;Resize=(412,232))
ನವದೆಹಲಿ : ಜಗತ್ತಿನಲ್ಲಿ ಹವಾಮಾನ ಬದಲಾವಣೆ ತಡೆದು ಸುಸ್ಥಿರತೆ ಕಾಪಾಡುತ್ತಿರುವವರ ಕುರಿತು ಅಮೆರಿಕದ ನಿಯತಕಾಲಿಕೆ ‘ಟೈಮ್’ ಸಿದ್ಧಪಡಿಸಿರುವ ‘ಟೈಮ್ 100 ಕ್ಲೈಮೆಟ್- 2025 ಮೋಸ್ಟ್ ಪವರ್‌ಫುಲ್ ಲೀಡರ್’ ಪಟ್ಟಿಯಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಸ್ಥಾನ ಪಡೆದಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ 5ನೇ ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರಹ್ಲಾದ ಜೋಶಿ, ಇದೀಗ ಈ ವರ್ಷದ ‘ಟೈಮ್ 100 ಕ್ಲೈಮೇಟ್’ ಪಟ್ಟಿಯಲ್ಲಿ ಪ್ರಭಾವಿ ನಾಯಕನ ಸ್ಥಾನ ಪಡೆದ ‘ಮೊದಲ ಭಾರತೀಯ ರಾಜಕಾರಣಿ’ ಎಂಬ ಹೊಸ ದಾಖಲೆ ಸಹ ಬರೆದು ವಿಶ್ವದಾದ್ಯಂತ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನ್ಯೂಯಾರ್ಕ್ ಗವರ್ನರ್ ಕ್ಯಾತಿ ಹೋಕುಲ್, ಬ್ರೆಜಿಲ್ ಅಧ್ಯಕ್ಷ ಲುಲ ಡ ಸಿಲ್ವಾ, ಸ್ಕಾಟ್ಲೆಂಡ್‌ನ ಇಂಧನ ಮತ್ತು ಹವಾಮಾನ ಸುಸ್ಥಿರತೆ ಖಾತೆಯ ಸಚಿವೆ ಗಿಲಿಯನ್ ಮಾರ್ಟಿನ್, ಗೂಗಲ್‌ನ ಮಾರುಕಟ್ಟೆ ಅಭಿವೃದ್ಧಿ, ಅತ್ಯಾಧುನಿಕ ಇಂಧನ ಕಾರ್ಯಕ್ಷಮತೆ ತಂಡದ ಮುಖ್ಯಸ್ಥ ಟೈಲರ್ ನಾರಿಸ್, ಜೆಪಿ ಮಾರ್ಗನ್‌ನ ಹವಾಮಾನ ಬದಲಾವಣೆಯ ಜಾಗತಿಕ ಮುಖ್ಯಸ್ಥೆ ಸಾರಾ ಕಾಪ್ನಿಕ್, ಸೀಮನ್ಸ್ ಇಂಧನ ಸುಸ್ಥಿರತೆಯ ಜಾಗತಿಕ ಮುಖ್ಯಸ್ಥೆ ಇವಾ ರೈಸನ್ ಹ್ಯೂಬರ್, ಸಿಂಗಾಪುರದ ವಾತಾವರಣ ಮತ್ತು ಇಂಧನ ಕಾರ್ಯಕ್ಷಮತೆ ಸಚಿವೆ ಗ್ರೇಸ್ ಫು ಹವಾಯಿ ಯೆನ್, ಪ್ರಹ್ಲಾದ್ ಜೋಶಿ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖರು.
ಪ್ರತಿಕೂಲ ಪರಿಸ್ಥಿತಿಯಲ್ಲಿ ಜಗತ್ತಿನ ಹವಾಮಾನ ಸುಸ್ಥಿರತೆಗಾಗಿ ಸಚಿವ ಪ್ರಹ್ಲಾದ ಜೋಶಿ ಅವರ ಸಾರಥ್ಯದಲ್ಲಿ ಸೌರಶಕ್ತಿ ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ಭಾರತ ದಿಟ್ಟ ಹೆಜ್ಜೆ ಇರಿಸಿದೆ. ಇದಕ್ಕಾಗಿ ನೂರಾರು ರಾಷ್ಟ್ರಗಳು ಭಾರತದೊಂದಿಗೆ ಕೈ ಜೋಡಿಸಿವೆ. ದೆಹಲಿಯ ಭಾರತ್ ಮಂಟಪದಲ್ಲಿ ಮೊನ್ನೆಯಷ್ಟೇ 125ಕ್ಕೂ ಹೆಚ್ಚು ರಾಷ್ಟ್ರಗಳನ್ನು ಒಟ್ಟುಗೂಡಿಸಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ 8ನೇ ಅಧಿವೇಶನವೇ ಇದಕ್ಕೆ ಸಾಕ್ಷಿ ಎಂದು ಬಣ್ಣಿಸಲಾಗಿದೆ.
ಯುರೋಪಿಯನ್ ಒಕ್ಕೂಟ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿ, ಸೌರಶಕ್ತಿ ಉತ್ಪಾದನೆಯಲ್ಲಿ ಭಾರತದ ತಾಂತ್ರಿಕತೆ, ತಂತ್ರಜ್ಞಾನ ಹಂಚಿಕೆಗೆ ಪ್ರಸ್ತಾಪ ಮಂಡಿಸಿದ್ದಾರೆ. ಭಾರತದ ಕೋಟ್ಯಂತರ ಮನೆಗಳಲ್ಲಿ ಸೌರ ಬೆಳಕು ಚೆಲ್ಲಿದ ‘ಸೂರ್ಯಘರ್ʼ ಮತ್ತು ರೈತ ಸಮುದಾಯವನ್ನು ಸಬಲೀಕರಣಗೊಳಿಸುತ್ತಿರುವ ‘ಪಿಎಂ ಕುಸುಮ್ʼ ಯೋಜನೆಯ ಯಶಸ್ಸು ಕಂಡು, ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮಲ್ಲೂ ಈ ಯೋಜನೆಗಳ ಅನುಷ್ಠಾನಕ್ಕೆ ಸಾಥ್ ನೀಡುವಂತೆ ಬೇಡಿಕೆ ಮುಂದಿಡುವಷ್ಟರ ಮಟ್ಟಿಗೆ ಜೋಶಿಯವರು ಕಾರ್ಯ ಸಾಧನೆ ತೋರಿದ್ದಾರೆ ಎಂದು ವಿವರಿಸಲಾಗಿದೆ.
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಮೆರಿಕವನ್ನೇ ಹಿಂದಿಕ್ಕಿ, ಭಾರತವನ್ನು ಜಗತ್ತಿನ 2ನೇ ಅತಿ ದೊಡ್ಡ ಸೋಲಾರ್ ಮಾರುಕಟ್ಟೆಯಾಗಿ ನಿರ್ಮಿಸಿದ್ದು ಪ್ರಹ್ಲಾದ್ ಜೋಶಿಯವರ ಕಾರ್ಯಕ್ಷಮತೆ ಮತ್ತು ದೂರದೃಷ್ಟಿ ನಾಯಕತ್ವಕ್ಕೆ ನಿದರ್ಶನ ಎಂದು ಟೈಮ್ ಶ್ಲಾಘಿಸಿದೆ.
ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಹಸಿರು ಇಂಧನ ಪರಿವರ್ತನೆಯಲ್ಲಿ ಭಾರತದ ಅದ್ವಿತೀಯ ಸಾಧನೆಯ ಹಿಂದೆ ಸಚಿವ ಪ್ರಹ್ಲಾದ ಜೋಶಿಯವರ ಕಾರ್ಯಸಾಧನೆ ಅತಿ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ‘ಟೈಮ್ 100 ಕ್ಲೈಮೇಟ್’ ಸುಸ್ಥಿರತೆಯಲ್ಲಿ ವಿಶ್ವದ ಹೆಸರಾಂತ ದಿಗ್ಗಜರ ಪಟ್ಟಿಯಲ್ಲಿ ಪ್ರಹ್ಲಾದ ಜೋಶಿಯವರ ಹೆಸರು ಮೇಲು ಸ್ತರದಲ್ಲಿ ರಾರಾಜಿಸುತ್ತಿದೆ ಎಂದು ಹೇಳಿದೆ.
- ಜಗತ್ತಿನ ಹವಾಮಾನ ಬದಲಾವಣೆ ತಡೆದು ಸುಸ್ಥಿರತೆಗೆ ಯತ್ನಿಸುತ್ತಿರುವವರ 100 ಮಂದಿಯ ಪಟ್ಟಿ
- ಅಮೆರಿಕದ ಪ್ರಸಿದ್ಧ ನಿಯತಕಾಲಿಕೆ ‘ಟೈಮ್’ನಿಂದ ಕ್ಲೈಮೆಟ್- 100 ಎಂಬ ಪ್ರಭಾವಿಗಳ ಪಟ್ಟಿ ರೆಡಿ
- ವಿಶ್ವದ ವಿವಿಧ ನಾಯಕರು, ಕಂಪನಿಗಳ ಮುಖ್ಯಸ್ಥರ ಜತೆಗೆ ಸಚಿವ ಪ್ರಹ್ಲಾದ್ ಜೋಶಿ ಅವರಿಗೂ ಸ್ಥಾನ
- ಹವಾಮಾನ ಬದಲಾವಣೆ ತಡೆ ಕುರಿತ ಟೈಮ್ 100 ಪಟ್ಟಿಯಲ್ಲಿ ಸ್ಥಾನ ಪಡೆದ ದೇಶದ ಮೊದಲ ನಾಯಕ