ಹೊಸ ವರ್ಷಕ್ಕೆ ಏನೆಲ್ಲಾ ಬದಲಾಗುತ್ತಿದೆ ?

KannadaprabhaNewsNetwork |  
Published : Dec 31, 2025, 01:45 AM IST
UPI

ಸಾರಾಂಶ

ನವವರ್ಷದ ಹರ್ಷದ ನಡುವೆಯೇ, ಜ.1ರಿಂದ ಜನಜೀವನದ ಮೇಲೆ ಪರಿಣಾಮ ಬೀರುವ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಕೆಲ ಪ್ರಮುಖ ಮಾರ್ಪಾಡುಗಳು ಇಂತಿವೆ. ಆದಾಯ, ಪಾವತಿ, ಬ್ಯಾಂಕಿಂಗ್‌ನಲ್ಲಿ ಮಾರ್ಪಾಡುಐಟಿಆರ್‌ ಪ್ರಕ್ರಿಯೆ ಸರಳ, ಸರ್ಕಾರಿ ನೌಕರರ ವೇತನ ಹೆಚ್ಚಳ

 ನವದೆಹಲಿ: ನವವರ್ಷದ ಹರ್ಷದ ನಡುವೆಯೇ, ಜ.1ರಿಂದ ಜನಜೀವನದ ಮೇಲೆ ಪರಿಣಾಮ ಬೀರುವ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಕೆಲ ಪ್ರಮುಖ ಮಾರ್ಪಾಡುಗಳು ಇಂತಿವೆ.

ಪಿಎಂ ಕಿಸಾನ್‌:

ಮುಂದಿನ ವರ್ಷದಿಂದ ಪಿಎಂ ಕಿಸಾನ್‌ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರೈತರು ವಿಶೇಷ ಕಿಸಾನ್‌ ಐಡಿ ಹೊಂದುವುದು ಕಡ್ಡಾಯವಾಗಲಿದೆ. ರೈತರ ಭೂ ದಾಖಲೆಗಳು, ಬೆಳೆ ಮಾಹಿತಿ, ಆಧಾರ್ ಮತ್ತು ಬ್ಯಾಂಕ್ ವಿವರಗಳು ಈ ಐಡಿಗೆ ಲಿಂಕ್‌ ಆಗಿರಲಿವೆ. ಯೋಜನೆಯ ದುರುಪಯೋಗ ತಡೆದು, ಅರ್ಹರಷ್ಟೇ ಅದರ ಲಾಭ ಪಡೆಯುವಂತೆ ಮಾಡಲು ಈ ನಿಯಮ ಜಾರಿಗೆ ತರಲಾಗಿದೆ. 8ನೇ ವೇತನ ಆಯೋಗ:

ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವನ್ನು ಸೂಚಿಸಲಾಗಿರುವ 8ನೇ ವೇತನ ಆಯೋಗದ ಶಿಫಾರಸುಗಳು ಜ.1ರಿಂದ ಜಾರಿಗೆ ಬರಲಿವೆ. ಪಿಂಚಣಿದಾರರಿಗೆ ಸಿಗುವ ಪಿಂಜಣಿಯೂ ಹೆಚ್ಚಳವಾಗಲಿದೆ. 

 ಯುಪಿಐ:

ಹೆಚ್ಚುತ್ತಿರುವ ಸೈಬರ್‌ ವಂಚನೆ ಹಾಗೂ ಅಪರಾಧಗಳಿಗೆ ಕಡಿವಾಣ ಹಾಕಲು, ಡಿಜಿಟಲ್‌ ಪಾವತಿ ವ್ಯವಸ್ಥೆಯಾಗಿರುವ ಯುಪಿಐನಲ್ಲಿ ಕೆಲ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಇನ್ನುಮುಂದೆ ಮೊಬೈಲ್‌ ಸಿಮ್‌ ದೃಢೀಕರಣ ಕಡ್ಡಾಯವಾಗಲಿದೆ.  

ಸಿಮ್‌ ದೃಢೀಕರಣ:

ಯುಪಿಐಗೆ ಮಾತ್ರವಲ್ಲ, ಸಂವಹನ ಆ್ಯಪ್‌ಗಳಾದ ವಾಟ್ಸಪ್‌, ಟೆಲಿಗ್ರಾಂಗಳ ಬಳಕೆಗೂ ಸಿಮ್‌ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ, ಇವುಗಳಲ್ಲಾಗುವ ಅಕ್ರಮಗಳ ಪತ್ತೆ ಸುಲಭವಾಗಲಿದೆ.  

ಕ್ರೆಡಿಟ್ ಸ್ಕೋರ್ ನವೀಕರಣ:

ಇನ್ನುಮುಂದೆ ಕ್ರೆಡಿಟ್‌ ಬ್ಯೂರೋಗಳು ಸಾಪ್ತಾಹಿಕವಾಗಿ ಕ್ರೆಡಿಟ್‌ ಸ್ಕೋರ್‌ಗಳನ್ನು ನವೀಕರಿಸುತ್ತವೆ. ಈ ಮೊದಲು ಇದನ್ನು 15 ದಿನಗಳಿಗೊಮ್ಮೆ ಮಾಡಲಾಗುತ್ತಿತ್ತು. ಇದರಿಂದ ಸಾಲ ಮರುಪಾವತಿಯು ಕ್ರೆಡಿಟ್ ಸ್ಕೋರ್‌ಗೆ ಬೇಗ ಸೇರ್ಪಡೆಯಾಗಿ, ಸಾಲ ಪಡೆಯುವ ಅರ್ಹತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. 

ಇಂಧನ ಬೆಲೆ:

ಗೃಹಬಳಕೆ, ವಾಣಿಜ್ಯ, ವಾಯುಯಾನ ಟರ್ಬೈನ್ ಇಂಧನ(ಎಟಿಎಫ್‌) ಸೇರಿದಂತೆ ವಿವಿಧ ಇಂಧನಗಳ ಬೆಲೆಗಳಲ್ಲಿ ಭಾರೀ ವ್ಯತ್ಯಾಸವಾಗಲಿದೆ. ನಿಖರ ಬೆಲೆ ಬದಲಾವಣೆ ಘೋಷಣೆಯಾಗದಿದ್ದರೂ, ಇವುಗಳು ಇಳಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 

ಐಟಿಆರ್‌ ಫೈಲಿಂಗ್‌:

2026ರಿಂದ ಐಟಿಆರ್‌ ಫೈಲಿಂಗ್‌ ಪ್ರಕ್ರಿಯೆ ಸರಳವಾಗಿರಲಿದೆ. ಸಂಬಳ, ಬ್ಯಾಂಕ್ ಬಡ್ಡಿ, ಹೂಡಿಕೆ, ದೊಡ್ಡ ವೆಚ್ಚಗಳಂತಹ ಮಾಹಿತಿಗಳು ಮೊದಲೇ ಸ್ವಯಂಚಾಲಿತವಾಗಿ ಭರ್ತಿಯಾಗಿರುತ್ತವೆ. ಇದರಿಂದ ಪ್ರಕ್ರಿಯೆ ವೇಗವಾಗಿಯೂ ಆಗುತ್ತದೆ.

ಆಧಾರ್-ಪಾನ್‌ ಲಿಂಕ್‌ ಆಗಿಲ್ಲವೇ? ಇಂದೇ ಕೊನೆ ದಿನ, ಲಿಂಕ್‌ ಮಾಡಿ

ನವದೆಹಲಿ: ಪಾನ್‌ ಕಾರ್ಡ್‌ಗೆ ಆಧಾರ್ ಕಾರ್ಡ್‌ ಲಿಂಕ್‌ ಮಾಡಲು ಡಿ.31 ಕೊನೆಯ ದಿನಾಂಕವಾಗಿದೆ. ಆ ಬಳಿಕ ಲಿಂಕ್‌ ಆಗದ ಪಾನ್ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ.

2023ರ ಜೂ.30ಂದು ಆಧಾರ್‌ ಪಾನ್‌ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿತ್ತು. ಆ ಬಳಿಕ 1000 ರು. ದಂಡ ಪಾವತಿಸಿ ಲಿಂಕ್‌ ಮಾಡುವ ಅವಕಾಶವನ್ನು ಆದಾಯ ತೆರಿಗೆ ಇಲಾಖೆಯು ಕಲ್ಪಿಸಿತ್ತು. ಆದರೆ ಈಗ ಈ ಎಲ್ಲ ವಿಧಾನಗಳಿಗೂ ಕೊನೆಯ ದಿನಾಂಕ ಡಿ.31 ಆಗಿದೆ. ಹೀಗಾಗಿ ಇದಾದ ಬಳಿಕ ಲಿಂಕ್‌ ಆಗದ ಪಾನ್‌ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇನ್ನು ಮುಂದೆ ಜಿಮೇಲ್‌ ಐಡಿ ಬದಲಿಸಿದ್ರೂ ಡೇಟಾ ನಷ್ಟವಿಲ್ಲ
ಭಾರತ - ಪಾಕ್‌ ಯುದ್ಧ ನಿಲ್ಲಿಸಿದ್ದು ನಾನೇ: ಮತ್ತೆ ಟ್ರಂಪ್‌ ನುಡಿ