ನ.10ಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ಚಂದ್ರಚೂಡ್‌ ನಿವೃತ್ತಿ : ಸಂಜೀವ್ ಖನ್ನಾ ನೂತನ ಸಿಜೆಐ ಸಾಧ್ಯತೆ

KannadaprabhaNewsNetwork | Updated : Oct 04 2024, 03:55 AM IST

ಸಾರಾಂಶ

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ್‌ ನ.10 ರಂದು ಸೇವಾ ನಿವೃತ್ತಿ ಹೊಂದಲಿದ್ದು, ನ್ಯಾಯಮೂರ್ತಿ ಸಂಜೀವ್ ಖನ್ನಾ ಮುಂದಿನ ಸಿಜೆಐ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ.

ನವದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ್‌ ನ.10 ರಂದು ಸೇವಾ ನಿವೃತ್ತಿ ಹೊಂದಲಿದ್ದು, ನ್ಯಾಯಮೂರ್ತಿ ಸಂಜೀವ್ ಖನ್ನಾ ಮುಂದಿನ ಸಿಜೆಐ ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ.ಡಿ.ವೈ. ಚಂದ್ರಚೂಡ್‌, 2022ರಲ್ಲಿ ಸುಪ್ರೀಂ ಕೋರ್ಟ್‌ನ 50ನೇ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡಿದ್ದರು. ತಮ್ಮ 2 ವರ್ಷಗಳ ಅಧಿಕಾರವಧಿಯಲ್ಲಿ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗೆ ಕಾರಣರಾಗಿದ್ದರು. ಆಗಾಗ ವಕೀಲರ ನಡವಳಿಕೆಯನ್ನು ನಿಷ್ಠುರವಾಗಿ ಖಂಡಿಸುತ್ತಿದ್ದರು.

ಚಂದ್ರಚೂಡ್‌ ನಿವೃತ್ತಿಯ ಬಳಿಕ ನ್ಯಾ। ಸಂಜೀವ್‌ ಖನ್ನಾ ನೂತನ ಸಿಜೆಐ ಆಗಿ ಆಯ್ಕೆಗೊಳ್ಳುವ ಸಾಧ್ಯತೆಯಿದೆ. ಅವರನ್ನು 2019ರಲ್ಲಿ ಸುಪ್ರೀಂಕೋರ್ಟ್‌ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು.

ಸೆನ್ಸೆಕ್ಸ್‌ 1769 ಅಂಕ ಕುಸಿತ

 ಮುಂಬೈ  :  ಮಧ್ಯಪ್ರಾಚ್ಯದಲ್ಲಿ ಇರಾನ್‌, ಯೆಮೆನ್‌, ಲೆಬನಾನ್‌ ದೇಶಗಳು ಹಾಗೂ ಇಸ್ರೇಲ್‌ ನಡುವೆ ಉಂಟಾಗಿರುವ ತ್ವೇಷಮಯ ಪರಿಸ್ಥಿತಿ ಷೇರುಪೇಟೆಯ ಮೇಲೆ ಭಾರಿ ಪರಿಣಾಮ ಬೀರಿದ್ದು, ಗುರುವಾರ ಒಂದೇ ದಿನ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1769.19 ಅಂಕಗಳಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಎರಡೂ ಶೇ.2ರಷ್ಟು ಇಳಿಕೆ ಕಂಡಿವೆ. ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ 9.78 ಲಕ್ಷ ಕೋಟಿ ರು.ನಷ್ಟು ಕರಗಿದೆ.

ಒಂದು ಹಂತದಲ್ಲಿ 1832 ಅಂಕಗಳಷ್ಟು ಕುಸಿತ ಕಂಡಿದ್ದ ಸೆನ್ಸೆಕ್ಸ್‌ 82,434ಕ್ಕೆ ಜಾರಿತ್ತು. ಬಳಿಕ ತುಸು ಚೇತರಿಸಿಕೊಂಡು 1769 ಅಂಕಗಳ ಕುಸಿತದೊಂದಿಗೆ 82497ರಲ್ಲಿ ವಹಿವಾಟು ಮುಗಿಸಿತು. ನಿಫ್ಟಿ 546 ಅಂಕಗಳಷ್ಟು ಜಾರಿ 25250ರಲ್ಲಿ ಮುಕ್ತಾಯವಾಯಿತು.ವಿದೇಶಿ ಹೂಡಿಕೆ ನಿರಂತರವಾಗಿ ಹೊರಹೋಗುತ್ತಿರುವುದು ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ ಹೂಡಿಕೆದಾರರು ಮಾರುಕಟ್ಟೆಯಿಂದ ಹಣ ತೆಗೆಯುತ್ತಿದ್ದಾರೆ. ಇಸ್ರೇಲ್ ಮೇಲೆ ಇರಾನ್‌ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿದ್ದರಿಂದ ಇಸ್ರೇಲ್‌ ಕೂಡ ಪ್ರತಿದಾಳಿಗೆ ಇಳಿಯಬಹುದು, ಇದರಿಂದ ಯುದ್ಧ ಆರಂಭವಾಗಬಹುದು ಎಂಬ ಭೀತಿಯೇ ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಸೂಚ್ಯಂಕದಲ್ಲಿನ 30 ಷೇರುಗಳ ಪೈಕಿ ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಯ ಷೇರನ್ನು ಹೊರತುಪಡಿಸಿ ಉಳಿದೆಲ್ಲಾ ಕಂಪನಿಗಳ ಷೇರುಗಳು ಕುಸಿತ ಕಂಡಿವೆ.

ಇರಾನ್‌ ತೈಲ ಬಾವಿ ಮೇಲೆ ಇಸ್ರೇಲ್‌ ದಾಳಿ ತಡೆಗೆ ಬೈಡೆನ್‌ ಯತ್ನ

ವಾಷಿಂಗ್ಟನ್: ಇರಾನ್ ತೈಲ ಘಟಕಗಳ ಮೇಲೆ ಸಂಭವನೀಯ ಇಸ್ರೇಲಿ ದಾಳಿಗಳನ್ನು ತಡೆಯಲು ಚರ್ಚಿಸುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ತೆಹ್ರಾನ್‌ನ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇಸ್ರೇಲ್ ಯಾವುದೇ ಪ್ರತೀಕಾರವನ್ನು ಗುರುವಾರದ ಮೊದಲು ಪ್ರಾರಂಭಿಸದು ಎಂಬ ವಿಶ್ವಾಸವಿದೆ. ಈ ಬಗ್ಗೆ ಇಸ್ರೇಲ್‌ ಜತೆ ಮಾತನಾಡುವೆ ಎಂದಿದ್ದಾರೆ. ಇರಾನ್‌ ತೈಲಾಗಾರದ ಮೇಲೆ ಇಸ್ರೇಲ್‌ ದಾಳಿ ಮಾಡಲಿದೆ ಎಂಬ ವಿಷಯ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.

ಇಸ್ರೇಲ್‌ ದಾಳಿ ಎಫೆಕ್ಟ್‌: ಭಾರತ-ಪಶ್ಚಿಮ ವಿಮಾನ ದರ ದುಬಾರಿ

ನವದೆಹಲಿ: ಇಸ್ರೇಲ್‌-ಹಿಜ್ಬುಲ್ಲಾ ನಡುವಿನ ಸಮರದ ಪರಿಣಾಮ ಇಸ್ರೇಲ್‌, ಇರಾನ್‌, ಲೆಬನಾನ್‌, ಸಿರಿಯಾ ಮುಂತಾದ ದೇಶಗಳ ವಾಯುವಲಯವು ಅಪಾಯಕಾರಿಯಾಗಿ ಪರಿಣಮಿಸಿದೆ. ಸತತ ಕ್ಷಿಪಣಿ ದಾಳಿಗಳ ಕಾರಣ ಭಾರತದಿಂದ ಪಶ್ಚಿಮ ದೇಶಗಳಿಗೆ ತೆರಳುವ ವಿಮಾನಗಳು ಸುತ್ತಿ ಬಳಸಿ ಸಾಗುವ ಸ್ಥಿತಿ ಉಂಟಾಗಿದೆ. ಪಾಶ್ಚಾತ್ಯ ದೇಶಗಳಿಗೆ ಭಾರತದ ವಿಮಾನ ಟಿಕೆಟ್‌ ದರಗಳು ದುಬಾರಿಯಾಗಿವೆ ಎಂದು ಹೇಳಲಾಗುದೆ.

Share this article