ಜಿರಳೆ ಪಾರ್‍ಟಿ ಹೋರಾಟಕ್ಕೆ ಉಗ್ರ ಪನ್ನೂನ್‌ ಬೆಂಬಲ!

Published : Jul 24, 2026, 06:36 AM IST
Extremist Gurpatwant singh Pannun support to Cockroach Party protest Also announces Rs 95 lakh donaion

ಸಾರಾಂಶ

‘ಸಿಖ್‌ ಫಾರ್‌ ಜಸ್ಟಿಸ್‌’ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್‌ ಸಿಂಗ್‌ ಪನ್ನೂನ್ ಇದೀಗ, ದೆಹಲಿಯಲ್ಲಿ ನೀಟ್‌ ಅಕ್ರಮದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ)ಯ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾನೆ.

ನವದೆಹಲಿ: ಭಾರತ ವಿರೋಧಿ ದುಷ್ಕೃತ್ಯಗಳಿಗೆ ಸದಾ ಬೆಂಬಲ ನೀಡುವ ನಿಷೇಧಿತ ‘ಸಿಖ್‌ ಫಾರ್‌ ಜಸ್ಟಿಸ್‌’ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್‌ ಸಿಂಗ್‌ ಪನ್ನೂನ್ ಇದೀಗ, ದೆಹಲಿಯಲ್ಲಿ ನೀಟ್‌ ಅಕ್ರಮದ ವಿರುದ್ಧ ಹೋರಾಟ ನಡೆಸುತ್ತಿರುವ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ)ಯ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾನೆ. ಅಲ್ಲದೆ ತನ್ನ ಮೂರು ಷರತ್ತು ಈಡೇರಿಸಿದರೆ ಸಿಜೆಪಿಗೆ 1 ದಶಲಕ್ಷ ಡಾಲರ್ (₹95 ಲಕ್ಷ ) ನೆರವಿನ ಘೋಷಣೆಯನ್ನೂ ಮಾಡಿದ್ದಾನೆ.

ಸಿಜೆಪಿ ಹೋರಾಟ ದಿಕ್ಕು ತಪ್ಪುತ್ತಿರುವ ಬಗ್ಗೆ ಕಳವಳದ ಬೆನ್ನಲ್ಲೇ ಪನ್ನೂನ್ ನೀಡಿರುವ ಹೇಳಿಕೆ, ದೆಹಲಿ ಹೋರಾಟದೊಳಗೆ ದೇಶ ವಿರೋಧಿ ಶಕ್ತಿಗಳು ನುಸುಳಿರುವ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಪನ್ನೂನ್‌ ವಿಡಿಯೋ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ನಿಶಿಕಾಂತ್‌ ದುಬೆ, ‘ಹೋರಾಟಕ್ಕೆ ಹಣ ಎಲ್ಲಿಂದ ಬರುತ್ತಿದೆ? ಇದರ ಹಿಂದೆ ಯಾವ ಸಂಚಿದೆ? ತಮ್ಮ ಇತ್ತೀಚಿನ ವಿದೇಶಿ ಭೇಟಿ ವೇಳೆ ರಾಹುಲ್‌ ಗಾಂಧಿ ಯಾರ್‍ಯಾರನ್ನು ಭೇಟಿ ಮಾಡಿದ್ದರು? ಇದರ ಹಿಂದಿನ ನಿಜವಾದ ಶಕ್ತಿ ಯಾರು?’ ಎಂದು ಪ್ರಶ್ನಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?:

ಪನ್ನೂನ್ ಬಿಡುಗಡೆ ಮಾಡಿರುವ ಎರಡೂವರೆ ನಿಮಿಷಗಳ ವಿಡಿಯೋದಲ್ಲಿ, ‘ನಾನು ಸಿಜೆಪಿ ನಾಯಕರ ಜೊತೆ ಝೂಮ್‌ ಮೀಟಿಂಗ್‌ ನಡೆಸಿದ್ದು, ಅವರಿಗೆ 1 ದಶಲಕ್ಷ ಡಾಲರ್‌ ನೆರವು ಘೋಷಿಸಿದ್ದೇನೆ. ಆದರೆ ಇದಕ್ಕಾಗಿ ನಾನು ಅವರಿಗೆ ಮೂರು ಷರತ್ತು ಹಾಕಿದ್ದೇನೆ. ಮೊದಲನೆಯದ್ದು, ಯಾವುದೇ ಕಾರಣಕ್ಕೂ ನೀವು ಮೋದಿ ಸರ್ಕಾರದ ಜೊತೆ ಸಂಧಾನ ಮಾಡಿಕೊಳ್ಳಬಾರದು; ಎರಡನೆಯದ್ದು ಆ.15ರವರೆಗೂ ಹೋರಾಟ ಮುಂದುವರೆಸಬೇಕು; ಮೂರನೆಯದ್ದು ಸಿಜೆಪಿ ಕಾರ್ಯಕರ್ತರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂಬುದಾಗಿದೆ’ ಎಂದು ಹೇಳಿದ್ದಾನೆ.

ಜೊತೆಗೆ ‘ಸಿಜೆಪಿ ಕಾರ್ಯಕರ್ತರು ಮೋದಿ ಪದಚ್ಯುತಿ ಮತ್ತು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಬಗ್ಗೆ ಜನಮತಗಣನೆಗೆ ಕರೆ ಕೊಡಬೇಕು’ ಎಂದು ಸಲಹೆ ನೀಡಿದ್ದಾನೆ.

ಜೊತೆಗೆ ಮುಂದಿನ ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ನಾವು ಅಡ್ಡಿ ಮಾಡಲಿದ್ದೇವೆ ಮತ್ತು ಭಾರತದ ಪ್ರಧಾನಿ ಮೋದಿ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸುವುದನ್ನು ತಡೆಯಲಿದ್ದೇವೆ ಎಂದು ಬೆದರಿಕೆ ಹಾಕಿದ್ದಾನೆ.

ಯಾರು ಈ ಪನ್ನು?

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯ ಮುಖ್ಯಸ್ಥ ಈ ಗುರುಪತ್ವಂತ್‌ ಸಿಂಗ್‌ ಪನ್ನೂನ್‌. ಭಾರತದಲ್ಲಿ ಜನಿಸಿ, ಸದ್ಯ ಅಮೆರಿಕದಲ್ಲಿರುವ ಈತ, ಖಲಿಸ್ತಾನವೆಂಬ ಪ್ರತ್ಯೇಕ ರಾಷ್ಟ್ರ ಸ್ಥಾಪನೆಯ ಗುರಿ ಹೊಂದಿದ್ದು, ಆಗಾಗ ವಿಡಿಯೋಗಳ ಮೂಲಕ ಭಾರತದ ನಾಯಕರಿಗೆ ಬೆದರಿಕೆ ಒಡ್ಡುತ್ತಿರುತ್ತಾನೆ. ಪ್ರತ್ಯೇಕತಾವಾದ ಹರಡುವುದು, ಹಿಂಸೆಗೆ ಕರೆ ನೀಡುವುದು ಸೇರಿದಂತೆ ಹಲವಾರು ಆರೋಪಗಳನ್ನು ಹೊತ್ತಿರುವ ಈತನನ್ನು 2020ರಲ್ಲಿ ಭಾರತ ಸರ್ಕಾರ ಉಗ್ರ ಎಂದು ಘೋಷಿಸಿದೆ.

ಜೊತೆಗೆ, ‘ದೆಹಲಿ ಮತ್ತು ಮೋದಿ ಸರ್ಕಾರದ ಪತನವನ್ನು ಯಾರೂ ತಡೆಯಲಾಗದು. ಭಾರತವನ್ನು ವಿಭಜಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಮೋದಿ ಪತನ ನಮಗೆ ಖಾಯಂ ಪರಿಹಾರವಲ್ಲ, ಬದಲಾಗಿ ನಿಜವಾದ ಪರಿಹಾರವೆಂದರೆ ಭಾರತದ ವಿಭಜನೆ ಮತ್ತು ಭಾರತವನ್ನು ಬಾಲ್ಕಾನಿಸ್ತಾನವನ್ನಾಗಿ ಪರಿವರ್ತಿಸುವುದು. ಈ ನಿಟ್ಟಿನಲ್ಲಿ ಆ.16ರಂದು ಖಲಿಸ್ತಾನಿ ಜನಮತಗಣನೆ ನಡೆಸಲಿದ್ದೇವೆ. ಈ ಮೂಲಕ ಪಂಜಾಬ್‌ ಅನ್ನು ಭಾರತದಿಂದ ಪ್ರತ್ಯೇಕಗೊಳಿಸಲಿದ್ದೇವೆ’ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾನೆ.

ಸಚಿವ ಪ್ರಧಾನ್‌ ಬದಲು ಕೇಂದ್ರ ಶಿಕ್ಷಣ ಇಲಾಖೆ ಕಾರ್‍ಯದರ್ಶಿ ತಲೆದಂಡ

ನವದೆಹಲಿ: ನೀಟ್‌ ಪರೀಕ್ಷಾ ಅಕ್ರಮ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ವಿದ್ಯಾರ್ಥಿಗಳು ಪ್ರತಿಭಟನೆ ತೀವ್ರಗೊಳಿಸಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಕೆಲ ಅಧಿಕಾರಿಗಳ ತಲೆದಂಡ ಪಡೆದಿದೆ. ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿನೀಶ್‌ ಜೋಷಿ ಅವರನ್ನು ಬದಲಿಸಿ ಅವರ ಸ್ಥಾನಕ್ಕೆ ನರೇಶ್‌ ಕುಮಾರ್‌ ಗಂಗ್ವಾರ್‌ ಅವರನ್ನು ನೇಮಿಸಲಾಗಿದೆ. ಜೊತೆಗೆ ಇಲಾಖೆಗೆ ಹಲವು ಹೊಸ ಅಧಿಕಾರಿಗಳ ನೇಮಕ ಮಾಡಲಾಗಿದೆ.

ದೇಶಾದ್ಯಂತ ಇಂದು ‘ಜಿರಳೆ’ ಪ್ರತಿಭಟನೆ

ನವದೆಹಲಿ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಆನ್‌ಲೈನ್‌ ಅಭಿಯಾನದ ಮೂಲಕ ತನ್ನ ಹೋರಾಟ ಆರಂಭಿಸಿದ್ದ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ), ಇದೀಗ ತನ್ನ ಹೋರಾಟವನ್ನು ದೇಶವ್ಯಾಪಿ ವಿಸ್ತರಿಸುವ ಘೋಷಣೆ ಮಾಡಿದೆ. ಇದರ ಭಾಗವಾಗಿ ಜು.24ರ ಶುಕ್ರವಾರ ದೇಶವ್ಯಾಪಿ ಶಾಂತಿಯುತ ಹೋರಾಟಕ್ಕೆ ಪಕ್ಷ ಕರೆ ನೀಡಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಜೆಪಿ, ‘ಎಲ್ಲಾ ಜಿಲ್ಲೆಗಳಲ್ಲಿ ಒಂದು ಬೇಡಿಕೆಯೊಂದಿಗೆ ಒಂದು ದಿನ ಶಾಂತಿಯುತ ಪ್ರತಿಭಟನೆ ನಡೆಸಿ. ಪೊಲೀಸರ ಕ್ರೌರ್ಯದ ಸಂತ್ರಸ್ತರೊಂದಿಗೆ ಒಟ್ಟಾಗಿ ನಿಲ್ಲೋಣ. ಪ್ರತಿಭಟನೆ ನಡೆಸಲು ಅನುಮತಿ ಪಡೆಯಲು ಮತ್ತು ವ್ಯವಸ್ಥೆ ಮಾಡಿಕೊಳ್ಳಲು ವಿದ್ಯಾರ್ಥಿ ಸಂಘಟನೆಗಳು ಹಾಗೂ ಇತರೆ ಸಂಘಟನೆಗಳು ಒಂದಾಗಬೇಕು. ನೆರೆದವರೆದುರು ನಮ್ಮ ಬೇಡಿಕೆಗಳನ್ನು ಓದಬೇಕು’ ಎಂದು ಹೇಳಲಾಗಿದೆ.

ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೀಡಿದ್ದ ಹೇಳಿಕೆ ವಿರೋಧಿ ಅಭಿಜಿತ್‌ ಧೀಪ್ಕೆ ಆನ್‌ಲೈನ್‌ನಲ್ಲಿ ಅಭಿಯಾನ ಆರಂಭಿಸಿದ್ದರು. ಅದಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಅವರು ದೆಹಲಿಯ ಜಂತರ್‌ಮಂತರ್‌ನಲ್ಲಿ ಜೂ.20ರಿಂದ ನೀಟ್‌ ಅಕ್ರಮ ವಿರುದ್ಧ ಹೋರಾಟ ಆರಂಭಿಸಿದ್ದರು. ತದನಂತರದಲ್ಲಿ ಕಳೆದ ಸೋಮವಾರ ಸಂಸತ್ ಚಲೋಗೆ ಕರೆ ನೀಡಿದ್ದರು. ಇದೀಗ ದೇಶವ್ಯಾಪಿ ಹೋರಾಟಕ್ಕೆ ಸಂಘಟನೆ ಕರೆ ನೀಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಾಂಗ್ಚುಕ್‌ ಉಪವಾಸ ಮುಕ್ತಾಯ - ನಿನ್ನೆ ತಡರಾತ್ರಿ ಕೇಂದ್ರದ ಮನವೊಲಿಕೆ ಯಶಸ್ವಿ
ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಇಂದು ಕೇಂದ್ರದ ಬ್ರಹ್ಮಾಸ್ತ್ರ!