ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಎಂಜಿ-ನರೇಗಾ) ಹೆಸರನ್ನು ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್- ವಿಕಸಿತ ಭಾರತ್ ಗ್ಯಾರಂಟಿ ಮಸೂದೆ (ವಿಬಿ-ಜಿ ರಾಮ್ ಜಿ) ಎಂದು ಬದಲಿಸುವುದನ್ನು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ವಿರೋಧಿಸಿದ್ದು, ಗಾಂಧೀಜಿ ಹೆಸರು ತೆಗೆದು ಹಾಕುವ ಮೂಲಕ 2ನೇ ಬಾರಿ ಅವರನ್ನು ಹತ್ಯೆ ಮಾಡಿದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಜಿ ರಾಮ್ ಜಿ ಮಸೂದೆ ಗುರುವಾರ ಮತಕ್ಕೆ ಹೋಗುವ ಸಾಧ್ಯತೆ ಇದ್ದು, ಈ ವೇಳೆ ಸವಿಸ್ತಾರ ಉತ್ತರ ನೀಡುವಂತೆ ಚೌಹಾಣ್‌ಗೆ ಸ್ಪೀಕರ್ ಓಂ ಬಿರ್ಲಾ ಸೂಚಿಸಿದ್ದಾರೆ.
==ರಾಹುಲ್-ಪ್ರಿಯಾಂಕಾ ಮಧ್ಯೆ ಮನಸ್ತಾಪ: ಕೇಂದ್ರ ಸಚಿವ
- ಸಂಸತ್ ಭಾಷಣದ ಹೋಲಿಕೆ ಸಂಬಂಧ ಬೇಸರ- ಇದೇ ಕಾರಣಕ್ಕೆ ರಾಗಾ ಜರ್ಮನಿ ಪ್ರವಾಸ: ಬಿಟ್ಟು
ನವದೆಹಲಿ: ‘ಗಾಂಧಿ ಕುಟುಂಬದ ನಡುವೆ ಎಲ್ಲವೂ ಸರಿಯಿಲ್ಲ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸಂದೆ ಪ್ರಿಯಾಂಕಾ ಗಾಂಧಿ ನಡುವೆ ತಿಕ್ಕಾಟ ಶುರುವಾಗಿದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅವರು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಅರ್ಧದಲ್ಲೇ ಬಿಟ್ಟು ಜರ್ಮನಿಗೆ ತೆರಳಿದ್ದಾರೆ’ ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಹೇಳಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜನ ಇತ್ತೀಚೆಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಸಂಸತ್ ಭಾಷಣದ ಹೋಲಿಕೆ ಆರಂಭಿಸಿದ್ದರಿಂದ ಲೋಕಸಭೆ ಪ್ರತಿಪಕ್ಷ ನಾಯಕ ತೀವ್ರ ಅಸಮಾಧಾನಗೊಂಡಿದ್ದಾರೆ. ಏಕೆಂದರೆ ಪ್ರಿಯಾಂಕಾ ಮಾತನಾಡಿದ್ದು ಇಂದಿರಾ ಗಾಂಧಿ ರೀತಿ ಇತ್ತು ಎಂದು ಕೆಲವರು ಹೊಗಳಿದ್ದರು. ಇದೇ ಕಾರಣಕ್ಕೆ ರಾಹುಲ್ ಕೋಪಗೊಂಡಿದ್ದಾರೆ ಎಂದು ತಿಳಿದುಬಂದಿದೆ’ ಎಂದರು.ಕಳೆದ ಲೋಕಸಭಾ ಚುನಾವಣೆಯಲ್ಲಷ್ಟೇ ಕಾಂಗ್ರೆಸ್ ಬಿಟ್ಟಿದ್ದ ‘ಬಿಟ್ಟು’, ಬಿಜೆಪಿ ಸೇರಿದ್ದರು,ಡಿ.15ರಿಂದ ಡಿ.20ರ ವರೆಗೆ ನಡೆಯಲಿರುವ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ರಾಹುಲ್ ಗಾಂಧಿ ಅವರು ಅಧಿವೇಶನದ ನಡುವೆಯೇ ಬರ್ಲಿನ್‌ಗೆ ತೆರಳಿದ್ದರು. ಡಿ.19ರಂದು ಮುಕ್ತಾಯವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ನಡುವೆಯೇ ಅವರು ವಿದೇಶ ಪ್ರವಾಸ ಕೈಗೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿತ್ತು.
==ಪ್ರಶಾಂತ್ ಕಿಶೋರ್, ಪ್ರಿಯಾಂಕಾ ಗಾಂಧಿ ರಹಸ್ಯ ಭೇಟಿ ಕುತೂಹಲ
- ಬಿಹಾರ ಚುನಾವಣಾ ಸೋಲಿನ ಪರಾಮರ್ಶೆ?
ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ದೆಹಲಿಯಲ್ಲಿ ಜನ್ ಸುರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಕಳೆದ ವಾರ ಸೋನಿಯಾ ಗಾಂಧಿ ಅವರ 10, ಜನಪಥ ನಿವಾಸದಲ್ಲಿ ಭೇಟಿ ನಡೆದಿದೆ ಎಂದು ಅವು ಹೇಳಿವೆ.ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜನ್ ಸುರಾಜ್ ಹೀನಾಯವಾಗಿ ಸೋತಿವೆ. ಜನ್ ಸುರಾಜ್ 236 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷ ಎರಡಂಕಿಯನ್ನೂ ತಲುಪಿಲ್ಲ. ಹೀಗಾಗಿ ಉಭಯ ಪಕ್ಷಗಳನ್ನು ಮರುಸಂಘಟಿಸಲು ಈ ಭೇಟಿ ನಡೆದಿದೆಯೇ ಎಂಬ ಬಗ್ಗೆ ರಾಜಕೀಯ ಪಡಸಾಲೆಗಳಲ್ಲಿ ಚರ್ಚೆ ನಡೆದಿದೆ.ಈ ಭೇಟಿ ಬಗ್ಗೆ ಪ್ರಿಯಾಂಕಾ ಗಾಂಧಿ ಅವರನ್ನು ಪ್ರಶ್ನಿಸಿದಾಗ, ‘ನಾನು ಯಾರನ್ನು ಭೇಟಿಯಾಗುತ್ತೇನೆ ಅಥವಾ ಯಾರನ್ನು ಭೇಟಿಯಾಗುವುದಿಲ್ಲ ಎಂಬುದರ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ’ ಎಂದು ಹಾರಿಕೆ ಉತ್ತರ ನೀಡಿದರು. ಆದರೆ ಪಿಕೆ ಎಂದು ಕರೆಯಲ್ಪಡುವ ಪ್ರಶಾಂತ ಕಿಶೋರ್, ‘ನಾನು ಪ್ರಿಯಾಂಕಾರನ್ನು ಭೇಟಿಯೇ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.