ಪ್ಯಾರಿಸ್: ‘ಕೃತಕ ಬುದ್ಧಿಮತ್ತೆ ಕ್ಷೇತ್ರವು ಏಕಸ್ವಾಮ್ಯತೆಯಿಂದ ಹೊರಬಂದು ಎಲ್ಲರಿಗೂ ಮುಕ್ತವಾದ ಜಾಗತಿಕ ಚೌಕಟ್ಟನ್ನು ಸ್ಥಾಪಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಕ್ಷಿಣ ದೇಶಗಳಿಗೆ ಮಾನ್ಯತೆ ಅಗತ್ಯ:‘ನಾವೀನ್ಯತೆ ಹಾಗೂ ಆಡಳಿತದ ಬಗ್ಗೆ ಆಳವಾಗಿ ಯೋಚಿಸಿ ಚರ್ಚಿಸಬೇಕು. ಕಂಪ್ಯೂಟರ್, ಶಕ್ತಿ, ಕೌಶಲ್ಯ, ಡೇಟಾ, ಆರ್ಥಿಕ ಸಂಪನ್ಮೂಲಗಳ ವಿಷಯದಲ್ಲಿ ಹಿಂದಿರುವ ದಕ್ಷಿಣದ ದೇಶಗಳಿಗೂ ಮುಕ್ತ ಅವಕಾಶ ನೀಡಬೇಕು’ ಎಂದು ಮೋದಿ ಆಗ್ರಹಿಸಿದರು.
ಭಾರತದ ಸಾಧನೆ:ಎಐ ಕ್ಷೇತ್ರದಲ್ಲಿ ಭಾರತದ ಸಾಧನೆ ಬಗ್ಗೆ ವರ್ಣಿಸಿದ ಮೋದಿ, ‘ನಮ್ಮ ದೇಶ ಕಡಿಮೆ ವೆಚ್ಚದಲ್ಲಿ 1.4 ಶತಕೋಟಿ ಜನರಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ನಮ್ಮಲ್ಲಿ ಎಐ ಕೌಶಲ್ಯವಿರುವವರು ಅಪಾರ ಸಂಖ್ಯೆಯಲ್ಲಿದ್ದಾರೆ. ಭಾರತವೂ ತನ್ನ ಸ್ವಂತ ಎಐ ಮಾದರಿ ಅಭಿವೃದ್ಧಿಪಡಿಸುತ್ತಿದೆ ಹಾಗೂ ಎಐ ಅಳವಡಿಕೆ, ಡೇಟಾ ಸುರಕ್ಷತೆಗೆ ಸಂಬಂಧಿಸಿದಂತೆ ತಾಂತ್ರಿಕ-ಕಾನೂನು ಪರಿಹಾರಗಳಲ್ಲಿ ಮುಂಚೂಣಿಯಲ್ಲಿದೆ’ ಎಂದರು.
ಎಐನಿಂದ ಕೆಲಸಕ್ಕೆ ಕುತ್ತಿಲ್ಲ, ಕೆಲಸದ ಸ್ವರೂಪ ಬದಲು: ಮೋದಿ ಭರವಸೆ
ಫ್ರಾನ್ಸ್ ಪ್ರವಾಸದ ವೇಳೆ ಪ್ಯಾರಿಸ್‌ನಲ್ಲಿ ಆಯೋಜನೆಗೊಂಡಿದ್ದ ಕೃತಕ ಬುದ್ಧಿಮತ್ತೆ ವ್ಯವಸ್ಥೆ ಕುರಿತ ಜಾಗತಿಕ ಸಮ್ಮೇಳನದಲ್ಲಿ ‘ಮಾನವರು ಮಾಡುವ ಕೆಲಸಗಳನ್ನು ಎಐ ಮಾಡಿ ಅವರ ಸ್ಥಾನ ತುಂಬಬಹುದೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ‘ತಂತ್ರಜ್ಞಾನದಿಂದಾಗಿ ಕೆಲಸಗಳು ಮಾಯವಾಗುವುದಿಲ್ಲ ಎಂಬುದನ್ನು ಇತಿಹಾಸವೇ ತೋರಿಸಿದೆ. ಕೆಲಸಗಳ ಸ್ವಭಾವ ಬದಲಾಗಬಹುದು ಹಾಗೂ ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದು’ ಎಂದರು.ಅಂತೆಯೇ, ‘ಇಂದು ಎಐ ರಾಜಕೀಯ, ಆರ್ಥಿಕತೆ, ಭದ್ರತೆ ಹಾಗೂ ಇಡೀ ಸಮಾಜಕ್ಕೇ ಹೊಸ ರೂಪ ನೀಡುತ್ತಿದೆ. ಇದರ ಬಳಕೆಯಿಂದ ಶಿಕ್ಷಣ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ತರಬಹುದು. ಸುಸ್ಥಿರತೆ ಸಾಧಿಸುವ ಕಡೆಗಿನ ಹಾದಿಯಲ್ಲಿ ವೇಗವಾಗಿ ಮುನ್ನಡೆಯಬಹುದು’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.