ಕೊಲ್ಹಾಪುರ : ಕೊಲ್ಹಾಪುರದ ಜೈನಮಠದ ಆನೆಯನ್ನು ಅನಂತ್ ಅಂಬಾನಿ ನಿರ್ವಹಿಸುತ್ತಿರುವ ಗುಜರಾತ್‌ನ ವನತಾರಾ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿರುವುದಕ್ಕೆ ಮಹಾರಾಷ್ಟ್ರದ ಜೈನ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆಕ್ರೋಶ ತೀವ್ರವಾದ ಬೆನ್ನಲ್ಲೇ, ಆನೆಯನ್ನು ಪುನಃ ಕೊಲ್ಹಾಪುರಕ್ಕೆ ತರಲು ಪ್ರಯತ್ನ ನಡೆಸುತ್ತಿರುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
‘ಕೊಲ್ಹಾಪುರ ಜಿಲ್ಲೆಯ ಬಿಜೆಪಿ ಸಂಸದ ಧನಂಜಯ ಮಹಾದಿಕ್ ಹಾಗೂ ಶಿವಸೇನೆ ಸಂಸದ ಧೈರ್ಯಶೀಲ ಮಾನೆ, ಇಬ್ಬರೂ ಆನೆಯನ್ನು ಮರಳಿ ಕೊಲ್ಹಾಪುರಕ್ಕೆ ಕಳಿಸಲು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸುವಂತೆ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಸಹಕಾರ ನೀಡುವುದಾಗಿ ವನತಾರದ ಅಧಿಕಾರಿಗಳು ಸಹ ಭರವಸೆ ನೀಡಿದ್ದಾರೆ’ ಎಂದು ಮಹಾರಾಷ್ಟ್ರ ಸಚಿವ ಪ್ರಕಾಶ್ ಅಬಿತ್ಕರ್ ತಿಳಿಸಿದ್ದಾರೆ.
ಏನಿದು ಪ್ರಕರಣ?:
ಕರ್ನಾಟಕದಲ್ಲಿ ಜನಿಸಿತ್ತು ಎನ್ನಲಾದ 36 ವರ್ಷದ ‘ಮಹಾದೇವಿ’ (ಮಾಧುರಿ) ಎಂಬ ಆನೆ 30 ವರ್ಷಗಳಿಂದ ಕೊಲ್ಹಾಪುರದ ನಾಂದಣಿಯ ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಜೈನಮಠದಲ್ಲಿತ್ತು. ‘ಆನೆಯ ಆರೋಗ್ಯ ಹದಗೆಟ್ಟಿದ್ದು, ಅದರ ಮಾನಸಿಕ ಸ್ಥಿಮಿತ ತಪ್ಪಿದೆ, ಹಾಗಾಗಿ ಅದನ್ನು ಬೇರೆಡೆ ಸ್ಥಳಾಂತರಿಸಬೇಕು’ ಎಂದು ಪ್ರಾಣಿದಯಾ ಸಂಸ್ಥೆಯೊಂದು ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಈ ವಿಚಾರವಾಗಿ ಜು.16ರಂದು ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್, ಗುಜರಾತ್‌ನ ವನತಾರಾ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಆನೆಗೆ ಪುನರ್ವಸತಿ ನೀಡುವಂತೆ ಆದೇಶಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿತ್ತು. ಅದರಂತೆ ಆನೆಯನ್ನು ವನತಾರಕ್ಕೆ ಕಳಿಸಲಾಗಿದೆ.
ಜೈನರ ಆಕ್ರೋಶ:
ಆದರೆ ಇದರಿಂದ ತಮ್ಮ ಧಾರ್ಮಿಕ ನಂಬಿಕೆಗೆ ಘಾಸಿಯಾಗಿದೆ, ಆನೆಯನ್ನು ಮರಳಿ ಮಠಕ್ಕೆ ಒಪ್ಪಿಸಬೇಕು ಎಂದು ಜೈನ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಹಲವರು ತಮ್ಮ ಮೊಬೈಲ್ ಸಿಮ್‌ಗಳನ್ನು ಜಿಯೋದಿಂದ ಬೇರೆಯದಕ್ಕೆ ಬದಲಾಯಿಸಿ ಆಕ್ರೋಶ ಹೊರಹಾಕಿದ್ದಾರೆ. ಆನೆಯ ಹಸ್ತಾಂತರಕ್ಕೆ ಆಗ್ರಹಿಸಿ ಸುಮಾರು 1.25 ಲಕ್ಷಕ್ಕೂ ಅಧಿಕ ಮಂದಿ ರಾಷ್ಟ್ರಪತಿಯವರಿಗೆ ಕಳಿಸಲಿರುವ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಕರ್ನಾಟಕದ ಆನೆ
ಮಹಾದೇವಿ ಹೆಸರಿನ ಆನೆ 3 ವರ್ಷವಿದ್ದಾಗ ಕರ್ನಾಟಕದಲ್ಲಿತ್ತು. ಆ ಬಳಿಕ 1992ರಲ್ಲಿ ಕೊಲ್ಹಾಪುರ ಮಠಕ್ಕೆ ಹಸ್ತಾಂತರಿಸಲಾಗಿತ್ತು. 30 ವರ್ಷಗಳಿಂದ ಕೊಲ್ಹಾಪುರದ ಮಠದಲ್ಲಿಯೇ ಅದರ ಆರೈಕೆ ನಡೆಯುತ್ತಿತ್ತು.