ನವದೆಹಲಿ: ಮನರೇಗಾ ಯೋಜನೆಯನ್ನು ಬದಲಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ ರಾಮ್ ಜಿ ಯೋಜನೆಯ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಈ ಕಾನೂನನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದು, 2026ರ ಜ.16ರಂದು ದೇಶಾದ್ಯಂತ ‘ಪ್ರತಿರೋಧ ದಿನ’ವನ್ನಾಗಿ ಆಚರಿಸಿ ಪ್ರತಿಭಟನೆ ಮಾಡಲು ಕಾರ್ಮಿಕರು ಮತ್ತು ರೈತರಿಗೆ ಕರೆ ನೀಡಿದೆ. ಜಿ ರಾಮ್ ಜಿ ಜೊತೆಗೆ ಹೊಸ ಕಾರ್ಮಿಕ ಕಾಯ್ದೆಗಳು, ಬೀಜ ಮಸೂದೆ-2025, ವಿದ್ಯುತ್ ಮಸೂದೆ-2025 ಇತ್ಯಾದಿಗಳ ರದ್ದತಿಗೂ ಆಗ್ರಹಿಸಿದೆ.
2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಯ ವಿರುದ್ಧ ಎಸ್‌ಕೆಎಂ ನಡೆಸಿದ್ದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿತ್ತು. ಆ ಬಳಿಕ ಸರ್ಕಾರ ಕಾಯ್ದೆಯನ್ನು ಹಿಂಪಡೆದಿತ್ತು.
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿದ ಅರ್ಜಿಗೆ ಕುರಿತು ಪ್ರತಿಕ್ರಿಯಿಸುವಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರಿಗೆ ದೆಹಲಿ ಹೈಕೋರ್ಟ್ ಸೋಮವಾರ ಸೂಚಿಸಿದೆ.
ಗಾಂಧಿ ಕುಟುಂಬ ಹಾಗೂ ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ ಆರೋಪಪಟ್ಟಿ ಸಲ್ಲಿಸಿತ್ತು. ಈ ಆರೋಪಪಟ್ಟಿಯನ್ನು ದೆಹಲಿ ವಿಚಾರಣಾ ನ್ಯಾಯಾಲಯ ಡಿ.16ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಇ.ಡಿ. ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಗೆ ಪ್ರತಿಕ್ರಿಯಿಸುವಂತೆ ನ್ಯಾ. ರವೀಂದರ್ ದುಡೇಜಾ ಅವರು ಗಾಂಧಿ ಕುಟುಂಬ ಹಾಗೂ ಇತರರಿಗೆ ನೋಟಿಸ್ ನೀಡಿದ್ದು, 2026ರ ಮಾ.12ಕ್ಕೆ ವಿಚಾರಣೆ ಮುಂದೂಡಿದ್ದಾರೆ.