ಕನ್ನಡಪ್ರಭ ವಾರ್ತೆ ಬೆಂಗಳೂರು
ಕನಿಷ್ಠ 14 ಕ್ಷೇತ್ರಗಳಲ್ಲಿ ಗೆಲುವು ನಿರೀಕ್ಷಿಸಿದ್ದ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನ ಮೆಚ್ಚಿದ್ದರೆ ಈ ಸಂಖ್ಯೆ 20 ಮುಟ್ಟಬಹುದು ಎಂದು ಭಾವಿಸಿದ್ದ ಕಾಂಗ್ರೆಸ್ಸಿಗರಿಗೆ 9 ಕ್ಷೇತ್ರಗಳಲ್ಲಿ ಗೆದ್ದಿರುವುದು ಸಮಾಧಾನ ತಂದಿಲ್ಲ. ಅದರಲ್ಲೂ ಮಹಿಳೆಯರಿಗೆ ನೇರವಾಗಿ ಮುಟ್ಟುವಂತಹ ಭಾಗ್ಯಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳಿಂದಾಗಿ ಈ ಚುನಾವಣೆಯಲ್ಲಿ ಪುರುಷರಲ್ಲದಿದ್ದರೂ ಮಹಿಳೆಯರು ಪಕ್ಷದ ಪರ ನಿಲ್ಲುತ್ತಾರೆ ಎಂದು ಬಲವಾಗಿ ಕಾಂಗ್ರೆಸ್ ನಂಬಿತ್ತು.
ಆದರೆ, ಫಲಿತಾಂಶ ಈ ನಂಬಿಕೆಗೆ ಪೂರಕವಾಗಿಲ್ಲ. ಮಹಿಳೆಯರು ಸಹ ಕಾಂಗ್ರೆಸ್ ಕೈಹಿಡಿದಿಲ್ಲ ಎಂಬ ಭಾವನೆ ಕಾಂಗ್ರೆಸ್ ಪಕ್ಷದಲ್ಲಿ ಬಲವಾಗಿ ಮೂಡಿದೆ. ಇದಕ್ಕೆ ನಿರೀಕ್ಷಿಸಿದಷ್ಟು ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗದೇ ಇರುವುದು ಮಾತ್ರ ಕಾರಣವಲ್ಲ. ಬೆಂಗಳೂರು ದಕ್ಷಿಣ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಉತ್ತರ ಕನ್ನಡ, ದಕ್ಷಿಣ ಕನ್ನಡ, ತುಮಕೂರು, ಮೈಸೂರು, ಚಿಕ್ಕಬಳ್ಳಾಪುರದಂತಹ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಮೀರಿದ ಅಂತರದಲ್ಲಿ ಕಾಂಗ್ರೆಸ್ ಸೋಲುಂಡಿರುವುದನ್ನು ಕಾಂಗ್ರೆಸ್ ನಾಯಕರಿಗೆ ನಂಬಲಾಗುತ್ತಿಲ್ಲ.ಗ್ಯಾರಂಟಿ ಯೋಜನೆಗಳಿಂದಾಗಿ ದೊಡ್ಡ ಸಂಖ್ಯೆಯ ಗೆಲುವು ದೊರೆಯದಿದ್ದರೂ ಬಹುತೇಕ ಕ್ಷೇತ್ರಗಳಲ್ಲಿ ನೇರಾನೇರ ಫೈಟ್ ಇರುತ್ತದೆ. ಯಾರೇ ಗೆದ್ದರೂ ಹತ್ತರಿಂದ ಇಪ್ಪತ್ತು ಸಾವಿರ ಅಂತರದಲ್ಲಿ ಮಾತ್ರ ಎಂದು ಭಾವಿಸಿದ್ದ ಕ್ಷೇತ್ರಗಳಲ್ಲೂ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಾಗಿದೆ. ಉತ್ತರ ಕನ್ನಡ ಹಾಗೂ ಮಂಡ್ಯದಂತಹ ಕ್ಷೇತ್ರಗಳಲ್ಲಿ ಸುಮಾರು ಮೂರು ಲಕ್ಷದಷ್ಟು ಮತಗಳ ಅಂತರದಿಂದ ಸೋಲು ಉಂಟಾಗಿದೆ.
ಇಷ್ಟಾಗಿಯೂ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ ಎಂದರೆ ಗ್ಯಾರಂಟಿ ಯೋಜನೆಗಳು ಜನರ ಮನಸ್ಸು ಗೆದ್ದಿಲ್ಲ. ಹೀಗಾಗಿ ಈ ಯೋಜನೆಗಳ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು ಎಂಬುದು ಶಾಸಕರ ಒತ್ತಡ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮವೇನಾಗಿದೆ ಎಂಬ ಬಗ್ಗೆ ಜೂನ್ ಎರಡು ಅಥವಾ ಮೂರನೇ ವಾರದಲ್ಲಿ ರಾಜ್ಯ ನಾಯಕತ್ವ ಸಭೆಯೊಂದನ್ನು ಆಯೋಜಿಸಲಿದೆ ಎಂದು ಮೂಲಗಳು ಹೇಳಿವೆ.
ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ: ಸಿಎಂಗ್ಯಾರಂಟಿ ಯೋಜನೆಗಳಿಗೆ ಜನರ ಮನ್ನಣೆ ದೊರಕಿಲ್ಲ ಎಂಬ ಕಾರಣ ನೀಡಿ ಕಾಂಗ್ರೆಸ್‌ನ ಕೆಲ ನಾಯಕರು ಅನೌಪಚಾರಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಈ ವೇಳೆ ಗ್ಯಾರಂಟಿ ಯೋಜನೆ ಬಗ್ಗೆ ಪುನರ್ ಪರಿಶೀಲನೆ ನಡೆಯಬೇಕು ಎಂಬ ಅಭಿಪ್ರಾಯವನ್ನು ಬಹುತೇಕ ಶಾಸಕರು ಹೊಂದಿದ್ದಾರೆ ಎಂದು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪದೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲಾಗದು ಎಂದು ಈ ನಾಯಕರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.