;Resize=(412,232))
ಮುಂಬೈ: 26 ಪ್ರವಾಸಿಗರನ್ನು ಬಲಿಪಡೆದ ಪಹಲ್ಗಾಂ ಉಗ್ರ ದಾಳಿಗೆ ಒಂದು ವರ್ಷ ತುಂಬಿದ ಬೆನ್ನಲ್ಲೇ, ಅದೇ ದಾಳಿಯನ್ನು ನೆನೆಪಿಸುವಂಥ ಉಗ್ರ ಕೃತ್ಯವೊಂದು ಮುಂಬೈನಲ್ಲಿ ಸೋಮವಾರ ನಡೆದಿದೆ. ಜೈಬ್ ಝುಬೇರ್ ಅನ್ಸಾರಿ (31) ಎಂಬಾತ, ಇಬ್ಬರು ಹಿಂದೂ ಭದ್ರತಾ ಸಿಬ್ಬಂದಿಗಳ ಧರ್ಮ ಕೇಳಿ, ಬಳಿಕ ಅವರು ಇಸ್ಲಾಂನ ಕಲ್ಮಾ (ಇಸ್ಲಾಂನ ಮಂತ್ರ) ಹೇಳಲು ವಿಫಲವಾದಾಗ ಚೂರಿಯಿಂದ ಇರಿದಿದ್ದಾನೆ. ಘಟನೆಯಲ್ಲಿ ಇಬ್ಬರೂ ಭದ್ರತಾ ಸಿಬ್ಬಂದಿಗಳಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ಈ ನಡುವೆ ಘಟನೆಯನ್ನು ‘ಒಂಟಿ ತೋಳ ದಾಳಿ’ ಎಂದು ಪರಿಗಣಿಸಿರುವ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಆರಂಭಿಸಿವೆ. ಇದೇ ವೇಳೆ ದಾಳಿಕೋರ, ಜಿಹಾದ್ ಹೆಸರಲ್ಲಿ ಹಿಂದೂಗಳ ಮೇಲೆ ದಾಳಿಯ ಉದ್ದೇಶ ಹೊಂದಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
2020ರಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿದ್ದ ಅನ್ಸಾರಿ, ಮುಂಬೈ ಹೊರವಲಯದ ಮೀರಾ ರೋಡ್‌ನ ನಯಾನಗರ ಪ್ರದೇಶದಲ್ಲಿ ವಾಸವಿದ್ದ. ಸೋಮವಾರ ಬೆಳಗ್ಗೆ ಆತ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ನಿಯೋಜಿತರಾಗಿದ್ದ ಸುಬ್ರತೋ ಸೇನ್ ಮತ್ತು ರಾಜ್‌ಕುಮಾರ್ ಮಿಶ್ರಾ ಎಂಬಿಬ್ಬರು ಭದ್ರತಾ ಸಿಬ್ಬಂದಿ ಬಳಿ ಸಮೀಪದಲ್ಲಿ ಮಸೀದಿ ಎಲ್ಲಿದೆ ಎಂದು ಕೇಳಿದ್ದಾನೆ. ಅವರಿಬ್ಬರೂ ತಮಗೆ ಗೊತ್ತಿಲ್ಲ ಎಂದಾಗ, ನೀವು ಹಿಂದೂಗಳೇ ಎಂದು ಪ್ರಶ್ನಿಸಿ ಮುಂದೆ ಸಾಗಿದ್ದಾನೆ. ಅದಾದ ಕೆಲವೇ ಕ್ಷಣಗಳಲ್ಲಿ ಮತ್ತೆ ಅದೇ ಸ್ಥಳಕ್ಕೆ ಮರಳಿದ ಅನ್ಸಾರಿ, ಇಬ್ಬರ ಬಳಿಯೂ ಕಲ್ಮಾ (ಇಸ್ಲಾಂನ ಮಂತ್ರ) ಪಠಿಸಿ ಎಂದಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿಗೆ ಅದು ತಮಗೆ ಗೊತ್ತಿಲ್ಲ ಎನ್ನುತ್ತಲೇ ಅನ್ಸಾರಿ ತನ್ನ ಬಳಿ ಇದ್ದ ಹರಿತವಾದ ಚೂರಿಯಿಂದ ಇಬ್ಬರ ಮೇಲೂ ಹಲವು ಬಾರಿ ದಾಳಿ ನಡೆಸಿ ಪರಾರಿಯಾಗಿದ್ದಾನೆ.
ಘಟನೆ ನಡೆದ ಒಂದು ಗಂಟೆಯ ಒಳಗೇ ಸಿಸಿಟೀವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಅನ್ಸಾರಿಯನ್ನು ಬಂಧಿಸಿದ್ದಾರೆ. ಬಳಿಕ ನಯಾನಗರದಲ್ಲೇ ಇರುವ ಸ್ಮಿತಾ ರೀಜೆನ್ಸಿಯಲ್ಲಿನ ದಾಳಿಕೋರನ ಮನೆ ಪರಿಶೀಲನೆ ನಡೆಸಿದಾಗ ಅಲ್ಲಿ ಕೆಲವೊಂದು ಧಾರ್ಮಿಕ ಪುಸ್ತಕಗಳು, ಆರೋಪಿಯ ದುಷ್ಕೃತ್ಯಕ್ಕೆ ಪುರಾವೆ ನೀಡುವಂಥ ವಸ್ತುಗಳು ಕಂಡುಬಂದಿವೆ. ಪ್ರಾಥಮಿಕ ವಿಚಾರಣೆ ವೇಳೆ ಆತ ಸ್ವಯಂ ಐಸಿಸ್ ಚಿಂತನೆಗಳಿಂದ ಪ್ರಭಾವಿತನಾಗಿದ್ದು, ಉಗ್ರ ಸಂಘಟನೆ ಸೇರುವ ಹಂಬಲ ಹೊಂದಿದ್ದ. ಆ ಹಾದಿಯಲ್ಲಿ ಈ ದಾಳಿ ಮೊದಲ ಹೆಜ್ಜೆ ಎಂದು ಪುಸ್ತಕಗಳಲ್ಲಿ ದಾಖಲಿಸಿದ್ದ ಎಂಬ ವಿಷಯಗಳು ಕಂಡುಬಂದಿದೆ.
ಜೊತೆಗೆ 3-4 ತಿಂಗಳ ಹಿಂದಿನವರೆಗೂ ಈತ ಸ್ಥಳೀಯ ಕೋಚಿಂಗ್ ಸೆಂಟರ್ ಒಂದರಲ್ಲಿ ರಸಾಯನ ಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಬೋಧಿಸುತ್ತಿದ್ದ. ಅಂತರ್ಜಾಲದಲ್ಲಿ ಐಸಿಸ್ ಸಂಘಟನೆ ಕುರಿತು, ಉಗ್ರ ದಾಳಿಯ ಕುರಿತು ಸಾಕಷ್ಟು ಹುಡುಕಾಟ ನಡೆಸಿದ್ದ ಎಂಬ ವಿಷಯಗಳು ಕೂಡಾ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕಳೆದ ವರ್ಷ ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಕ್ಕೆ ಬಂದಿದ್ದ ಹಿಂದೂ, ಕ್ರೈಸ್ತ ಪ್ರವಾಸಿಗರನ್ನು ಉಗ್ರರು ಇದೇ ರೀತಿ ಧರ್ಮ ಕೇಳಿ, ಕಲ್ಮಾ ಪಠಿಸುವಂತೆ ಹೇಳಿ, ಅವರು ವಿಫಲರಾದಾಗ ಎದೆಗೆ ಗುಂಡಿಟ್ಟು ಹತ್ಯೆ ಮಾಡಿದ್ದರು.
ಅನ್ಸಾರಿ ಯಾರು?:
ಮುಂಬೈ ಮೂಲದ ಅನ್ಸಾರಿ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ತೆರಳಿ ಕೆಲ ವರ್ಷ ಅಲ್ಲೇ ಕೆಲಸ ಮಾಡಿಕೊಂಡಿದ್ದ. ಆತನ ವರ್ಕ್ ಪರ್ಮಿಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ 2020ರಲ್ಲಿ ಭಾರತಕ್ಕೆ ಮರಳಿದ್ದ. ಮೊದಲಿಗೆ ಕುರ್ಲಾ ಮತ್ತು ವಾಷಿಯಲ್ಲಿ ವಾಸವಿದ್ದ ಈತ ಬಳಿಕ ಮೀರಾ ನಗರ್ ಪ್ರದೇಶಕ್ಕೆ ಬಂದು ನೆಲೆಸಿದ್ದ. ಈತನ ಪತ್ನಿ ಕೆಲ ಸಮಯದ ಹಿಂದೆ ಈತನನ್ನು ತೊರೆದು ಅಮೆರಿಕಕ್ಕೆ ಮರಳಿದ್ದಳು ಎಂಬುದು ಬೆಳಕಿಗೆ ಬಂದಿದೆ.
ಆಗಿದ್ದೇನು?
- ಐಸಿಸ್ ಸೇರುವ ಆಸಕ್ತಿ ಹೊಂದಿದ್ದ ಶಂಕಿತ ಉಗ್ರ ಜೈಬ್ ಝುಬೇರ್‌ನಿಂದ ದುಂಡಾವರ್ತನೆ
- ಇಬ್ಬರು ಹಿಂದೂ ಭದ್ರತಾ ಸಿಬ್ಬಂದಿಗಳ ಧರ್ಮ ಕೇಳಿ, ಬಳಿಕ ಕಲ್ಮಾ ಉಚ್ಚರಿಸಲು ಸೂಚನೆ
- ಕಲ್ಮಾ ಮಂತ್ರ ಉಚ್ಚರಿಸಲು ವಿಫಲವಾದ ಇಬ್ಬರೂ ಭದ್ರತಾ ಸಿಬ್ಬಂದಿಗೆ ಚೂರಿ ಇರಿತ
- ಕೃತ್ಯದ ಬೆನ್ನಲ್ಲೇ ಜೈಬ್ ಝುಬೇರ್ ಸೆರೆ. ಆತ ಹಿಂದು ಹತ್ಯೆ ಗುರಿ ಹೊಂದಿದ್ದ: ಫಡ್ನವೀಸ್
- ಎಟಿಎಸ್, ಎನ್‌ಐಎನಿಂದ ತನಿಖೆ ಆರಂಭ. ಆತನ ಹಿಂದಿನ ಪ್ರೇರಕರು ಯಾರೆಂಬ ತನಿಖೆ