ತುರ್ತುಸ್ಥಿತಿ ದೇಶಕ್ಕೆ ಕಪ್ಪುಚುಕ್ಕೆ: ಮೋದಿ

ಸಾರಾಂಶ

ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯ 50ನೇ ವರ್ಚಾಚರಣೆ ಜೂ.25ಕ್ಕೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ‘ಸಂವಿಧಾನವನ್ನು ತಿರಸ್ಕರಿಸಿದ ಆ ನಡೆ ಭಾರತದ ಇತಿಹಾಸಕ್ಕೆ ಕಪ್ಪುಚುಕ್ಕೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ನವದೆಹಲಿ : ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯ 50ನೇ ವರ್ಚಾಚರಣೆ ಜೂ.25ಕ್ಕೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ‘ಸಂವಿಧಾನವನ್ನು ತಿರಸ್ಕರಿಸಿದ ಆ ನಡೆ ಭಾರತದ ಇತಿಹಾಸಕ್ಕೆ ಕಪ್ಪುಚುಕ್ಕೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ರಾಜ್ಯಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕರು ತಿರುಗೇಟು ನೀಡಿ, ‘ಕಳೆದ 10 ವರ್ಷ ಅಘೋಷಿತ ತುರ್ತುಸ್ಥಿತಿ ಇತ್ತು’ ಎಂದು ಚಾಟಿ ಬೀಸಿದ್ದಾರೆ.

  • ಸಂಸತ್‌ ಅಧಿವೇಶನದ ಆರಂಭದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ‘1975ರಲ್ಲಿ ಹೇರಲಾಗಿದ್ದ ತುರ್ತುಸ್ಥಿತಿಗೆ ಜೂ.25ರಂದು 50 ವರ್ಷ ಆಗಲಿದೆ. ತುರ್ತುಸ್ಥಿತಿಯು ದೇಶಕ್ಕೆ ಒಂದು ಕಪ್ಪುಚುಕ್ಕೆ. ಏಕೆಂದರೆ ಸಂವಿಧಾನವನ್ನೇ ಆಗ ಕಿತ್ತೆಸೆಯಲಾಗಿತ್ತು’ ಎಂದರು.

ಇದಕ್ಕೆ ಟ್ವೀಟರ್‌ನಲ್ಲಿ ತಿರುಗೇಟು ನೀಡಿದ ಖರ್ಗೆ, ‘ನೀವು ನಮಗೆ 50 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದ್ದೀರಿ. ಆದರೆ ಕಳೆದ 10 ವರ್ಷಗಳ ಕಾಲ ಅಘೋಷಿತ ತುರ್ತುಸ್ಥಿತಿ ಇತ್ತು. ಈಗ ಜನರೇ ಅದನ್ನು ತಿರಸ್ಕರಿಸಿ ಮೋದಿ ವಿರುದ್ಧ ಜನಾದೇಶ ನೀಡಿದ್ದಾರೆ. ಹೀಗಿದ್ದರೂ ಅವರು ನಮಗೆ ಪಾಠ ಮಾಡುತ್ತಿದ್ದಾರೆ. ಮೋದಿ ನೈತಿಕ ಮತ್ತು ರಾಜಕೀಯ ಸೋಲನ್ನು ಅನುಭವಿಸಿದ ನಂತರವೂ ಅವರಲ್ಲಿ ದುರಹಂಕಾರ ಹಾಗೆಯೇ ಉಳಿದಿದೆ’ ಎಂದು ಛೇಡಿಸಿದ್ದಾರೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮಾತನಾಡಿ, ‘ಬಿಜೆಪಿ ಸಂವಿಧಾನ ವಿರೋಧಿ ಎಂದು ಜನರಿಗೆ ಗೊತ್ತಾಯಿತು. ಹೀಗಾಗಿ ಅದಕ್ಕೆ ಜನತೆ ಬಹುಮತ ನೀಡಲಿಲ್ಲ. ನಾನು ತುರ್ತುಸ್ಥಿತಿ ವೇಳೆ ಇನ್ನೂ ಹುಟ್ಟಿರಲಿಲ್ಲ. ಆದರೆ ಕಳೆದ 10 ವರ್ಷದ ಮೋದಿ ಆಡಳಿತದಲ್ಲಿ ಅದು ನನಗೆ ಅನುಭವವಾಯಿತು’ ಎಂದಿದ್ದಾರೆ. ಇದೇ ವೇಳೆ ಅನೇಕ ವಿಪಕ್ಷ ನಾಯಕರು ಮೋದಿ ಹೇಳಿಕೆ ಖಂಡಿಸಿದ್ದಾರೆ.

Share this article