಬೆದರಿಸಲು ಪೊಲೀಸರನ್ನು ನಿಯೋಜಿಸುತ್ತಾರೆ. ಒಂದೊಮ್ಮೆ ಮತಪಟ್ಟಿಯಿಂದ ನಿಮ್ಮ ಹೆಸರು ತೆಗೆದುಹಾಕಿದರೆ, ಅಡುಗೆಗೆ ಬಳಸುವ ಉಪಕರಣಗಳನ್ನು(ಚಾಕು, ಸೌಟು, ಲಟ್ಟಣಿಗೆ ಇತ್ಯಾದಿ) ಎತ್ತಿಕೊಳ್ಳಿ, ನಿಮ್ಮ ಬಲಪ್ರದರ್ಶಿಸಿ. ಬಿಜೆಪಿಗಿಂದ ಸ್ತ್ರೀಶಕ್ತಿ ಪ್ರಬಲ ಎಂಬುದನ್ನು ನಾನು ನೋಡಬೇಕಿದೆ’ ಎಂದು ಹೇಳಿದ್ದಾರೆ. ಜತೆಗೆ, ‘ಬಿಜೆಪಿ ಆಡಳಿತದಲ್ಲಿರುವ ಅಸ್ಸಾಂನಲ್ಲೇಕೆ ಎಸ್‌ಐಆರ್‌ ನಡೆಸಲಾಗುತ್ತಿಲ್ಲ?’ ಎಂದೂ ಪ್ರಶ್ನಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪ್ರಾಡಾದಿಂದ ಕೊಲ್ಹಾಪುರಿ ಚಪ್ಪಲಿ ಸೇಲ್‌, ಬೆಲೆ ₹83000!
ಹೆಣ್ಣು ಮಕ್ಕಳಿಗೆ ತವರು ಸುರಕ್ಷಿತ ಮಾಡಿ: ನಿತೀಶ್‌ಗೆ ಲಾಲು ಪುತ್ರಿ!