ಅಸ್ಸಾಂನಲ್ಲಿ ಮುಸ್ಲಿಂ ವಿವಾಹ ಕಾಯ್ದೆ ರದ್ದು: ಸರ್ಕಾರಿ ನೋಂದಣಿ ಕಡ್ಡಾಯ ಮಸೂದೆ ಅಂಗೀಕಾರ

KannadaprabhaNewsNetwork |  
Published : Aug 30, 2024, 02:03 AM ISTUpdated : Aug 30, 2024, 04:27 AM IST
ಮದುವೆ | Kannada Prabha

ಸಾರಾಂಶ

ಅಸ್ಸಾಂ ಸರ್ಕಾರವು ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆಯನ್ನು ರದ್ದುಗೊಳಿಸಿ, ಸರ್ಕಾರಿ ನೋಂದಣಿಯನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ಅಂಗೀಕರಿಸಿದೆ. ಈ ಕ್ರಮವು ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

 ಗುವಾಹಟಿ :  ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಈ ಹಿಂದೆ ಪ್ರಕಟಿಸಿದ್ದಂತೆ ಅಸ್ಸಾಂನ ಬಿಜೆಪಿ ಸರ್ಕಾರ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆಯನ್ನು ರದ್ದುಗೊಳಿಸಿ, ‘ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿಯನ್ನು ಸರ್ಕಾರದಲ್ಲೇ ಮಾಡಿಸಬೇಕು’ ಎಂಬುದನ್ನು ಕಡ್ಡಾಯಗೊಳಿಸುವ ಮಸೂದೆ ಅಂಗೀಕರಿಸಿದೆ.

ತನ್ಮೂಲಕ, ಏಕರೂಪದ ನಾಗರಿಕ ಸಂಹಿತೆ ಜಾರಿಯತ್ತ ಇನ್ನೊಂದು ಹೆಜ್ಜೆ ಇರಿಸಿದೆ.

ಈವರೆಗೆ ಅಸ್ಸಾಂನಲ್ಲಿ 1935ರ ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳ ನೋಂದಣಿ ಕಾಯ್ದೆ ಜಾರಿಯಲ್ಲಿತ್ತು. ಅದರಡಿ ಮುಸ್ಲಿಂ ಜನಾಂಗದಲ್ಲಿ ಬಾಲ್ಯವಿವಾಹಕ್ಕೆ ಅವಕಾಶವಿತ್ತು. ಜೊತೆಗೆ, ವಿವಾಹ ಮತ್ತು ವಿಚ್ಛೇದನಗಳನ್ನು ಸರ್ಕಾರದ ಬದಲು ಮುಸ್ಲಿಂ ಸಮುದಾಯದ ಕಾಜಿಗಳು ನೋಂದಣಿ ಮಾಡಿಕೊಳ್ಳುತ್ತಿದ್ದರು. ಈ ಕಾಯ್ದೆಯನ್ನು ರದ್ದುಪಡಿಸುವ ಮಸೂದೆಯನ್ನು ಗುರುವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಬಳಿಕ ‘ಅಸ್ಸಾಂ ಮುಸ್ಲಿಂ ವಿವಾಹಗಳ ಕಡ್ಡಾಯ ನೋಂದಣಿ ಮತ್ತು ವಿಚ್ಛೇದನಗಳ ಮಸೂದೆ-2024’ ಮಂಡಿಸಿ ಅಂಗೀಕರಿಸಲಾಯಿತು. ಈ ಮಸೂದೆಯ ಪ್ರಕಾರ ಮುಸ್ಲಿಮರು ಇನ್ನುಮುಂದೆ ಕಾಜಿಗಳ ಬದಲು ಸರ್ಕಾರಿ ವ್ಯವಸ್ಥೆಯಲ್ಲಿ ವಿವಾಹ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ ಹಾಗೂ ಕೋರ್ಟ್‌ನಲ್ಲೇ ವಿಚ್ಛೇದನ ಪಡೆಯಬೇಕಾಗುತ್ತದೆ.

‘ಈವರೆಗೆ ಕಾಜಿಗಳು ನೋಂದಣಿ ಮಾಡಿದ ಮುಸ್ಲಿಂ ಮದುವೆಗಳು ಊರ್ಜಿತವಾಗಿಯೇ ಇರುತ್ತವೆ. ಆದರೆ, ಇನ್ನುಮುಂದೆ ನಡೆಯುವ ಮದುವೆಗಳನ್ನು ಸರ್ಕಾರದಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ. ನಾವು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಯಾವುದೇ ರೀತಿ ಹಸ್ತಕ್ಷೇಪ ಮಾಡುತ್ತಿಲ್ಲ. ಆದರೆ, ಇಸ್ಲಾಂ ಪ್ರಕಾರ ನಿಷಿದ್ಧವಾದ ಮದುವೆಗಳು ನೋಂದಣಿಯಾಗದಂತೆ ತಡೆಯುತ್ತಿದ್ದೇವೆ. ಜೊತೆಗೆ, ಬಾಲ್ಯ ವಿವಾಹಗಳ ನೋಂದಣಿಯನ್ನು ತಡೆಯುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸದನದಲ್ಲಿ ಹೇಳಿದರು.

ಕಡಿವಾಣ ಸಾಧ್ಯ, ರದ್ದಿಲ್ಲ:

ಆದರೆ, ಹೊಸ ಕಾಯ್ದೆಯಿಂದ ಇಸ್ಲಾಂನಲ್ಲಿರುವ ಬಹುಪತ್ನಿತ್ವ ಪದ್ಧತಿ ಸಂಪೂರ್ಣ ರದ್ದಾಗುವುದಿಲ್ಲ. ಬಹುಪತ್ನಿತ್ವದ ಮೇಲೆ ನಿಗಾ ಇಡುವುದು ಮಾತ್ರ ಸಾಧ್ಯವಾಗಲಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಸೂದೆಗಳನ್ನು ಮಂಡಿಸಿದ ಕಂದಾಯ ಸಚಿವ ಜೋಗೆನ್‌ ಮೋಹನ್‌, ‘ಹೊಸ ಕಾಯ್ದೆಯಿಂದ ಬಹುಪತ್ನಿತ್ವಕ್ಕೆ ಕಡಿವಾಣ ಬೀಳಲಿದೆ. ವಿವಾಹಿತ ಮುಸ್ಲಿಂ ಮಹಿಳೆಯರಿಗೆ ಗಂಡನ ಮನೆಯಲ್ಲಿ ವಾಸಿಸುವ ಹಕ್ಕು ಹಾಗೂ ಜೀವನಾಂಶದ ಹಕ್ಕು ಲಭಿಸಲಿದೆ. ವಿಧವೆಯರಿಗೆ ಪತಿಯ ಆಸ್ತಿಯ ಮೇಲೆ ಹಕ್ಕು ಸಿಗಲಿದೆ. ಮುಸ್ಲಿಂ ಪುರುಷರು ಮದುವೆಯ ಬಳಿಕ ಪತ್ನಿಯರನ್ನು ತೊರೆಯುವುದಕ್ಕೆ ಕಡಿವಾಣ ಬೀಳಲಿದೆ’ ಎಂದು ಹೇಳಿದರು.

ಏಕೆ ಈ ಮಸೂದೆ?- ಮುಸ್ಲಿಂ ವಿವಾಹ, ವಿಚ್ಛೇದನ ನೋಂದಣಿಗೆ ಅಸ್ಸಾಂನಲ್ಲಿ 1935ರ ಕಾಯ್ದೆ ಪಾಲನೆಯಾಗುತ್ತಿದೆ

- ಮುಸ್ಲಿಂ ಸಮುದಾಯದಲ್ಲಿ ಬಾಲ್ಯ ವಿವಾಹ ಮಾಡಲು ಈ ಕಾಯ್ದೆಯಡಿ ಅವಕಾಶ ಸಿಗುತ್ತಿದೆ

- ಸರ್ಕಾರದ ಬದಲು ಮುಸ್ಲಿಂ ಕಾಜಿಗಳು ನೋಂದಣಿ ಮಾಡುತ್ತಿದ್ದರು. ಈ ಕಾಯ್ದೆ ರದ್ದತಿಗೆ ಈಗ ಬಿಲ್‌

- ಕಾಜಿಗಳ ಬದಲು ಸರ್ಕಾರಿ ವ್ಯವಸ್ಥೆಯಲ್ಲಿ ವಿವಾಹ ನೋಂದಣಿಗೆ ಹೊಸ ಮಸೂದೆ ಮಂಡನೆ

- ಇನ್ನು ಮುಸ್ಲಿಮರು ವಿಚ್ಛೇದನ ಪಡೆಯಲು ಇತರರಂತೆ ಕೋರ್ಟ್‌ ಮೊರೆ ಹೋಗಬೇಕಾಗುತ್ತದೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ