ಹೈದರಾಬಾದ್: ವಂಚಕ ಟೋಪಿ ಸ್ಕೀಂಗಳ ವಿರುದ್ಧದ ತನಿಖೆ ಭಾಗವಾಗಿ, ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಆತನ ಖಾಸಗಿ ಬಿಸಿನೆಸ್ ಜೆಟ್ ಅನ್ನು ವಶಪಡಿಸಿಕೊಂಡಿದ್ದಾರೆ.
850 ಕೋಟಿ ರು. ಅಕ್ರಮವೆಸಗಿ ಹೂಡಿಕೆದಾರರನ್ನು ವಂಚಿಸಿದ ಹೈದರಾಬಾದ್ ಮೂಲದ ಫಾಲ್ಕನ್ ಗ್ರೂಪ್ ಕಂಪನಿ ಸಿಎಂಡಿ ಅಮರ್ ದೀಪ್ ಕುಮಾರ್ ವಿರುದ್ಧದ ತನಿಖೆ ವೇಳೆ ಈ ಕ್ರಮ ಕೈಗೊಳ್ಳಲಾಗಿದೆ. ಕಂಪನಿಯು ಹೆಚ್ಚಿನ ಆದಾಯದ ಆಮಿಷವೊಡ್ಡಿ ಹೂಡಿಕೆದಾರರಿಂದ 1,700 ಕೋಟಿ ರು. ಹಣ ಪಡೆದಿತ್ತು. ಆದರೆ ಕೇವಲ 850 ಕೋಟಿ ರು.ಗಳನ್ನು ಮರುಪಾವತಿಸಿದ್ದು, ಒಟ್ಟು 6,979 ಹೂಡಿಕೆದಾರರಿಗೆ ವಂಚನೆ ಎಸಗಿದೆ.
ಈ ಪ್ರಕರಣದಲ್ಲಿ ಕಂಪನಿಯ ಸಿಎಂಡಿ ಅಮರ್ ದೀಪ್ ಕುಮಾರ್ ಮತ್ತು ಇತರರ ವಿರುದ್ಧ ಸೈಬರಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಆದರೆ ಕುಮಾರ್ ಕಂಪನಿ ಒಡೆತನದ ವ್ಯಾಪಾರಿ ಜೆಟ್ ‘ಎನ್935ಎಚ್ ಹಾಕರ್ 800ಎ’ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವುದನ್ನು ಇ.ಡಿ. ಅಧಿಕಾರಿಗಳು ಕಂಡುಕೊಂಡಿದ್ದರು. ಅದರ ಬೆನ್ನಲ್ಲೆ ಜೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕುಮಾರ್ ಈ ಜೆಟ್ ಬಳಸಿ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉ.ಪ್ರ.ದಲ್ಲಿ ಹೋಳಿ ಕಾರಣ ನಮಾಜ್ ವೇಳೆ ಬದಲಾವಣೆ
ಲಖನೌ: ಈ ವರ್ಷ ಹೋಳಿ ಹಬ್ಬ ಮತ್ತು ರಂಜಾನ್ ತಿಂಗಳ ಶುಕ್ರವಾರದ ನಮಾಜ್ ಒಂದೇ ದಿನ ಬಂದಿರುವ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಲಖನೌ ಮತ್ತು ಸಂಭಲ್‌ನಲ್ಲಿ ನಮಾಜ್ ಸಮಯವನ್ನು ಮುಂದೂಡಲಾಗಿದೆ.
ಈ ಕುರಿತು ಲಖನೌ ಈದ್ಗಾದ ಇಮಾಮ್ ಮೌಲಾನಾ ಖಾಲಿದ್ ರಶೀದ್ ಮಹಾಲಿ ಹೇಳಿಕೆ ನೀಡಿ, ‘ಹೋಳಿ ಆಚರಣೆ ಮಧ್ಯಾಹ್ನ 1 ವೇಳೆಗೆ ಇರುತ್ತದೆ. ಆದರೆ ಅದೇ ವೇಳೆ ನಮಾಜ್ ಇರುವ ಕಾರಣ ನಮಾಜ್‌ಗೆ ಬರುವವರ ಮುಕ್ತ ಸಂಚಾರ ಕಷ್ಟವಾಗುತ್ತದೆ. ಹೀಗಾಗಿ ನಮಾಜನ್ನು 2 ಗಂಟೆಗೆ ಮುಂದೂಡಿದರೆ ಉತ್ತಮ’ ಎಂದು ಸಲಹೆ ನೀಡಿದ್ದಾರೆ.ಇದೇ ವಿಚಾರ ಸಂಬಂಧ ಸಂಭಲ್ ಎಸ್ಪಿ ಕೂಡ ನಿರ್ದೇಶನ ಹೊರಡಿಸಿದ್ದು, ‘ಮಧ್ಯಾಹ್ನ 2.30ರವರೆಗೆ ಹೋಳಿ ಆಚರಣೆಗಳು ನಡೆಯುತ್ತವೆ. ಆ ಬಳಿಕ ಮುಸ್ಲಿಮರು ನಮಾಜ್ ಮಾಡಬೇಕು’ ಎಂದು ತಿಳಿಸಿದ್ದಾರೆ.
ಮುಸ್ಲಿಂ ವಿವಿಯಲ್ಲೂ ಹೋಳಿ:ಅಲಿಗಢ ಮುಸ್ಲಿಂ ವಿವಿಯಲ್ಲಿ ಹೋಳಿ ಆಚರಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಹಿಂದೂ ವಿದ್ಯಾರ್ಥಿಗಳು ಪ್ರತಿಭಟಿಸಿದ ಬೆನ್ನಲ್ಲೆ, ವಿವಿಯಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಹೋಳಿ ಆಚರಿಸಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಆಪ್ತ ಮಸ್ಕ್ ರೆಕ್ಕೆಗೆ ಅಧ್ಯಕ್ಷ ಟ್ರಂಪ್ ಕತ್ತರಿ!
ವಾಷಿಂಗ್ಟನ್: ಚುನಾವಣೆ ಪ್ರಚಾರದಿಂದ ಹಿಡಿದು ಅಧಿಕಾರಕ್ಕೇರಿದ ಬಳಿಕವೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತರಾಗಿರುವ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ರೆಕ್ಕೆಗೆ ಸ್ವತಃ ಟ್ರಂಪ್ ಅವರೇ ಕತ್ತರಿ ಹಾಕಿದ್ದಾರೆ.ಮಸ್ಕ್ ಅವರೂ ಉಪಸ್ಥಿತರಿದ್ದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಟ್ರಂಪ್, ‘ತಮ್ಮ ತಮ್ಮ ಇಲಾಖೆಗಳ ಸಿಬ್ಬಂದಿ ಹಾಗೂ ನೀತಿ ರೂಪಿಸುವ ಅಧಿಕಾರ ಇಲಾಖಾ ಕಾರ್ಯದರ್ಶಿಗಳಿಗೆ ಮಾತ್ರ ಇದೆ. ಮಸ್ಕ್‌ಗೆ ಇಲ್ಲ’ ಎಂದರು. ಈ ಮೂಲಕ, ಸರ್ಕಾರದ ನಿರ್ಧಾರ ಕೈಗೊಳ್ಳುವಲ್ಲಿ ಅಥವಾ ನೀತಿ ರೂಪಿಸುವಲ್ಲಿ ಮಸ್ಕ್‌ಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದಂತಾಗಿದೆ.
ಟ್ರಂಪ್ ಅಧಿಕಾರಕ್ಕೇರುತ್ತಿದ್ದಂತೆ ಅಮೆರಿಕ ಸರ್ಕಾರದ ದಕ್ಷತೆ ಇಲಾಖೆ(ಡಾಜ್) ಎಂಬ ಹೊಸ ಹುದ್ದೆ ಸೃಷ್ಟಿಸಿದ್ದು, ಅದಕ್ಕೆ ಮಸ್ಕ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಇದನ್ನು ಬಳಸಿಕೊಂಡ ಮಸ್ಕ್, ವೆಚ್ಚ ಕಡಿತ ಮಾಡುವ ಸಲುವಾಗಿ ಸರ್ಕಾರಿ ನೌಕರರ ವಜಾ ಮಾಡಲು ಮುಂದಾಗಿದ್ದರು. ಅವರ ಇಂತಹ ನಿರ್ಧಾರಗಳಿಗೆ ಟ್ರಂಪ್ ಪರೋಕ್ಷ ಬ್ರೇಕ್ ಹಾಕಿದಂತಾಗಿದೆ.
ಜಿಎಸ್‌ಟಿ ದರ ಇನ್ನಷ್ಟು ಇಳಿಯಲಿದೆ: ವಿತ್ತ ಸಚಿವೆ
ಮುಂಬೈ: ‘ಜಿಎಸ್‌ಟಿ ದರಗಳು ಮತ್ತಷ್ಟು ಇಳಿಕೆಯಾಗಲಿವೆ. ತೆರಿಗೆ ದರಗಳು ಮತ್ತು ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಕೆಲಸವು ಬಹುತೇಕ ಅಂತಿಮ ಹಂತವನ್ನು ತಲುಪಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಶನಿವಾರ ಸಭೆಯೊಂದರಲ್ಲಿ ಮಾತನಾಡಿರುವ ಅವರು, ‘2017ರ ಜುಲೈ 1 ರಂದು ಜಿಎಸ್‌ಟಿ ಜಾರಿಗೆ ಬಂದ ಸಮಯದಲ್ಲಿ ಶೇ.15.8ರಷ್ಟಿದ್ದ ತಟಸ್ಥ ಆದಾಯ ದರ (ಅರ್‌ಎನ್‌ಆರ್) 2-23ರಲ್ಲಿ ಶೇ.11.4ಕ್ಕೆ ಇಳಿದಿದೆ, ಇದು ಇನ್ನೂ ಕೆಳಗೆ ಇಳಿಯುತ್ತದೆ’ ಎಂದರು.
ಇದೇ ವೇಳೆ ‘ ಈ ಹಂತದಲ್ಲಿ ಸಚಿವರ ಗುಂಪು (ಜಿಒಎಂ) ಅತ್ಯುತ್ತಮ ಕೆಲಸ ಮಾಡಿದೆ. ದರ ತರ್ಕಬದ್ಧಗೊಳಿಸುವಿಕೆ ಕುರಿತು ಇನ್ನೂ ಕೆಲಸಗಳು ಆಗಬೇಕಿದೆ. ನಾವು ಇದನ್ನು ಮುಂದಿನ ಕೌನ್ಸಿಲ್ ಸಭೆಗೆ ಕೊಂಡೊಯ್ಯುತ್ತೇವೆ. ಜಿಎಸ್‌ಟಿ ದರ ಕಡಿತ, ದರಗಳ ತರ್ಕಬದ್ಧಗೊಳಿಸುವಿಕೆ, ಸ್ಲ್ಯಾಬ್‌ಗಳ ಸಂಖ್ಯೆ ನೋಡುವುದು ಇತ್ಯಾದಿ ಕೆಲವು ನಿರ್ಣಾಯಕ ವಿಷಯಗಳ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ತುಂಬಾ ಹತ್ತಿರದಲ್ಲಿದ್ದೇವೆ’ ಎಂದು ಹೇಳಿದರು.
ಜಮ್ಮುವಿನಲ್ಲಿ ನಾಪತ್ತೆ ಆಗಿದ್ದ ಮೂವರ ಶವ ನಿಗೂಢ ರೀತಿ ಪತ್ತೆ
ಜಮ್ಮು: ಜಮ್ಮು-ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಮದುವೆಗೆ ಹೋಗುತ್ತಿದ್ದಾಗ ನಾಪತ್ತೆಯಾಗಿದ್ದ ಹದಿಹರೆಯದ ಬಾಲಕ ಸೇರಿದಂತೆ ಮೂವರ ಶವಗಳು ಶನಿವಾರ ನಿಗೂಢ ರೀತಿ ಪತ್ತೆಯಾಗಿವೆ. ಪೊಲೀಸರು ಮತ್ತು ಸೇನೆ ನಡೆಸಿದ ಜಂಟಿ ಶೋಧದ ವೇಳೆ ಮಲ್ಹಾರ್ ಪ್ರದೇಶದಲ್ಲಿ ವರುಣ್ ಸಿಂಗ್ (15), ಅವರ ಚಿಕ್ಕಪ್ಪ ಯೋಗೇಶ್ ಸಿಂಗ್ (32) ಮತ್ತು ಮಾವ ದರ್ಶನ್ ಸಿಂಗ್ (40) ಅವರ ಶವಗಳನ್ನು ಡ್ರೋನ್ ಮೂಲಕ ಪತ್ತೆ ಮಾಡಲಾಗಿದೆ.
ಮೃತದೇಹಗಳ ಮೇಲೆ ಯಾವುದೇ ಗಾಯದ ಲಕ್ಷಣಗಳು ಕಾಣದ ಕಾರಣ, ಭಯೋತ್ಪಾದಕ ಕೃತ್ಯ ಸಾಧ್ಯತೆ ತಳ್ಳಿಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ನಿರ್ಧರಿಸಲಾಗುತ್ತದೆ.