ಮುಂದಿನ ಸಿಜೆಐ ಸ್ಥಾನಕ್ಕೆ ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ ಹೆಸರು ಸರ್ಕಾರಕ್ಕೆ ಶಿಫಾರಸು

KannadaprabhaNewsNetwork | Updated : Apr 17 2025, 06:25 AM IST

ಸಾರಾಂಶ

ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ (ಬಿ.ಆರ್.ಗವಾಯಿ) ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ನವದೆಹಲಿ: ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ (ಬಿ.ಆರ್.ಗವಾಯಿ) ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಹಾಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಮೇ 13ರಂದು ನಿವೃತ್ತರಾಗಲಿದ್ದು, ಈ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ತಮ್ಮ ಸ್ಥಾನಕ್ಕೆ ಅರ್ಹರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಇದನ್ನ ಅನುಮೋದಿಸಿದರೆ ಮೇ 14ರಂದು ನ್ಯಾ.ಬಿ.ಆರ್‌.ಗವಾಯಿ ಅವರು ದೇಶದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 2025ರ ನ.23ರವರೆಗೂ ಅವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್‌ ಮುಂದಿನ ವಾರ ಉಷಾ ಜೊತೆ ಭಾರತಕ್ಕೆ

ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಮತ್ತು ಅವರ ಪತ್ನಿ ಭಾರತ ಮೂಲದ ಉಷಾ ವ್ಯಾನ್ಸ್‌ ದಂಪತಿ ಏ.18ರಿಂದ 24ರವವರೆಗೆ ಇಟಲಿ ಮತ್ತು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಜೆ.ಡಿ. ವ್ಯಾನ್ಸ್‌ ದಂಪತಿ ಭಾರತ ಭೇಟಿ ವೇಳೆಯಲ್ಲಿ ನವದೆಹಲಿ, ಜೈಪುರ ಮತ್ತು ಆಗ್ರಾಗೆ ಭೇಟಿ ನೀಡಲಿದ್ದಾರೆ. ಇನ್ನು ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಅವರ ಕಚೇರಿ ಮಾಹಿತಿ ನೀಡಿದೆ. ವ್ಯಾನ್ಸ್‌ ತಮ್ಮ ಇಟಲಿ ಭೇಟಿ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ಅವರನ್ನು ಭೇಟಿ ಮಾಡಲಿದ್ದಾರೆ.

ಮುರ್ಷಿದಾಬಾದ್‌ ಗಲಭೆಗೆ ಬಿಎಸ್‌ಎಫ್‌, ಬಿಜೆಪಿಯ ಯೋಜಿತ ಸಂಚು: ದೀದಿ

ಕೋಲ್ಕತಾ: ‘ವಕ್ಫ್‌ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ನಡೆದ ಪ್ರತಿಭಟನೆ ಪೂರ್ವನಿಯೋಜಿತ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.ಮುಸ್ಲಿಂ ನಾಯಕರೊಂದಿಗಿನ ಸಭೆ ವೇಳೆ ಮಾತನಾಡಿದ ಮಮತಾ, ‘ಬಾಂಗ್ಲಾದೇಶ ಮೊದಲೇ ಉದ್ವಿಗ್ನವಾಗಿದೆ. ಜೊತೆಗೆ, ಅಲ್ಲಿನ ನುಸುಳುಕೋರರಿಗೆ ಭಾರತದೊಳಗೆ ಬರಲು ದಾರಿ ಸುಗಮಗೊಳಿಸುವ ಮೂಲಕ ಗಡಿ ಭದ್ರತಾ ಪಡೆ, ಕೇಂದ್ರ ಗೃಹ ಸಚಿವಾಲಯ ಮತ್ತು ಬಿಜೆಪಿ ಬಂಗಾಳದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ’ ಎಂದು ಹೇಳಿದ್ದಾರೆ. ಅಂತೆಯೇ, ‘ಕ್ರೂರ ವಕ್ಫ್‌ ಕಾಯ್ದೆಯನ್ನು ಜಾರಿಗೆ ತಂದರೆ ದೇಶ ಒಡೆದುಹೋದೀತು. ಅದನ್ನು ಜಾರಿ ಮಾಡಬೇಡಿ ಹಾಗೂ ರಾಜಕೀಯ ಅಜೆಂಡಾಗೋಸ್ಕರ ದೇಶಕ್ಕೆ ಹಾನಿ ಮಾಡುತ್ತಿರುವ ಅಮಿತ್‌ ಶಾರನ್ನು ತಡೆಯಿರಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಇದೇ ವೇಳೆ, ಮುರ್ಷಿದಾಬಾದ್‌ ಮತ್ತು ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದ ಉಗ್ರಪ್ರತಿಭಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ 10 ಲಕ್ಷ ರು. ಪರಿಹಾರ ಘೋಷಿಸಿದ್ದು, ಬಿಎಸ್‌ಎಫ್‌ನ ಕ್ರಮಗಳ ಬಗ್ಗೆ ತನಿಖೆ ನಡೆಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಬ್ಯಾಂಕಾಕ್‌ ಟ್ರಿಪ್‌ ಮರೆ ಮಾಡಲು ಪಾಸ್ಪೋರ್ಟ್‌ ಹರಿದವ ಮುಂಬೈನಲ್ಲಿ ಸೆರೆ

ಮುಂಬೈ: ತಾನು ಬ್ಯಾಂಕಾಕ್‌ಗೆ ಟ್ರಿಪ್‌ ಹೋಗಿದ್ದು ಮನೆಯವರಿಗೆ ಗೊತ್ತಾಗಬಾರದು ಎಂದು ಪಾಸ್ಪೋರ್ಟ್‌ನ ಹಾಳೆಗಳನ್ನು ಹರಿದುಹಾಕಿದ್ದ ವ್ಯಕ್ತಿಯನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ವಿಜಯ್‌ ಭಲೇರೋ (51), ಪುಣೆ ಮೂಲದವರಾಗಿದ್ದು, ಕಳೆದ ವರ್ಷ ಮನೆಯವರ ಕಣ್ಣುತಪ್ಪಿಸಿ 4 ಬಾರಿ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ಗೆ ತೆರಳಿದ್ದರು. ಇದಿಷ್ಟೇ ಅಲ್ಲದೇ ಇದೇ ತಿಂಗಳಲ್ಲಿ ಇಂಡೋನೇಷ್ಯಾಗೂ ಹೋಗಿ ಮೋಜು ಮಾಡಿ ಬಂದಿದ್ದರು. ಈ ವಿಷಯ ಮನೆಗೆ ಗೊತ್ತಾದರೆ ಎಲ್ಲಿ ಮನೆ ಬಾಗಿಲು ಬಂದ್ ಆಗುವುದೋ ಎಂಬ ದಿಗಿಲಿನಿಂದ ಪಾಸ್ಪೋರ್ಟ್‌ನ ಹಾಳೆಗಳನ್ನೇ ಹರಿದುಹಾಕಿದ್ದರು. ಬುಧವಾರ ಮತ್ತೆ ವಿದೇಶಯಾನ ಕೈಗೊಳ್ಳುವಾಗ ಮುಂಬೈ ಏರ್ಪೋರ್ಟ್‌ನಲ್ಲಿ ಪಾಸ್ಪೋರ್ಟ್‌ ಪರಿಶೀಲನೆ ವೇಳೆ ಅಧಿಕಾರಿಗಳು ವಿಜಯ್‌ ಅವರನ್ನು ಬಂಧಿಸಿದ್ದಾರೆ. ಪಾಸ್ಪೋರ್ಟ್‌ ನಿಯಮಗಳ ಅನ್ವಯ ಅದರ ಯಾವುದೇ ಹಾಳೆಯನ್ನು ಉದ್ದೇಶಪೂರ್ವಕವಾಗಿ ಹರಿದು ಹಾಕುವುಂತಿಲ್ಲ.

Share this article