ಶಿಮ್ಲಾ: ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ರೋಗಿಯೊಬ್ಬನ ಮೇಲೆ ವೈದ್ಯನೊಬ್ಬ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ. ಎಂಡೋಸ್ಕೋಪ್ ಪರೀಕ್ಷೆಗೆ ಬಂದಿದ್ದ ರೋಗಿ ಹಾಸಿಗೆ ಮಲಗಿದ್ದ ವೇಳೆ ಯಾವುದೋ ವಿಷಯದಕ್ಕೆ ರೋಗಿ ಮತ್ತು ವೈದ್ಯರ ನಡುವೆ ಜಗಳವಾಗಿದೆ. ಈ ವೇಳೆ ಮಲಗಿದ್ದ ರೋಗಿಯ ಮೇಲೆ ವೈದ್ಯ ಮತ್ತು ಆತನ ಜೊತೆಗಿದ್ದ ಇನ್ನಿಬ್ಬರು ವ್ಯಕ್ತಿಗಳು ಮನಸೋಇಚ್ಚೆ ಥಳಿಸಿದ್ದಾರೆ. ಈ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿದೆ. ಈ ಕುರಿತ ವಿಡಿಯೋ ವೈರಲ್ ಆದ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿದೆ.
ನವದೆಹಲಿ: ವಾಯುಮಾಲಿನ್ಯ ತಡೆಯುವ ಕ್ರಮದ ಭಾಗವಾಗಿ ದೆಹಲಿ ಸರ್ಕಾರ ಎಲೆಕ್ಟ್ರಿಕಲ್ ವಾಹನ ಖರೀದಿಗೆ ಸಬ್ಸಿಡಿ ನೀಡುವ ನೀತಿಗೆ ಜಾರಿಗೆ ಮುಂದಾಗಿದೆ. ಇದರ ಪ್ರಕಾರ ದ್ವಿಚಕ್ರ ವಾಹನಕ್ಕೆ 35- 40000 ಸಬ್ಸಿಡಿ ಸಿಗಲಿದೆ. ಜ.1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ದ್ವಿಚಕ್ರ ವಾಹನ ಜೊತೆಗೆ ವಾಣಿಜ್ಯ ಬಳಕೆಗೆ ಬಳಸುವ ತ್ರಿಚಕ್ರ ವಾಹನಗಳು, ಕಾರುಗಳನ್ನು ಖರೀದಿಸುವವರು ಪೆಟ್ರೋಲ್, ಡಿಸೇಲ್ ವಾಹನದ ಬದಲು ಎಲೆಕ್ಟ್ರಿಕಲ್ ಖರೀದಿಸಿದರೆ 20 ಲಕ್ಷ ರು. ತನಕದ ವಾಹನಕ್ಕೆ ಸರ್ಕಾರ ಹೆಚ್ಚುವರಿಯಾಗಿ ಸಬ್ಸಿಡಿ ನೀಡಲಿದೆ. ಈ ನಡುವೆ ಸೋಮವಾರವೂ ದಿಲ್ಲಿಯ ಬಹುತೇಕ ಕಡೆ ಮಾಲಿನ್ಯದ ಮಟ್ಟ 418 ದಾಖಲಾಗಿತ್ತು. ಮತ್ತೊಂದೆಡೆ ಪರಿಸರ ಮಾಲಿನ್ಯತೆ ಉಂಟು ಮಾಡುತ್ತದೆ ಎನ್ನುವ ಕಾರಣಕ್ಕೆ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ 411 ಕೈಗಾರಿಕಾ ಘಟಕಗಳನ್ನು ಮುಚ್ಚಲು ಆದೇಶಿಸಿದೆ.
ನವದೆಹಲಿ: ಕಳೆದ 5 ವರ್ಷಗಳಲ್ಲಿ ದೇಶದಲ್ಲಿ 8 ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 2400 ವಿಮಾನಗಳಲ್ಲಿ ತಾಂತ್ರಿಕ ದೋಷದ ಸಮಸ್ಯೆ ಉಂಟಾಗಿದೆ. ಈ ಪೈಕಿ 2025ರಲ್ಲೇ ಅತಿ ಕಡಿಮೆ ಘಟನೆ ವರದಿಯಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ಕಳೆದ ವಾರ ಸಚಿವಾಲಯ ಲೋಕಸಭೆಗೆ ಸಲ್ಲಿಸಿರುವ ಅಂಕಿಅಂಶಗಳ ಪ್ರಕಾರ, 2022ರಲ್ಲಿ ಅತ್ಯಧಿಕ 524 ಪ್ರಕರಣಗಳು ದಾಖಲಾಗಿದೆ. ಆ ಬಳಿಕ ನಿಧಾನಕ್ಕೆ ಕುಸಿತ ಕಂಡಿದೆ. 2025ರಲ್ಲಿ ಅತಿ ಕನಿಷ್ಠ ಪ್ರಕರಣಗಳು ವರದಿಯಾಗಿದ್ದು, ನವೆಂಬರ್ ತನಕದ ಅಂಕಿ ಅಂಶದಲ್ಲಿ 382 ಘಟನೆಗಳು ನಡೆದಿದೆ.
ಒಡಿಶಾದಲ್ಲಿ ₹7 ಕೋಟಿಯ 51 ಥಾರ್ ಮಾಪಾರ್ಡಿಗೆ ಸರ್ಕಾರ 5 ಕೋಟಿ ಖರ್ಚು
ಭುವನೇಶ್ವರ: ಒಡಿಶಾದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗಾಗಿ ಖರೀದಿಸಿರುವ ಮಹೀಂದ್ರ ಥಾರ್ ಖರೀದಿಯಲ್ಲಿ ಅಕ್ರಮದ ಶಂಕೆ ವ್ಯಕ್ತವಾಗಿದೆ. 7.1 ಕೋಟಿ ರು. ಕೊಟ್ಟು ಖರೀದಿಸಿರುವ ಮಹೀಂದ್ರಾ ಥಾರ್‌ಗಳನ್ನು ಅವಶ್ಯಕತೆ ತಕ್ಕಂತೆ ಮಾರ್ಪಾಡಿಗೆ 5 ಕೋಟಿ ಖರ್ಚು ಮಾಡಿದ್ದಾರೆ. ಅಕ್ರಮ ಶಂಕೆ ಹಿನ್ನೆಲೆ ಸರ್ಕಾರ ತನಿಖೆಗೆ ಸೂಚಿಸಿದೆ.ಕಳೆದ ನವೆಂಬರ್‌ನಲ್ಲಿ ಈ ವ್ಯವಹಾರ ನಡೆದಿದೆ ಎನ್ನಲಾಗಿದೆ. 51 ಥಾರ್ ವಾಹನಗಳ ಮಾರ್ಪಾಡಿಗೆ ಪ್ರತಿ ಕಾರಿಗೆ 21 ಹೊಸ ಉಪಕರಣ ಬಳಸಿ ಮಾರ್ಪಾಡು ಮಾಡಲಾಗಿತ್ತು. ಹೀಗಾಗಿ ಒಡಿಶಾ ಅರಣ್ಯ ಸಚಿವ ಗಣೇಶ್ ರಾಮ್ ಸಿಂಗ್ಖುಂಟಿಯಾ ವಿಶೇಷ ಲೆಕ್ಕ ಪರಿಶೋಧನೆ ನಡೆಸುವಂತೆ ಸೂಚಿಸಿದ್ದಾರೆ. 51 ಥಾರ್‌ಗಳ ಕಸ್ಟಮೈಸೇಷನ್‌ಗೆ ಖರ್ಚು ಮಾಡಿರುವ 5 ಕೋಟಿ ನಿಯಮದಂತೆ ನಡೆದಿದೆಯೇ?, ಹಣಕಾಸು ಇಲಾಖೆ ಒಪ್ಪಿಗೆ ಪಡೆಯಲಾಗಿದೆಯೇ, ಮಾರ್ಪಾಡುಗಳ ಅಗತ್ಯವಿತ್ತೋ ಎಂಬುದರ ಬಗ್ಗೆ ಪರಿಶೀಲನೆ ನಡೆಯಲಿದೆ.
ಹೊಸ ವರ್ಷದ ರಜೇಲಿ ಅತ್ಯಧಿಕ ಭಾರತೀಯರು ಥಾಯ್ಲೆಂಡ್‌ಗೆ ಪ್ರವಾಸ
ನವದೆಹಲಿ: ಹೊಸ ವರ್ಷದ ರಜೆಯನ್ನು ಕಳೆಯಲು ಸಾಮಾನ್ಯವಾಗಿ ಯುಎಇಯನ್ನು ಆರಿಸುತ್ತಿದ್ದ ಭಾರತೀಯರು ಈ ಬಾರಿ ಥಾಯ್ಲೆಂಡ್‌ಗೆ ಹಾರಲು ಮುಂದಾಗಿದ್ದಾರೆ. ಈ ಬಗ್ಗೆ ಆನ್‌ಲೈನ್ ಪ್ರಯಾಣ ಏಜೆನ್ಸಿಯಾಗಿರುವ ಮೇಕ್‌ಮೈಟ್ರಿಪ್, ಡಿ.20ರಿಂದ 2026ರ ಜ.5ರ ವರೆಗಿನ ಬುಕಿಂಗ್ ಆಧರಿಸಿ ಮಾಹಿತಿ ನೀಡಿದೆ.ಅದರ ಪ್ರಕಾರ, ಅತಿಹೆಚ್ಚು ಮಂದಿ ನೆಚ್ಚಿಕೊಂಡಿರುವ ದೇಶಗಳಲ್ಲಿ ಥಾಯ್ಲೆಂಡ್ ಮೊದಲ ಸ್ಥಾನ ಪಡೆದರೆ, ನಂತರದಲ್ಲಿ ಯುಎಇ, ಶ್ರೀಲಂಕಾ, ವಿಯೆಟ್ನಾಂ, ಮಲೇಷಿಯಾ ಇವೆ. ಕಳೆದ ವರ್ಷ ವಿಯೆಟ್ನಾಂ 7ನೇ ಸ್ಥಾನದಲ್ಲಿತ್ತು. ಅಂತೆಯೇ, ಜನರು ಒಂದು ರಾತ್ರಿ ವಾಸಕ್ಕೆ 2,500–5,000 ರು. ಇರುವ ಹೊಟೆಲ್‌ಗಳ ಬದಲಿಗೆ ಕೊಂಚ ಐಷಾರಾಮಿ 5,000–7,500 ರು. ಇರುವ ಸ್ಥಳಗಳನ್ನು ಹೆಚ್ಚು ಆಯ್ಕೆ ಮಾಡಿದ್ದಾರೆಂದೂ ತಿಳಿದುಬಂದಿದೆ.