ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆಯಲ್ಲಿ ವೈಮಾನಿಕ ಇಂಧನ ದರ ಗಗನಕ್ಕೇರಿರುವುದು ಹಾಗೂ ವಾಯುಪ್ರದೇಶ ನಿರ್ಬಂಧ ಹೇರಿಕೆಗಳಿಂದಾಗಿ ಏರ್ ಇಂಡಿಯಾ ವಿಮಾನವು ನಿತ್ಯ 100 ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಕಡಿತ ಮಾಡಲು ನಿರ್ಧರಿಸಿದೆ.
ತೈಲ ದರ ಏರಿಕೆ: ಏರ್ ಇಂಡಿಯಾ ನಿತ್ಯ 100 ಸಂಚಾರ ಕಟ್
ಡಿಜಿಸಿಎ ಆದೇಶ: ಇಂಡಿಗೋ 200 ವಿಮಾನ ಸಂಚಾರ ಕಡಿತ
ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆಯಲ್ಲಿ ವೈಮಾನಿಕ ಇಂಧನ ದರ ಗಗನಕ್ಕೇರಿರುವುದು ಹಾಗೂ ವಾಯುಪ್ರದೇಶ ನಿರ್ಬಂಧ ಹೇರಿಕೆಗಳಿಂದಾಗಿ ಏರ್ ಇಂಡಿಯಾ ವಿಮಾನವು ನಿತ್ಯ 100 ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಕಡಿತ ಮಾಡಲು ನಿರ್ಧರಿಸಿದೆ. ಜೂನ್ ಮತ್ತು ಜುಲೈ ನಡುವೆ ವಿಮಾನ ಸೇವೆ ಕಡಿತಕ್ಕೆ ತೀರ್ಮಾನಿಸಿದ್ದಾಗಿ ಸಂಸ್ಥೆಯ ಸಿಇಒ ಕಾಂಪ್‌ಬೆಲ್ ವಿಲ್ಸನ್ ಅವರು ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ತೈಲ ದರ ಏರಿಕೆ ಹಾಗೂ ವಾಯು ನಿರ್ಬಂಧಗಳಿಂದಾಗಿ ಹಲವು ಮಾರ್ಗಗಳಲ್ಲಿ ವಿಮಾನ ಸಂಚಾರ ಲಾಭದಾಯಕವಾಗಿ ಉಳಿದಿಲ್ಲ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾಗಿ ತಿಳಿದುಬಂದಿದೆ.ವಿಮಾನ ಇಂಧನದ ದರ ಗಗಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಭಾರತೀಯ ಏರ್‌ಲೈನ್ ಉದ್ಯಮ(ಫೆಡರೇಷನ್ ಆಫ್ ಇಂಡಿಯನ್ ಏರ್‌ಲೈನ್ಸ್) ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಆಗ್ರಹಿಸಿತ್ತು. ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರವನ್ನೂ ಬರೆದಿತ್ತು. ಇದರ ಬೆನ್ನಲ್ಲೇ ಏರ್ ಇಂಡಿಯಾ ಈ ನಿರ್ಧಾರಕ್ಕೆ ಮುಂದಾಗಿದೆ.ಸಾಮಾನ್ಯವಾಗಿ ವಿಮಾನಯಾನ ವೆಚ್ಚದ ಶೇ.30-40ರಷ್ಟು ಇಂಧನಕ್ಕೇ ಹೋಗುತ್ತದೆ. ಇಂಧನ ದರ ಈಗ ಶೇ.55ರಿಂದ ಶೇ.60ರಷ್ಟು ಏರಿಕೆಯಾಗಿದ್ದು, ಇದರ ಜತೆಗೆ ಸಂಘರ್ಷದಿಂದಾಗಿ ಹಲವು ದೇಶಗಳಲ್ಲಿ ವಾಯುಸೀಮೆ ನಿರ್ಬಂಧ ಹಿನ್ನೆಲೆಯಲ್ಲಿ ವಿಮಾನಗಳು ಸುತ್ತಿ ಬಳಸಿ ಪ್ರಯಾಣಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.ಇಂಡಿಗೋ:ಈ ನಡುವೆ ಕಳೆದ ಬಾರಿ ಇಂಡಿಗೋ ವಿಮಾನ ಸಂಸ್ಥೆಯ 2000 ವಿಮಾನ ಹಾರಾಟ ರದ್ದತಿ ಗದ್ದಲದಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಇದೀಗ ಇಂಡಿಗೋ ವಿಮಾನಗಳ ಕಾರ್ಯಾಚರಣೆಯನ್ನು ಶೇ.10ರಷ್ಟು ಕಡಿತಗೊಳಿಸುವಂತೆ ನಿರ್ದೇಶನ ನೀಡಿದೆ. ಸದ್ಯ ಇಂಡಿಗೋ ಸಂಸ್ಥೆ ನಿತ್ಯ 2,200 ವಿಮಾನ ಸಂಚಾರ ನಡೆಸುತ್ತಿದೆ. ಇದರ ಶೇ.10 ಅಂದರೂ ನಿತ್ಯ ಸುಮಾರು 200 ಫೈಟ್ ಕಡಿತ ಮಾಡುವ ಅನಿವಾರ್ಯತೆಗೆ ಇಂಡಿಗೋ ಸಿಲುಕಲಿದೆ. ಈ ಮೂಲಕ ವಿಮಾನ ಕಾರ್ಯಾಚರಣೆ ಸ್ಥಿರಗೊಳಿಸುವುದು ಹಾಗೂ ವಿಮಾನಗಳ ಹಾರಾಟ ರದ್ದತಿ ಕಡಿಮೆ ಮಾಡುವ ಉದ್ದೇಶ ಸರ್ಕಾರಕ್ಕಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.