ಗಡುವಿನೊಳಗೆ ಇರಾನ್ ಒಪ್ಪಂದ ಮಾಡಿಕೊಳ್ಳದಿದ್ರೆ ಆ ದೇಶದ ನಾಗರಿಕತೆಯನ್ನೇ ನಾಶ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ ಬೆನ್ನಲ್ಲೇ, ಮಾತುಕತೆಯ ಬಾಗಿಲನ್ನು ಟೆಹ್ರಾನ್ ಸಂಪೂರ್ಣವಾಗಿ ಮುಚ್ಚಿದೆ ಎಂದು ಇರಾನಿ ಮಾಧ್ಯಮ ವರದಿ ಮಾಡಿದೆ.
- ಯಾವುದೇ ಪ್ರತ್ಯಕ್ಷ, ಪರೋಕ್ಷ ಸಂವಹನ ಮಾಡಲ್ಲ
- ಇರಾನ್ ಮಾಧ್ಯಮ ಟೆಹ್ರಾನ್ ಟೈಮ್ಸ್ ವರದಿವಾಷಿಂಗ್ಟನ್: ಗಡುವಿನೊಳಗೆ ಇರಾನ್ ಒಪ್ಪಂದ ಮಾಡಿಕೊಳ್ಳದಿದ್ರೆ ಆ ದೇಶದ ನಾಗರಿಕತೆಯನ್ನೇ ನಾಶ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ ಬೆನ್ನಲ್ಲೇ, ಮಾತುಕತೆಯ ಬಾಗಿಲನ್ನು ಟೆಹ್ರಾನ್ ಸಂಪೂರ್ಣವಾಗಿ ಮುಚ್ಚಿದೆ ಎಂದು ಇರಾನಿ ಮಾಧ್ಯಮ ವರದಿ ಮಾಡಿದೆ.‘ಅಮೆರಿಕ ಜೊತೆಗಿನ ಎಲ್ಲಾ ರಾಜತಾಂತ್ರಿಕ ಮತ್ತು ಪರೋಕ್ಷ ಸಂವಹನ ಮಾರ್ಗಗಳನ್ನು ಇರಾನ್ ಸ್ಥಗಿತಗೊಳಿಸಿದೆ. ಎಲ್ಲಾ ಸಂದೇಶ ವಿನಿಮಯಗಳನ್ನು ಸಹ ಸ್ಥಗಿತಗೊಳಿಸಲಾಗಿದೆ " ಎಂದು ಎಂದು ಇರಾನ್ ಮಾಧ್ಯಮ ಸಂಸ್ಥೆ ಟೆಹ್ರಾನ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ.
ಇದಲ್ಲದೆ, ‘ಇರಾನ್ ಅಧಿಕಾರಿಗಳು ಕೇವಲ ಕದನ ವಿರಾಮದ ಬದಲು ಯುದ್ಧಕ್ಕೆ ಸಂಪೂರ್ಣ ಅಂತ್ಯವನ್ನು ಬಯಸುತ್ತಿದ್ದಾರೆ’ ಎಂದು ಮಾಧ್ಯಮ ವರದಿ ಹೇಳಿದೆ.
‘ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಅಮೆರಿಕ ಕಾಲಮಾನ ಮಂಗಳವಾರ ರಾತ್ರಿ 8ರ ನಂತರ (ಭಾರತ ಕಾಲಮಾನ ಬುಧವಾರ ಬೆಳಗ್ಗೆ 5.30ಕ್ಕೆ) ಇರಾನ್ ಅನ್ನು ಸರ್ವನಾಶ ಮಾಡುತ್ತೇನೆ ಎಂದು ಟ್ರಂಪ್ ಗುಡುಗಿದ್ದರು.
==
ಹೋರ್ಮುಜ್‌ನಿಂದ ಇರಾನ್‌ಗೆ ಮಾಸಿಕ ₹42,000 ಕೋಟಿ ಆದಾಯ!
-ಪ್ರತಿ ಹಡಗಿಗೆ ₹18 ಕೋಟಿ ಶುಲ್ಕ । ನಿತ್ಯ 100-135 ಹಡಗುಗಳ ಸಂಚಾರ
-ಬೃಹತ್ ಆದಾಯದ ಆಸೆಯಿಂದ ಹೋರ್ಮುಜ್ ನಿರ್ಬಂಧ ತೆರವಿಗೆ ನಕಾರ
ಟೆಹ್ರಾನ್: ಹೋರ್ಮುಜ್ ಜಲಸಂಧಿ ಮೇಲಿನ ನಿಯಂತ್ರಣಕ್ಕಾಗಿ ಇರಾನ್ ಹಾಗೂ ಅಮೆರಿಕದ ನಡುವೆ ಸಮರ ತೀವ್ರಗತಿಯಲ್ಲಿ ಮುಂದುವರಿದಿದೆ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಲಸಂಧಿಯನ್ನು ಮುಕ್ತಗೊಳಿಸುವಂತೆ ಇರಾನ್‌ಗೆ ಬೆದರಿಕೆ ಒಡ್ಡುತ್ತಿದ್ದರೆ, ಇರಾನ್ ಮಾತ್ರ ಯಾವ ಬೆದರಿಕೆಗೂ ಜಗ್ಗದೆ ನಿರ್ಬಂಧವನ್ನು ಮುಂದುವರಿಸಿದೆ. ಹೋರ್ಮುಜ್‌ನಿಂದ ಇರಾನ್‌ಗೆ ಮಾಸಿಕ 42,000 ಕೋಟಿ ರು.ಗಳಷ್ಟು ಬೃಹತ್ ಮೊತ್ತದ ಲಾಭವಾಗಲಿರುವುದರಿಂದಲೇ ಅದು ಯಾರ ಒತ್ತಡಕ್ಕೂ ಮಣಿಯದೆ ನಿಯಂತ್ರಣವನ್ನು ಮುಂದುವರಿಸಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಯುದ್ಧಪೂರ್ವದಲ್ಲಿ ಹೋರ್ಮುಜ್ ಮೂಲಕ ಪ್ರತಿನಿತ್ಯ 2-2.5 ಕೋಟಿ ಬ್ಯಾರೆಲ್ ಕಚ್ಚಾತೈಲವನ್ನು ಹೊತ್ತ 100-135 ಹಡಗುಗಳು ಸಂಚರಿಸುತ್ತಿದ್ದವು. ಇವು ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ ಹಾಗೂ ಏಷ್ಯಾದ ಇತರ ದೇಶಗಳಿಗೆ ಪೂರೈಕೆಯಾಗುತ್ತಿದ್ದವು. ಯುದ್ಧ ಆರಂಭವಾದ ಬಳಿಕ ಈ ಮಾರ್ಗದ ಮೇಲೆ ಇರಾನ್ ನಿರ್ಬಂಧ ವಿಧಿಸಿತು. ಇದೀಗ ಪ್ರತಿ ಹಡಗಿಗೆ 18 ಕೋಟಿ ರು.ಗಳಷ್ಟು ಶುಲ್ಕ ವಿಧಿಸುತ್ತಿದೆ ಎನ್ನಲಾಗುತ್ತಿದೆ. ಇದರಿಂದ ತಿಂಗಳಿಗೆ ಸುಮಾರು 42,000 ಕೋಟಿ ರು.ಗಳಷ್ಟು ಆದಾಯ ಹರಿದುಬರಲಿದೆ. ಇದು ಇರಾನ್‌ನ ಆರ್ಥಿಕತೆಗೆ ಬಹುದೊಡ್ಡ ಶಕ್ತಿ ತುಂಬಲಿದೆ ಎಂದು ವಿಶ್ಲೇಷಿಸಲಾಗಿದೆ.
==
ಎಚ್ಚರದಿಂದ ಇರಿ: ಇರಾನ್ ಭಾರತೀಯರಿಗೆ ದೂತಾವಾಸ ಸೂಚನೆ
ಟೆಹ್ರಾನ್: ಯುದ್ಧ ಸಂಭವ ಹಿನ್ನೆಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರಿಗೆ ಮುಂದಿನ 48 ಗಂಟೆಗಳ ಕಾಲ ‘ನೀವು ಇರುವ ಸ್ಥಳದಲ್ಲೇ ಇರಿ’ ಎಂದು ಸಲಹೆ ನೀಡಿದೆ. ‘ಜನರು ಮನೆಯೊಳಗೆ ಇರಬೇಕು ಮತ್ತು ವಿದ್ಯುತ್ ಮತ್ತು ಮಿಲಿಟರಿ ಘಟಕಗಳ ಸನಿಹ ಹೋಗಬಾರದು. ಬಹುಮಹಡಿ ಕಟ್ಟಡಗಳಲ್ಲಿ ಇರುವವರರು ಮೇಲಿನ ಮಹಡಿಯಲ್ಲಿರದೇ ಸ್ಥಳಾಂತರಗೊಳ್ಳಬೇಕು’ ಎಂದು ಸೂಚಿಸಿದೆ.
==
ಹೋರ್ಮುಜ್ ತೆರೆವ ಗೊತ್ತುವಳಿಗೆ ರಷ್ಯಾ, ಚೀನಾ ವಿಟೋ
ವಿಶ್ವಸಂಸ್ಥೆ: ಹೋರ್ಮುಜ್ ಜಲಸಂಧಿಯನ್ನು ತೆರೆಯಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಂಡನೆಯಾಗಿದ್ದ ಗೊತ್ತುವಳಿಗೆ ತಮ್ಮ ವಿಶೇಷ ವಿಟೋ ಅಧಿಕಾರದ ಬಳಕೆ ಮಾಡಿ ರಷ್ಯಾ ಹಾಗೂ ಚೀನಾ ತಡೆಯೊಡ್ಡಿವೆ. ಈ ಎರಡೂ ದೇಶಗಳು ಇರಾನ್ ಪರ ಹಾಗೂ ಅಮೆರಿಕ ವಿರೋಧಿಯಾಗಿವೆ ಎಂಬುದು ಇಲ್ಲಿ ಗಮನಾರ್ಹ. ಹೋರ್ಮುಜ್ ಜಲಸಂಧಿಯನ್ನು ಬುಧವಾರ ನಸುಕಿನೊಳಗೆ ತೆರೆಯದಿದ್ದರೆ ಇರಾನ್ ಅನ್ನು ಸರ್ವನಾಶ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.