ಶಿಲ್ಪಾ ಶೆಟ್ಟಿ ದಂಪತಿಗೆ ಬಿಗ್ ಶಾಕ್‌ : ₹ 98 ಕೋಟಿ ಮೌಲ್ಯದ ಆಸ್ತಿ ಜಪ್ತಿ!

KannadaprabhaNewsNetwork | Updated : Apr 19 2024, 06:00 AM IST

ಸಾರಾಂಶ

ಮಂಗಳೂರು ಮೂಲದ ಪ್ರಸಿದ್ಧ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್‌ ಕುಂದ್ರಾ ದಂಪತಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಭರ್ಜರಿ ಶಾಕ್‌ ನೀಡಿದೆ.  

 ನವದೆಹಲಿ :  ಮಂಗಳೂರು ಮೂಲದ ಪ್ರಸಿದ್ಧ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್‌ ಕುಂದ್ರಾ ದಂಪತಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಭರ್ಜರಿ ಶಾಕ್‌ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಂಪತಿಗೆ ಸೇರಿದ 98 ಕೋಟಿ ರು. ಮೌಲ್ಯದ ಬಂಗಲೆ, ಫ್ಲ್ಯಾಟ್‌ ಹಾಗೂ ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಮುಂಬೈನ ಜುಹುನಲ್ಲಿ ಶಿಲ್ಪಾ ಶೆಟ್ಟಿ ಹೆಸರಿನಲ್ಲಿರುವ ಫ್ಲ್ಯಾಟ್‌, ಪುಣೆಯ ಬಂಗ್ಲೆ ಹಾಗೂ ಈಕ್ವಿಟಿ ಷೇರುಗಳನ್ನು ಇ.ಡಿ. ವಶಕ್ಕೆ ಪಡೆದಿದೆ. ಇವುಗಳ ಮೌಲ್ಯ 97.79 ಕೋಟಿ ರು. ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಶಿಲ್ಪಾ ದಂಪತಿ ಆಸ್ತಿ ಜಪ್ತಿ ಏಕೆ?:  ಬಿಟ್‌ ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳೂ ಶೇ.10ರಷ್ಟು ಲಾಭಾಂಶ ನೀಡುವುದಾಗಿ ವೇರಿಯಬಲ್‌ ಟೆಕ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸ್ಥಾಪಿಸಿದ್ದ ದಿವಂಗತ ಅಮಿತ್‌ ಭಾರದ್ವಾಜ್‌, ಅಜಯ್‌ ಭಾರದ್ವಾಜ್‌, ವಿವೇಕ್‌ ಭಾರದ್ವಾಜ್‌, ಮಹೇಂದರ್‌ ಭಾರದ್ವಾಜ್‌ ಎಂಬುವರು ಆಮಿಷವೊಡ್ಡಿದ್ದರು. ಇದೊಂದು ಮಲ್ಟಿ ಲೆವೆಲ್‌ ಮಾರ್ಕೆಟಿಂಗ್‌ ಯೋಜನೆಯಾಗಿತ್ತು.

ಆರಂಭಿಕ ತಿಂಗಳುಗಳಲ್ಲಿ ಲಾಭಾಂಶವನ್ನು ಈ ಕಂಪನಿ ನೀಡಿತ್ತು. ಬಳಿಕ ಹೆಚ್ಚು ಹೂಡಿಕೆದಾರರು ಸಿಗದ ಕಾರಣ ಲಾಭ ನೀಡುವುದನ್ನು ನಿಲ್ಲಿಸಿತ್ತು. ಅಷ್ಟರಲ್ಲಾಗಲೇ 6600 ಕೋಟಿ ರು.ಗಳನ್ನು ಕಂಪನಿ ಗಳಿಸಿತ್ತು. ಈ ಸಂಬಂಧ ಮಹಾರಾಷ್ಟ್ರ ಹಾಗೂ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ಇ.ಡಿ. ಪ್ರಕರಣಕ್ಕೆ ಪ್ರವೇಶ ಪಡೆದಿತ್ತು. ಈ ಅಕ್ರಮದಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಶಿಲ್ಪಾ ಶೆಟ್ಟಿ ಹಾಗೂ ರಾಜ್‌ ಕುಂದ್ರಾ ಹೇಳಿದ್ದರು..

ಕಂಪನಿಯ ಪ್ರವರ್ತಕ ಹಾಗೂ ಮಾಸ್ಟರ್‌ ಮೈಂಡ್‌ ಅಮಿತ್‌ ಭಾರದ್ವಾಜ್‌ ಉಕ್ರೇನ್‌ನಲ್ಲಿ ಬಿಟ್‌ಕಾಯಿನ್‌ ಮೈನಿಂಗ್‌ ಫಾರ್ಮ್‌ ಸ್ಥಾಪನೆ ಸಂಬಂಧ ರಾಜ್‌ ಕುಂದ್ರಾ ಅವರಿಗೆ 285 ಬಿಟ್‌ಕಾಯಿನ್‌ಗಳನ್ನು ನೀಡಿದ್ದ. ಆದರೆ ಈ ಡೀಲ್‌ ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದಾಗ್ಯೂ 150 ಕೋಟಿ ರು. ಮೌಲ್ಯದ ಬಿಟ್‌ಕಾಯಿನ್‌ಗಳನ್ನು ರಾಜ್‌ ಕುಂದ್ರಾ ತಮ್ಮ ಬಳಿಯೇ ಇಟ್ಟುಕೊಂಡಿರುವುದು ತನಿಖೆ ವೇಳೆ ತಿಳಿದುಬಂದಿತ್ತು. ಹೀಗಾಗಿ ಅವರ ಆಸ್ತಿಯನ್ನು ಇ.ಡಿ. ಜಪ್ತಿ ಮಾಡಿದೆ.

Share this article