ಚುನಾವಣೆಗೆ ಮೊದಲೇ ಬಿಜೆಪಿ ಗೆಲುವಿನ ಖಾತೆ ಶುರು

KannadaprabhaNewsNetwork |  
Published : Apr 23, 2024, 12:45 AM ISTUpdated : Apr 23, 2024, 08:00 AM IST
ಸುರತ್‌ ದಲಾಲ್‌ | Kannada Prabha

ಸಾರಾಂಶ

ಬಲು ಅಪರೂಪದ ವಿದ್ಯಮಾನವೊಂದರಲ್ಲಿ ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ಸೂರತ್‌ :  ಬಲು ಅಪರೂಪದ ವಿದ್ಯಮಾನವೊಂದರಲ್ಲಿ ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಲೋಕಸಭೆ ಚುನಾವಣೆ ಪೂರ್ಣಗೊಳ್ಳುವ ಮೊದಲೇ ಬಿಜೆಪಿ ಮೊದಲ ವಿಜಯ ಸಾಧಿಸಿ ಖಾತೆ ತರೆದಿದೆ.

ಭಾನುವಾರ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಸೂಚಕರ ಸಹಿ ನಕಲಿ ಎಂದು ಹೇಳಿ ತಿರಸ್ಕರಿಸಲಾಗಿತ್ತು. ಇದರ ಬೆನ್ನಲ್ಲೇ ಉಳಿದ 8 ಅಭ್ಯರ್ಥಿಗಳೂ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾದ ಸೋಮವಾರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಹೀಗಾಗಿ ‘ ಬಿಜೆಪಿ ಅಭ್ಯರ್ಥಿ ಮುಖೇಶ್‌ಕುಮಾರ್ ಚಂದ್ರಕಾಂತ್ ದಲಾಲ್ ಅವರು ಸೂರತ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಸೌರಭ್‌ ಪಾರ್ದಿ ಸಾರಿದ್ದು, ಅವರಿಗೆ ಗೆಲುವಿನ ಪ್ರಮಾಣಪತ್ರ ವಿತರಿಸಿದ್ದಾರೆ.ಇದರ ಬೆನ್ನಲ್ಲೇ ‘ಪ್ರಧಾನಿ ನರೇಂದ್ರ ಮೋದಿಯವರಿಗೆ ಸೂರತ್ ಮೊದಲ ಕಮಲವನ್ನು ಅರ್ಪಿಸಿದೆ‘ ಎಂದು ಗುಜರಾತ್ ಘಟಕದ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಎಕ್ಸ್ (ಹಿಂದಿನ ಟ್ವೀಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.ಆಗಿದ್ದೇನು?:

ಭಾನುವಾರ ಕಾಂಗ್ರೆಸ್‌ನ ನೀಲೇಶ್ ಕುಂಭಾಣಿ ಅವರ ಉಮೇದುವಾರಿಕೆಯನ್ನು ಜಿಲ್ಲಾ ಚುನಾವಣಾಧಿಕಾರಿ ತಿರಸ್ಕರಿಸಿದ್ದರು. ನಾಮಪತ್ರದಲ್ಲಿ ಸಹಿ ಇದ್ದ ಮೂವರು, ತಮ್ಮ ಸಹಿ ನಕಲಿ ಎಂದು ದೂರು ನೀಡಿದ ಕಾರಣ ನಾಮಪತ್ರ ತಿರಸ್ಕರಿಸಲಾಗಿತ್ತು. ಇದೇ ವೇಳೆ, ಕಾಂಗ್ರೆಸ್‌ನ ಬದಲಿ ಅಭ್ಯರ್ಥಿಯಾಗಿದ್ದ ಸುರೇಶ್ ಪಡಸಾಲ ಅವರ ನಾಮಪತ್ರವೂ ಇದೇ ಕಾರಣಕ್ಕೆ ಅಸಿಂಧುಗೊಂಡಿತ್ತು.ದಲಾಲ್ ಹೊರತುಪಡಿಸಿ, ಸೂರತ್‌ನಿಂದ ಕಣದಲ್ಲಿದ್ದ ಎಲ್ಲಾ 8 ಅಭ್ಯರ್ಥಿಗಳು- 4 ಸ್ವತಂತ್ರರು, 3 ಸಣ್ಣ ಪಕ್ಷಗಳಿಂದ ಮತ್ತು ಬಹುಜನ ಸಮಾಜ ಪಕ್ಷದ ಪ್ಯಾರೇಲಾಲ್ ಭಾರ್ತಿ- ಕೊನೆಯ ದಿನ ಅವರೆಲ್ಲಾ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ ಎಂದು ಸೂರತ್ ಜಿಲ್ಲಾ ಚುನಾವಣಾ ಕಚೇರಿ ತಿಳಿಸಿದೆ. ಹೀಗಾಗಿ ದಲಾಲ್‌ ಅವಿರೋಧ ಆಯ್ಕೆ ಆಗಿದ್ದಾರೆ.

ಇದು ಮ್ಯಾಚ್‌ ಫಿಕ್ಸಿಂಗ್‌- ಕಾಂಗ್ರೆಸ್‌:ಬಿಜೆಪಿಯ ಒತ್ತಾಯದ ಮೇರೆಗೆ ಕುಂಭಣಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಕಾಂಗ್ರೆಸ್ನು ಆರೋಪಿಸಿದ್ದು, ತಿರಸ್ಕಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.

ಇದೇ ವೇಳೆ, ‘ಸೂರತ್‌ ಉದ್ಯಮ ನಗರವಾಗಿದ್ದು, ಬಿಜೆಪಿ ಇಲ್ಲಿ ಏನೂ ಕೆಲಸ ಮಾಡಿಲ್ಲ. ಹೀಗಾಗಿ ಉದ್ಯಮಿಗಳಿಗೆ ಬಿಜೆಪಿ ಮೇಲೆ ಸಿಟ್ಟಿದೆ. ಹೀಗಾಗಿ ಸೋಲಿನ ಭಯದಲ್ಲಿದ್ದ ಬಿಜೆಪಿ ಮೊದಲು ಇಬ್ಬರೂ ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ ಆಗುವಂತೆ ನೋಡಿಕೊಂಡಿತು. ನಂತರ ಮೂಲಕ ಉಳಿದ ಅಭ್ಯರ್ಥಿಗಳ ನಾಮಪತ್ರವನ್ನೂ ಹಿಂಪಡೆಯುವಂತೆ ಮಾಡಲಾಗಿದೆ. 

ಇದೆಲ್ಲ ಮ್ಯಾಚ್ ಫಿಕ್ಸಿಂಗ್’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಕಿಡಿಕಾರಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾದ ಗುಜರಾತ್‌ನ ಎಲ್ಲಾ 26 ಕ್ಷೇತ್ರಗಳಿಗೆ ಮೇ 7 ರಂದು ಮತದಾನವನ್ನು ನಿಗದಿಪಡಿಸಲಾಗಿದೆ. ಆದರೆ ಸೂರತ್‌ನ ಫಲಿತಾಂಶ ಹೊರಬಿದ್ದ ಕಾರಣ, 25 ಸ್ಥಾನಗಳಿಗೆ ಮತದಾನ ನಡೆಯಲಿದೆ. 2019ರಲ್ಲಿ ಎಲ್ಲಾ 26 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ