ಅಕ್ರಮ ಗಣಿ ತಡೆದ ಮಹಿಳಾ ಅಧಿಕಾರಿಗೆ ಅಶ್ಲೀಲ ನಿಂದನೆ

KannadaprabhaNewsNetwork | Published : Feb 12, 2025 12:33 AM

ಸಾರಾಂಶ

ಅಕ್ರಮ ಮರಳು ಗಣಿಗಾರಿಕೆ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ವೇಳೆ ಜಿಲ್ಲೆ ಶಾಸಕರೊಬ್ಬರ ಪುತ್ರ ಮೊಬೈಲ್ ಮೂಲಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ವಿರುದ್ಧ ಅಶ್ಲೀಲ ಪದ ಬಳಸಿ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಭದ್ರಾವತಿ

ಅಕ್ರಮ ಮರಳು ಗಣಿಗಾರಿಕೆ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ವೇಳೆ ಜಿಲ್ಲೆ ಶಾಸಕರೊಬ್ಬರ ಪುತ್ರ ಮೊಬೈಲ್ ಮೂಲಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ವಿರುದ್ಧ ಅಶ್ಲೀಲ ಪದ ಬಳಸಿ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಶಿ‍ವಮೊಗ್ಗ ಎಸ್ಪಿಗೆ ಪತ್ರ ಬರೆದು ಪ್ರಕರಣ ಸಂಬಂಧ ಸಂಪೂರ್ಣ ವರದಿ ನೀಡಲು ತಿಳಿಸಿದ್ದಾರೆ. ಜೊತೆಗೆ ಶಾಸಕ ಸಂಗಮೇಶ್ವರ್‌ ರಾಜಿನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ.

ಮಹಿಳಾ ಅಧಿಕಾರಿಗೆ ಫೋನ್‌ ಮೂಲಕ ಅವಾಚ್ಯವಾಗಿ ಬಾಯಿಗೆ ಬಂದಂತೆ ಬೈದಿರುವುದು ಶಿವಮೊಗ್ಗ ಜಿಲ್ಲೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಎಂದು ಆರೋಪಿಸಿರುವ ಬಿಜೆಪಿಗರು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಏನಿದು ಪ್ರಕರಣಃ ಭದ್ರಾವತಿಯಲ್ಲಿನ ಭದ್ರಾ ನದಿತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಭಾನುವಾರ ಮಧ್ಯರಾತ್ರಿ ದಾಳಿ ಮಾಡಿದ್ದರು. ಈ ವೇಳೆ ಮಹಿಳಾ ಅಧಿಕಾರಿ ವಿರುದ್ಧ ಮೊಬೈಲ್‌ನಲ್ಲಿ ವ್ಯಕ್ತಿಯೊಬ್ಬರು ಅಶ್ಲೀಲ ಪದ ಬಳಸಿ ಹರಿಹಾಯ್ದಿದ್ದರು. ಕೆಆರ್‌ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಸೋಮವಾರ ಪೋಸ್ಟ್ ಮಾಡಿ ಪೊಲೀಸರು ಶಾಸಕರ ಪುತ್ರನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಮಹಿಳಾ ಅಧಿಕಾರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈ ವೀಡಿಯೋ ವೈರಲ್‌ ಆಗಿ ಶಾಸಕರ ಪುತ್ರನ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು.

ಅಧಿಕಾರಿಯಿಂದ ಪೊಲೀಸರಿಗೆ ದೂರು

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಅವರು ಘಟನೆ ಸಂಬಂಧ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆದರೆ ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದೇನೆ. ಅಕ್ರಮ ಗಣಿಗಾರಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ವಿವರಗಳನ್ನು ನಮೂದಿಸಿದ್ದೇನೆ. ಅದರ ಪ್ರಕಾರ ಪೊಲೀಸರು ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಾರೆ. ನನಗೆ ಫೋನಿನಲ್ಲಿ ಬೈದ ವಿವರಗಳನ್ನು ಅಕ್ರಮ ಗಣಿಗಾರಿಕೆ ವಿವರಗಳನ್ನು ದೂರಿನಲ್ಲಿ ನಮೂದು ಮಾಡಿದ್ದೇನೆ. ನಾನು ನೀಡಿದ ಮಾಹಿತಿ ಎಲ್ಲವೂ ಎಫ್ಐಆರ್‌ನಲ್ಲಿ ದಾಖಲಾಗಿದೆ ಎಂದು ಜ್ಯೋತಿ ತಿಳಿಸಿದ್ದಾರೆ.

ದಾಳಿ ವೇಳೆ ನನ್ನ ಜೊತೆ ಮತ್ತೊಬ್ಬ ಗಣಿ ಅಧಿಕಾರಿ ಪ್ರಿಯ ಕೂಡ ಇದ್ದರು. ಅಕ್ರಮ ಮರಳು ಗಣಿಗಾರಿಕೆ ಸ್ಥಳದಲ್ಲಿ ಆರು ಏಳು ಜನರಿದ್ದರು. ಒಬ್ಬ ವ್ಯಕ್ತಿ ಮೊಬೈಲ್ ಕರೆ ಮಾಡಿ ನನಗೆ ತಂದುಕೊಟ್ಟ. ಆ ಕಡೆಯಿಂದ ಒಬ್ಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಂತರ ನಮ್ಮ ವಾಹನದ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಅಲ್ಲಿನ ಪರಿಸ್ಥಿತಿ ಸರಿ ಇರದ ಕಾರಣ ದಾಳಿ ಮುಂದುವರಿಸದೆ ವಾಪಸ್ ಬಂದೆವು ಅವರು ತಿಳಿಸಿದ್ದಾರೆ. ಎಂಟು ಜನರ ವಿರುದ್ಧ ಎಫ್ಐಆರ್‌ - 3 ಬಂಧನ

ಘಟನೆ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ನೀಡಿದ ಆಧಾರದ ಮೇಲೆ ಎಂಟು ಜನರ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಭದ್ರಾವತಿ ಹಳೇ ನಗರ ಪೊಲೀಸರು ಕಾರ್ಯಾಚರಣ ನಡೆಸಿ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ನಿವಾಸಿ ರವಿ (38) ಬಿನ್ ಮಲ್ಲೇಶಪ್ಪ, ಹಾಸನ ಜಿಲ್ಲೆ ಅರಕಲಗೋಡಿನ ನಿವಾಸಿ ವರಣ್ (34) ಬಿನ್ ರಾಜಶೇಖರ್, ಸುರೇಂದ್ರ ಗೌಡ ಕ್ಯಾಂಪ್‌ನ ಅಜಯ್ ಬಿನ್ ತಿಪ್ಪೇಶ್ (28) ಎಂಬುವರನ್ನು ಬಂಧಿಸಿದ್ದಾರೆ.

----------------ಬಿಜೆಪಿ ಪ್ರತಿಭಟನೆ

ಘಟನೆ ಸಂಬಂಧ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಕಾರ್ಯಕರ್ತರು ಶಾಸಕ ಬಿ.ಕೆ.ಸಂಗಮೇಶ್ವರ್‌ ತಕ್ಷಣ ತಮ್ಮ ಸ್ಥಾನ ರಾಜೀನಾಮೆ ನೀಡಬೇಕು. ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಹೀನಾಯವಾಗಿ ನಿಂದಿಸಿರುವ ಪುತ್ರ ಬಸವೇಶ್‌ನನ್ನು ಪೊಲೀಸರು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು.

ಭದ್ರಾವತಿ ಶಾಸಕರ ಮಗನ ವರ್ತನೆ ಹದ್ದು ಮೀರಿದ್ದು, ಮಹಿಳಾ ಅಧಿಕಾರಿಗೆ ಅಪಮಾನವಾಗಿದೆ. ಕೂಡಲೇ ಪೊಲೀಸರು ಶಾಸಕರ ಪುತ್ರ ಹಾಗೂ ಮರಳು ದಂಧೆಕೋರರನ್ನು ಬಂಧಿಸಬೇಕು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದ್ದಾರೆ.

-------------

11ಬಿಡಿವಿಟಿ1

ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾರ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Share this article