ನವದೆಹಲಿ: ಲೋಕಸಭಾ ಟಿಕೆಟ್ ನಿರಾಕರಣೆ ಆಗುತ್ತಿದ್ದಂತೆಯೇ ಬಿಜೆಪಿಯಲ್ಲಿ ರಾಜಕೀಯ ನಿವೃತ್ತಿ ಪರ್ವ ಮುಂದುವರಿದಿದೆ. ದಿಲ್ಲಿಯ ಚಾಂದನಿ ಚೌಕ್ ಕ್ಷೇತ್ರದ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ಭಾನುವಾರ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಶನಿವಾರವಷ್ಟೇ ಬಿಜೆಪಿ ಸಂಸದರಾದ ಜಯಂತ ಸಿನ್ಹಾ ಹಾಗೂ ಕ್ರಿಕೆಟಿಗ ಗೌತಮ್ ಗಂಭೀರ್ ರಾಜಕೀಯ ನಿವೃತ್ತಿ ಪ್ರಕಟಿಸಿದ್ದರು. ಅದರ ಬೆನ್ನಲ್ಲೇ ಹರ್ಷವರ್ಧನ್ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘30 ವರ್ಷ ಕಾಲ ವೈಭವಯುತ ರಾಜಕೀಯ ಜೀವನ ಕಂಡೆ. 5 ವಿಧಾನಸಭೆ, 2 ಲೋಕಸಭೆ ಚುನಾವಣೆ ಕಂಡೆ. ಇನ್ನು ಮುಂದೆ ನನ್ನನ್ನು ನಾನು ತಂಬಾಕು ವಿರೋಧಿ ಹೋರಾಟದಲ್ಲಿ ತೊಡಗಿಸಿಕೊಳ್ಳುವೆ’ ಎಂದಿದ್ದಾರೆ.
ಡಾ. ಹರ್ಷ ಪ್ರತಿನಿಧಿಸುತ್ತಿದ್ದ ಚಾಂದನಿ ಚೌಕ್ ಟಿಕೆಟ್ ಪ್ರವೀಣ್ ಖಂಡೇಲ್‌ವಾಲ್ ಪಾಲಾಗಿದೆ.