ಭಾರತದ ಅತಿದೊಡ್ಡ ಬಂದರು : ಮಹಾರಾಷ್ಟ್ರದ ವಾಧ್ವಾನ್‌ಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ

KannadaprabhaNewsNetwork |  
Published : Aug 31, 2024, 01:37 AM ISTUpdated : Aug 31, 2024, 04:41 AM IST
ಮೋದಿ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ 76 ಸಾವಿರ ಕೋಟಿ ರೂ. ವೆಚ್ಚದ ವಾಧ್ವಾನ್‌ ಬಂದರಿಗೆ ಶಂಕುಸ್ಥಾಪನೆ ನೆರವೇರಿಸಿದರು. 2030ರಲ್ಲಿ ಪೂರ್ಣಗೊಳ್ಳಲಿರುವ ಈ ಬಂದರು, ಭಾರತವನ್ನು ಅಂತಾರಾಷ್ಟ್ರೀಯ ಹಡಗು ಮಾರ್ಗಕ್ಕೆ ನೇರವಾಗಿ ಸಂಪರ್ಕಿಸಲಿದೆ.

ಪಾಲ್ಘರ್ (ಮಹಾರಾಷ್ಟ್ರ): ಭಾರತಕ್ಕೆ ಅಂತಾರಾಷ್ಟ್ರೀಯ ಹಡಗು ಮಾರ್ಗದೊಂದಿಗೆ ನೇರ ಸಂಪರ್ಕ ಕಲ್ಪಿಸುವ, ದೇಶದ ಬೃಹತ್‌ ಬಂದರು ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಇಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ನಗರದ ವ್ಯಾಪ್ತಿಯಲ್ಲಿ ವಾಧ್ವಾನ್‌ ಬಂದರನ್ನು 76 ಸಾವಿರ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

2030ರಲ್ಲಿ ಬಂದರು ನಿರ್ಮಾಣ ಪೂರ್ಣಗೊಂಡ ಬಳಿಕ ಇದು ‘ದೇಶದ ಅತಿ ಬೃಹತ್ ಬಂದರುಗಳಲ್ಲಿ ಒಂದು ಹಾಗೂ ‘ವಿಶ್ವದ ಟಾಪ್‌ 10’ ಬಂದರುಗಳಲ್ಲಿ ಒಂದೆನ್ನಿಸಿಕೊಳ್ಳಲಿದೆ. ಅರಬ್ಬೀ ಸಮುದ್ರದಲ್ಲಿ ನಿರ್ಮಾಣಗೊಳ್ಳಲಿರುವ ಈ ಬಂದರು ಪೂರ್ವ ಏಷ್ಯಾ, ಯುರೋಪ್‌, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಅಮೆರಿಕ ದೇಶಗಳಿಗೆ ಹಡಗು ಮಾರ್ಗದಲ್ಲಿ ಭಾರತದ ವ್ಯಾಪಾರ ಅಭಿವೃದ್ಧಿಗೆ ಭಾರೀ ನೆರವಾಗಲಿದೆ. ಜೊತೆಗೆ ಸಮಯ ಮತ್ತು ವೆಚ್ಚ ಉಳಿತಾಯಕ್ಕೂ ನೆರವಾಗಲಿದೆ. 12 ಲಕ್ಷ ಉದ್ಯೋಗ ಸೃಷ್ಟಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಯೋಜನೆಯಲ್ಲಿ ಶೇ.74ರಷ್ಟು ಪಾಲನ್ನು ಜವಾಹರ್‌ಲಾಲ್‌ ನೆಹರೂ ಬಂದರು ಪ್ರಾಧಿಕಾರ ಹೊಂದಿದ್ದರೆ, ಶೇ.26ರಷ್ಟು ಪಾಲನ್ನು ಮಹಾರಾಷ್ಟ್ರ ಸಾಗರ ಮಂಡಳಿ ಹೊಂದಿರಲಿದೆ.

ಹೀಗಿರಲಿದೆ ಬಂದರು:

ಸಮುದ್ರದಲ್ಲಿ 1448 ಹೆಕ್ಟೇರ್‌ ಪ್ರದೇಶವನ್ನು ಬಳಸಿಕೊಂಡು ಬಂದರು ನಿರ್ಮಿಸಲಾಗುವುದು. ಜೊತೆಗೆ ಸಮುದ್ರದಲ್ಲಿ 10.14 ಕಿ.ಮೀ ಉದ್ದದಷ್ಟು ಜಾಗದಲ್ಲಿ ತಡೆಗೋಡೆ ನಿರ್ಮಿಸಲಾಗುವುದು.

ಈ ಅತ್ಯಾಧುನಿಕ ಬಂದರು 1000 ಮೀಟರ್‌ ಉದ್ದದ 9 ಕಂಟೇನರ್‌ ಟರ್ಮಿನಲ್ಸ್‌, ಮಲ್ಟಿಪರ್ಪಸ್‌ ಬರ್ತ್ಸ್‌, ಲಿಕ್ವಿಡ್‌ ಕಾರ್ಗೋ ಬರ್ತ್ಸ್‌, ರೋ- ರೋ ಬರ್ತ್ಸ್‌ ಮತ್ತು ಕರಾವಳಿ ಕಾವಲು ಪಡೆಗೆಂದೇ ಪ್ರತ್ಯೇಕ ಬರ್ತ್‌ (ತಂಗುದಾಣ) ಹೊಂದಿರಲಿದೆ. ವಾರ್ಷಿಕ 298 ಎಂಎಂಟಿಯಷ್ಟು ಸರಕು ನಿರ್ವಹಣೆ ಸಾಮರ್ಥ್ಯ ಹೊಂದಿರಲಿದೆ.

ಐತಿಹಾಸಿಕ ದಿನ- ಮೋದಿ:

ಬಂದರಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, ‘ದೇಶದ ಅಭಿವೃದ್ಧಿಯ ಪಥದಲ್ಲಿ ಇಂದು ಐತಿಹಾಸಿಕ ದಿನ. ನವ ಭಾರತ ತನ್ನ ಸಾಮರ್ಥ್ಯ ಅರಿತುಕೊಂಡಿದೆ ಮತ್ತು ಗುಲಾಮಗಿರಿಯ ಸಂಕೋಲೆಯಿಂದ ಹೊರಬಂದಿದೆ. ಇದಕ್ಕೆ ವಾಧ್ವಾನ್ ಬಂದರು ನಿರ್ಮಾಣಕ್ಕೆ ಮುಂದಾಗಿರುವುದು ಸಾಕ್ಷಿ. ಇದು ದೇಶದ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡಲಿದೆ. 12 ಲಕ್ಷ ಉದ್ಯೋಗಗಳು ಸೃಷ್ಟಿ ಆಗಲಿವೆ’ ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ