ರಾಂಚಿ : ಜಾರ್ಖಂಡ್‌ ಲೋಕಸೇವಾ ಆಯೋಗದ (ಜೆಪಿಎಸ್ಸಿ) ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ, 3 ಪ್ರಮುಖ ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. ಇನ್ನೊಂದೆಡೆ ಅಕ್ರಮದ ಆರೋಪ ಹೊತ್ತ 3 ಜೆಪಿಎಸ್ಸಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ ತಿಂಗಳು ಸಿಜೆಪಿ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಶೈಕ್ಷಣಿಕ ಸುಧಾರಣೆಗೆ ಮುಂದಾದ ಬೆನ್ನಲ್ಲೇ, ಮತ್ತೊಂದು ಸರ್ಕಾರ ವಿದ್ಯಾರ್ಥಿ ಹೋರಾಟಕ್ಕೆ ಮಂಡಿಯೂರಿದಂತಾಗಿದೆ.

ಆದರೆ, ವಿದ್ಯಾರ್ಥಿಗಳ ಇತರ ಬೇಡಿಕೆಗಳಾದ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (ಸಿಜಿಎಲ್‌) ಪರೀಕ್ಷಾ ರದ್ದತಿ, ಈ ಕುರಿತು ಸಿಬಿಐ ತನಿಖೆ, ಪರೀಕ್ಷಾರ್ಥಿಗಳ ವಯೋಮಿತಿ ಸಡಿಲಿಕೆ ಸೇರಿದಂತೆ ಕೆಲವು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ನಿರಾಕರಿಸಿದೆ. ಹೀಗಾಗಿ ಪ್ರತಿಭಟನಾಕಾರರು ಹೋರಾಟ ಕೈಬಿಡಲ್ಲ ಎಂದು ಘೋಷಿಸಿದ್ದು, ಪೂರ್ವಯೋಜನೆಯಂತೆ ಸೋಮವಾರ ವಿಧಾನಸೌಧ ಚಲೋ ನಡೆಸಲು ನಿರ್ಧರಿಸಿದ್ದಾರೆ.

3 ಪರೀಕ್ಷೆ ರದ್ದು:

ವಿದ್ಯಾರ್ಥಿ ನಾಯಕರ ಜತೆ ಮಾತುಕತೆ ಬಳಿಕ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಸುದ್ವೀಯ ಕುಮಾರ್‌, ‘ಜೆಪಿಎಸ್‌ಸಿ ನಡೆಸಿದ್ದ 14ನೇ ಜೆಪಿಎಸ್ಸಿ ಪರೀಕ್ಷೆ, ಜೆಪಿಎಸ್ಸಿ ಬ್ಯಾಕ್‌ಲಾಗ್‌ ಪರೀಕ್ಷೆ-2023 ಮತ್ತು ಬ್ಯಾಕ್‌ಲಾಗ್ ಪರೀಕ್ಷೆ-2025 ಅನ್ನು ರದ್ದುಪಡಿಸಲು ನಿರ್ಧರಿಸಿದೆ’ ಎಂದರು.


ಆದರೆ, ‘ಸಿಜಿಎಲ್‌ ಪರೀಕ್ಷಾ ರದ್ದತಿ ಸಾಧ್ಯವಿಲ್ಲ. ಏಕೆಂದರೆ ಅದು ಸುಪ್ರಿಂ ಕೋರ್ಟ್‌ ಹಾಗೂ ಹೈಕೋರ್ಟ್‌ ಆದೇಶದಂತ ನಡೆದ ಪರೀಕ್ಷೆ. ಅವುಗಳ ರದ್ದತಿ ನಮ್ಮ ಕೈಲಿಲ್ಲ. ಅಲ್ಲದೆ, ಪರೀಕ್ಷಾ ಅಕ್ರಮದ ಬಗ್ಗೆ ಸಿಐಡಿ ತನಿಖೆ ಹಾಗೂ ಹಣಕಾಸು ಅಕ್ರಮದ ಬಗ್ಗೆ ಇ,ಡಿ. ತನಿಖೆಗೆ ಒಪ್ಪಿಕೊಳ್ಳಲಾಗಿದೆ. ಸಿಬಿಐ ತನಿಖೆ ಸಾಧ್ಯವಿಲ್ಲ. ಅಲ್ಲದೆ ಪರೀಕ್ಷಾರ್ಥಿಗಳ ವಯೋಮಿತಿ ಸಡಿಲಿಕೆ ಬಗ್ಗೆ ಒಮ್ಮತ ವ್ಯಕ್ತವಾಗಿಲ್ಲ. ಇವನ್ನು ಹೊರತುಪಡಿಸಿ ಮಿಕ್ಕ ಶೇ.98 ಬೇಡಿಕೆ ಈಡೇರಿಸಲಾಗಿದೆ’ ಎಂದು ಹೇಳಿದರು.

ಇದರ ನಡುವೆ, ಅಜೀತಾ ಭಟ್ಟಾಚಾರ್ಯ, ಅನಿಮಾ ಹಂಸ್ದಾ ಮತ್ತು ಜಮಾಲ್ ಅಹ್ಮದ್ ಎಂಬ ಜೆಪಿಎಸ್ಸಿ ಸದಸ್ಯರು ರಾಜೀನಾಮೆ ಪ್ರಕಟಿಸಿದರು.

ಈ ಬಗ್ಗೆ ಮಾತನಾಡಿದ ಹೋರಾಟಗಾರ ರವೀಂದ್ರ ಪಾಸ್ವಾನ್, ‘ಸರ್ಕಾರ ಸಿಬಿಐ ತನಿಖೆ ಸೇರಿದಂತೆ ನಮ್ಮ ಇನ್ನೂ ಹಲವು ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಸೋಮವಾರ ವಿಧಾನಸೌಧ ಚಲೋ ನಡೆಸಲಿದ್ದೇವೆ. ಹೋರಾಟ ನಿಂತಿಲ್ಲ’ ಎಂದರು.

ಈ ನಡುವೆ ರಾಜ್ಯಪಾಲ ಸಂತೋಷ್‌ ಕುಮಾರ್‌ ಗಂಗ್ವಾರ್ ಹಾಗೂ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಮಾತನಾಡಿ, ‘ಹೋರಾಟ ಬಿಟ್ಟು ಮಾತುಕತೆಗೆ ಬನ್ನಿ’ ಎಂದು ಪ್ರತಿಭಟನಾಕಾರರಿಗೆ ಕರೆ ನೀಡಿದ್ದಾರೆ.

16 ದಿನದ ಹೋರಾಟ:

ಜೆಪಿಎಸ್ಸಿ ಪರೀಕ್ಷಾ ಅಕ್ರಮ ವಿರುದ್ಧ 16 ದಿನದಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಒಟ್ಟಾರೆ 6 ಪ್ರತಿಭಟನಾಕಾರರು ನಿರಶನ ನಡೆಸುತ್ತಿದ್ದಾರೆ. ಈ ಪೈಕಿ ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರ ಆರೋಗ್ಯ ಸ್ಥಿತಿ ಕಳವಳಕಾರಿಯಾಗಿದೆ. ಮತ್ತೊಬ್ಬ ವಿದ್ಯಾರ್ಥಿ ರಾಹುಲ್ ಕ್ರಾಂತಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ.

ಜೆನ್‌-ಝೀಗಳ ಶಕ್ತಿ ಕಡೆಗಣಿಸಲಾಗದು 

ಭುವನೇಶ್ವರ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧ ರಾಜೀನಾಮೆ ನೀಡಿದ ನಿರ್ಗಮಿತ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ಜೆನ್‌-ಝೀಗಳನ್ನು ‘ಕಡೆಗಣಿಸಲಾಗದ ಶಕ್ತಿ’ ಎಂದು ಹೊಗಳಿದ್ದಾರೆ. ಜೆನ್‌ ಝೀಗಳು ಭಾರತವನ್ನು ವಿಶ್ವಗುರು ಮಾಡಲಿದ್ದಾರೆ. ಆದರೆ ಅವರನ್ನು ನೀಟ್‌ ಪ್ರತಿಭಟನೆ ವೇಳೆ ತಪ್ಪುದಾರಿಗೆಳೆಯುವ ಪ್ರಯತ್ನ ನಡೆಯಿತು. ಈ ಹಿನ್ನೆಲೆಯಲ್ಲಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು’ ಎಂದಿದ್ದಾರೆ.