ಪ್ರೇಯಸಿಯ ಸಹಾಯದಿಂದ ಮೆಕ್ಸಿಕೋ ಡ್ರಗ್ಸ್‌ ಲಾರ್ಡ್‌ ಬಲೆಗೆ

KannadaprabhaNewsNetwork |  
Published : Feb 25, 2026, 01:15 AM IST
ಮೆಂಚೋ | Kannada Prabha

ಸಾರಾಂಶ

ದಶಕಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಮೆಕ್ಸಿಕೋದ ಡ್ರಗ್ಸ್‌ ದೊರೆ ಎಲ್‌ ಮೆಂಚೋ ಅಂತ್ಯಕ್ಕೆ ಕಾರಣವಾಗಿದ್ದು ಆತನ ಪ್ರಣಯ ಸಂಗಾತಿ ಎಂಬ ಕುತೂಹಲಕರ ಮಾಹಿತಿ ಲಭ್ಯವಾಗಿದೆ.

ದಶಕದಿಂದ ತಲೆಮರೆಸಿಕೊಂಡಿದ್ದ

ಕೊನೆಗೆ ಪ್ರೇಯಸಿಯಿಂದಾಗಿ ಸಿಕ್ಕಿಬಿದ್ದಮೆಕ್ಸಿಕೋ ಸಿಟಿ: ದಶಕಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಮೆಕ್ಸಿಕೋದ ಡ್ರಗ್ಸ್‌ ದೊರೆ ಎಲ್‌ ಮೆಂಚೋ ಅಂತ್ಯಕ್ಕೆ ಕಾರಣವಾಗಿದ್ದು ಆತನ ಪ್ರಣಯ ಸಂಗಾತಿ ಎಂಬ ಕುತೂಹಲಕರ ಮಾಹಿತಿ ಲಭ್ಯವಾಗಿದೆ.ಆತನ ಪ್ರಣಯ ಸಂಗಾತಿಯ ಚಲನವಲನಗಳಿಂದ ಸಂಗ್ರಹಿಸಲಾದ ಗುಪ್ತಚರ ಮಾಹಿತಿಯು ಆತನ ಸ್ಥಳ ಪತ್ತೆ ಮಾಡಲು ನೆರವಾಯಿತು. ಅಲ್ಲಿಗೆ ತೆರಳಿದ ಭದ್ರತಾ ಸಿಬ್ಬಂದಿ ಆತನ ಮೇಲೆ ಗುಂಡಿನ ದಾಳಿ ನಡೆಸಿ ಬಲೆಗೆ ಕೆಡವಿದರು ಎಂದು ತಿಳಿದುಬಂದಿದೆ.ಎಲ್ ಮೆಂಚೋ ತನ್ನ ಪ್ರೇಯಸಿಯೊಂದಿಗೆ ರಹಸ್ಯ ಅಡಗುತಾಣವನ್ನು ಹೊಂದಿದ್ದ. ತಪಾಲ್ಪಾ ಎಂಬಲ್ಲಿನ ರೆಸಾರ್ಟ್‌ನಲ್ಲಿ ತಂಗಿದ್ದ. ಭಾನುವಾರದ ದಾಳಿಗೆ ಮುನ್ನ ಏಜೆಂಟರು ಎಲ್ ಮೆಂಚೋಳ ಗೆಳತಿಯ ಹತ್ತಿರವಿರುವ ವ್ಯಕ್ತಿಯನ್ನು ಗುರುತಿಸಿದ್ದರು. ಆತನ ಮೂಲಕ ಮೆಂಚೋ ಹಾಗೂ ಗೆಳತಿ ಒಟ್ಟಿಗಿದ್ದಾರೆ ಎಂದು ಖಚಿತಪಡಿಸಿಕೊಂಡಿದ್ದರು. ಗೆಳತಿ ರೆಸಾರ್ಟ್‌ನಿಂದ ಹೊರಬಂದ ನಂತರ ಕಾರ್ಯಾಚರಣೆ ಪ್ರಾರಂಭವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

==

ನಕ್ಸಲ್‌ ನಾಯಕ ದೇವಜಿ ಶರಣು ಈಗ ಅಧಿಕೃತ

43 ವರ್ಷದಿಂದ ನಕ್ಸಲ್‌ ಸಂಘಟನೆಯಲ್ಲಿ ಸಕ್ರಿಯ

ದಶಕಗಳ ಕಾಲ ಭೂಗತನಾಗಿದ್ದ ತಿಪ್ಪಿರಿ ತಿರುಪತಿ

ಬಸವರಾಜು ಸಾವಿನ ಬಳಿಕ ಸಂಘಟನೆ ನೇತೃತ್ವ

ಹೈದರಾಬಾದ್‌: ದೇಶ ನಕ್ಸಲ್‌ ನಿಗ್ರಹದತ್ತ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ತೆಲಂಗಾಣದಲ್ಲಿ ನಿಷೇಧಿತ ನಕ್ಸಲ್‌ ಸಂಘಟನೆ ಸಿಪಿಐನ ಉನ್ನತ ನಾಯಕ ತಿಪ್ಪರಿ ತಿರುಪತಿ ಅಲಿಯಾಸ್‌ ದೇವಜಿ ಪೊಲೀಸರಿಗೆ ಅಧಿಕೃತವಾಗಿ ಶರಣಾಗಿದ್ದಾನೆ. 4 ದಶಕ ಮಾವೋವಾದಿ ಸಂಘಟನೆಯಲ್ಲಿದ್ದ ಈತ ತಲೆಗೆ 1.5 ಕೋಟಿ ರು. ಇನಾಮು ಹೊಂದಿದ್ದ.ಕಳೆದ ವರ್ಷ ನಕ್ಸಲ್‌ ಗುಂಪಿನ ಪ್ರಮುಖ ನಾಯಕ ಬಸವರಾಜು ಹತ್ಯೆ ಬಳಿಕ 65 ವರ್ಷದ ದೇವಜಿ ಸಿಪಿಐನ ಸಂಪೂರ್ಣ ನೇತೃತ್ವ ವಹಿಸಿಕೊಂಡಿದ್ದ. ಆದರೆ ಇದೀಗ ಶರಣಾಗತಿ ಬಳಿಕ ಮಾವೋವಾದಿಗಳ ಸಂಘಟನೆಗೆ ಬಹುದೊಡ್ಡ ಹೊಡೆತ ಬಿದ್ದಂತಾಗಿದೆ. ಈತನ ಜತೆಗೆ ಮತ್ತೊಬ್ಬ ಹಿರಿಯ ನಕ್ಸಲ್‌ ನಾಯಕ ಮಲ್ಲ ರಾಜಿ ರೆಡ್ಡಿ, ಜಗನ್‌, ಗಂಗಣ್ಣ ಎನ್ನುವ ನಕ್ಸಲರೂಶರಣಾಗಿದ್ದಾರೆ. ಈ ಮೂಲಕ ನಕ್ಸಲ್‌ ಸಂಘಟನೆಯ ಪಾಲಿಟ್‌ಬ್ಯೂರೋ ಮತ್ತು ಕೇಂದ್ರ ಸಮಿತಿಯ ಪ್ರಮುಖ ನಾಯಕರೇ ಹೊರ ಬಂದಂತಾಗಿದೆ.

ರಾಜಕೀಯ ಜೀವನ:‘ಇನ್ನು ನಾನು ಭೂಗತ ಲೋಕ ಬಿಡಲಿದ್ದು, ಮುಖ್ಯವಾಹಿನಿಗೆ ಬರುವೆ. ವೈಯಕ್ತಿಕವಾಗಿ ನನಗೆ ಏನೂ ಬೇಕಿಲ್ಲ. ರಾಜಕೀಯ ಜೀವನ ನಡೆಸುವೆ’ ಎಂದು ದೇವಜಿ ಸುದ್ದಿಗಾರರಿಗೆ ತಿಳಿಸಿದ

==

ದೇಗುಲದ ಭಾಗ ಬಳಸಿ ಭೋಜಶಾಲಾ ಮಸೀದಿ ನಿರ್ಮಾಣ!

ಮಸೀದಿಯಲ್ಲಿ ಭೋಜರಾಜನ ಕಾಲದ ಅವಶೇಷಗಳು ಪತ್ತೆ

ಪುರಾತತ್ವ ಇಲಾಖೆಯಿಂದ ಬಹಿರಂಗ

ಕೋರ್ಟ್‌ಗೆ 2,000 ಪುಟಗಳ ವರದಿ ಸಲ್ಲಿಕೆ

ಆಕ್ಷೇಪಣೆಗೆ 2 ವಾರ ಅವಕಾಶ । ಮಾ.16ಕ್ಕೆ ವಿಚಾರಣೆ

ಇಂದೋರ್‌: ಮಧ್ಯಪ್ರದೇಶದ ಧಾರ್‌ ಎಂಬಲ್ಲಿನ ಭೋಜಶಾಲಾ ಸಂಕೀರ್ಣದಲ್ಲಿರುವ ಕಮಲ್‌ ಮೌಲಾ ಮಸೀದಿಯನ್ನು ಪುರಾತನ ದೇಗುಲಗಳ ಪಳೆಯುಳಿಕೆಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ತಿಳಿಸಿದೆ. ಇದು ಭೋಜಶಾಲಾ ಮಂದಿರ-ಮಸೀದಿ ವಿವಾದಕ್ಕೆ ಹೊಸ ಟ್ವಿಸ್ಟ್‌ ನೀಡಿದೆ.

ವೈಜ್ಞಾನಿಕ ತನಿಖೆ, ಸಮೀಕ್ಷೆ, ಉತ್ಖನನ, ವಾಸ್ತುಶಿಲ್ಪ ಅವಶೇಷ, ಶಾಸನ, ಕಲೆ, ಶಿಲ್ಪಗಳ ಅಧ್ಯಯನದ ಆಧಾರದಲ್ಲಿ ಎಎಸ್‌ಐ ಸಿದ್ಧಪಡಿಸಿರುವ 2,000 ಪುಟಗಳ 10 ಕಂತುಗಳ ವರದಿಯನ್ನು 2024ರಲ್ಲಿ ಹೈಕೋರ್ಟ್‌ನ ಇಂದೋರ್‌ ಪೀಠಕ್ಕೆ ಸಲ್ಲಿಸಲಾಗಿತ್ತು. ಇದರ ವಿಚಾರಣೆಯನ್ನು ಸೋಮವಾರ ಆರಂಭಿಸಿರುವ ಪೀಠ, ವರದಿಯು ಎಲ್ಲರಿಗೆ ಲಭ್ಯವಾಗುವಂತೆ ಮಾಡಲು ಸೂಚಿಸಿದೆ. ಅಂತೆಯೇ ಈ ಬಗೆಗಿನ ಅಭಿಪ್ರಾಯ, ಆಕ್ಷೇಪ ಇತ್ಯಾದಿಗಳ ಸಲ್ಲಿಕೆಗೆ 2 ವಾರಗಳ ಕಾಲಾವಕಾಶ ನೀಡಿದ್ದು, ವಿಚಾರಣೆಯನ್ನು ಮಾ.16ಕ್ಕೆ ನಿಗದಿಪಡಿಸಿದೆ.ಇದಕ್ಕೆ ಹಿಂದೂ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ.

ವರದಿಯಲ್ಲೇನಿದೆ?:ಎಎಸ್‌ಐ ತಯಾರಿಸಿರುವ ವರದಿಯ ಪ್ರಕಾರ ಮಸೀದಿಯನ್ನು ಅದಾಗಲೇ ಇದ್ದ ಕಂದುಬಣ್ಣದ ಅಗ್ನಿಶಿಲೆಯ ಮೇಲೆ ನಿರ್ಮಿಸಲಾಗಿದೆ. ಈ ಶಿಲೆಗಳ ಅಡಿಯಲ್ಲಿ 10-11ನೇ ಶತಮಾನದ ಪರಮಾರ ರಾಜ ಭೋಜನ ಕಾಲದ ಅವಶೇಷಗಳಿವೆ. ಅಂತೆಯೇ 188 ಸ್ತಂಭಗಳು, 94 ದೇವತೆಗಳ ವಿಗ್ರಹಗಳು ಕೂಡ ದೊರಕಿವೆ.

ವಿವಾದ ಏನು?:

ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿತವಾದ 11ನೇ ಶತಮಾನದ ಈ ಕಟ್ಟಡವನ್ನು ಹಿಂದೂಗಳು ಸರಸ್ವತಿ ದೇವಾಲಯ ಎಂದು ಕರೆಯುತ್ತಾರೆ. ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಭಾವಿಸುತ್ತಾರೆ. ಕೋರ್ಟ್‌ ಆದೇಶಾನುಸಾರ 2003ರಿಂದ ಭೋಜ್‌ಶಾಲಾ ಸಂಕೀರ್ಣದಲ್ಲಿ ಹಿಂದೂಗಳು ಮಂಗಳವಾರ ಪೂಜೆ ಸಲ್ಲಿಸುತ್ತಾರೆ. ಮುಸ್ಲಿಮರು ಶುಕ್ರವಾರ ನಮಾಜ್ ಮಾಡುತ್ತಾರೆ.

==

ನಕಲಿ ತುಪ್ಪ ಬಳಸಿ 20 ಕೋಟಿ ಲಡ್ಡು ತಯಾರಿ: ನಾಯ್ಡು

ಜಗನ್‌ ಅವಧಿಯಲ್ಲಿ 60 ಲಕ್ಷ ಕೇಜಿ ನಕಲಿ ತುಪ್ಪ ಬಳಕೆ

ಕಲಬೆರಕೆ ತುಪ್ಪಕ್ಕೆ ಟಿಟಿಡಿ ₹235 ಕೋಟಿ ವ್ಯಯ

ಅಕ್ರಮದಲ್ಲಿ ಸಂಘಟಿತ ಜಾಲದ ಪಿತೂರಿ, ಇದು ಧರ್ಮನಿಂದನೆ: ಸಿಎಂ

ಪಿಟಿಐ ಅಮರಾವತಿ

‘ಹಿಂದಿನ ವೈಎಸ್‌ಆರ್‌ಸಿಪಿ ಅವಧಿಯಲ್ಲಿ, ತಿರುಪತಿ ದೇವಸ್ಥಾನದಲ್ಲಿ 20 ಕೋಟಿಗೂ ಹೆಚ್ಚು ಲಡ್ಡುಗಳನ್ನು ತಯಾರಿಸಲು ಸುಮಾರು 60 ಲಕ್ಷ ಕೆ.ಜಿ. ಕಲಬೆರಕೆ ತುಪ್ಪವನ್ನು ಬಳಸಲಾಗಿದೆ. ದೇವಾಲಯದ ಉಸ್ತುವಾರಿ ವಹಿಸಿಕೊಂಡಿರುವ ಟಿಟಿಡಿ ಕಲಬೆರಕೆ ತುಪ್ಪವನ್ನು ಸಂಗ್ರಹಿಸಲು ಸುಮಾರು 234.51 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಇದರಲ್ಲಿ ಸಂಘಟಿತ ಜಾಲ ಭಾಗಿಯಾಗಿದೆ. ಇದು ದೈವನಿಂದನೆ ಮಾಡಿದಂತೆ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮಂಗಳವಾರ ಆರೋಪಿಸಿದ್ದಾರೆ.ವಿವಾದ ಸಂಬಂಧ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಕಲಬೆರಕೆ ತುಪ್ಪ ಪೂರೈಕೆ ವಿಷಯದಲ್ಲಿ ಪಿತೂರಿಯ ಕೋನವೂ ಇದೆ. ದುಷ್ಕರ್ಮಿಗಳು ಒಂದು ಜಾಲವಾಗಿ ಕೆಲಸ ಮಾಡಿದ್ದರು. ಇವೆಲ್ಲವೂ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಸಾಬೀತಾಗಿವೆ. ಟಿಟಿಡಿಗೆ 59.71 ಲಕ್ಷ ಕೆ.ಜಿ. ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿದೆ. 2019ರಿಂದ 2024ರ ನಡುವೆ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಆಳ್ವಿಕೆಯಲ್ಲಿ ಕಲಬೆರಕೆ ತುಪ್ಪವನ್ನು ಬಳಸಿ 20 ಕೋಟಿಗೂ ಹೆಚ್ಚು ಲಡ್ಡುಗಳನ್ನು ತಯಾರಿಸಲಾಗಿದೆ. ಇದಕ್ಕಾಗಿ ಟಿಟಿಡಿ ಸುಮಾರು 234.51 ಕೋಟಿ ರು. ಖರ್ಚು ಮಾಡಿದೆ’ ಎಂದು ಆರೋಪಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಐತಿಹಾಸಿಕ ರಣಜಿ ಕಿರೀಟ ಮೇಲೆ ಕರ್ನಾಟಕ ಕಣ್ಣು
26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ